ಬೆಳಗಾವಿ,ಡಿ.14- ಇಂದು ಮತ್ತು ನಾಳೆ ಸರ್ಕಾರಿ ರಜೆ ಇರುವ ಹಿನ್ನೆಯಲ್ಲಿ ವಿಧಾನ ಮಂಡಲದ ಚಳಿಗಾಲದ ಅಧಿವೇಶನ ನಡೆಯುವುದಿಲ್ಲ. ಹೀಗಾಗಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಬಹುತೇಕ ಅಧಿಕಾರಿಗಳು, ನೌಕರರು, ಸಾರ್ವಜನಿಕರು ಯಾತ್ರಾಸ್ಥಳಗಳತ್ತ ತೆರಳಿದ್ದಾರೆ.
ನಿನ್ನೆ ಅಧಿವೇಶನ ಮುಗಿದ ಬಳಿಕ ತುರ್ತು ಕಾರ್ಯವಿದ್ದ ಕೆಲವರು ತಮ ಊರುಗಳತ್ತ ಪ್ರಯಾಣ ಮಾಡಿದ್ದಾರೆ. ಚಳಿಗಾಲದ ಅಧಿವೇಶನಕ್ಕೆ ಆಗಮಿಸಿದ್ದ ಬಹಳಷ್ಟು ಶಾಸಕರು, ಸಚಿವರು ಪೂರ್ವ ನಿಯೋಜಿತ ಕಾರ್ಯಗಳಲ್ಲಿ ಭಾಗವಹಿಸಿದ್ದಾರೆ. ಕೆಲವರು ಕ್ಷೇತ್ರಗಳತ್ತ ತೆರಳಿದ್ದಾರೆ. ಈ ನಡುವೆ ಕೊಲ್ಲಾಪುರದ ಲಕ್ಷೀ ದೇವಿಯ ದರ್ಶನ ಪಡೆದಿದ್ದಾರೆ.
ಅಧಿಕಾರಿಗಳು, ನೌಕರರು ಹಾಗೂ ಸಾರ್ವಜನಿಕರು ದೇವಾಲಯ, ಪ್ರವಾಸಿತಾಣಗಳಿಗೆ ಭೇಟಿ ನೀಡಿದ್ದಾರೆ. ಬೆಳಗಾವಿ ಸಮೀಪದ ದೇವಾಲಯ, ಪ್ರವಾಸಿತಾಣಗಳಿಗೆ ಬಹಳಷ್ಟು ಮಂದಿ ಹೋಗಿದ್ದಾರೆ.
ಆದರೆ, ಕೆಲವರು ಶಾಪಿಂಗ್ (ಖರೀದಿ)ಮಾಡುವುದರಲ್ಲಿ ನಿರತರಾಗಿದ್ದರು. ಕೋಲ್ಲಾಪುರದ ಲಕ್ಷೀ ದೇವಾಲಯ, ಬನಶಂಕರಿ, ಸವದತ್ತಿ ಯಲ್ಲಮ ದೇವಾಲಯ, ಮಹಾಕೂಟ, ಕಿತ್ತೂರು, ದಾಂಡೇಲಿ, ಗೋವಾ -ಹೀಗೆ ಅವರವರ ಸಾಮರ್ಥ್ಯ ಅಭಿರುಚಿಗೆ ತಕ್ಕಂತೆ ಪ್ರವಾಸ ಕೈಗೊಂಡಿದ್ದಾರೆ.
ಬೆಳಗಾವಿಯ ಸುತ್ತಮುತ್ತಲಿರುವ ಪ್ರೇಕ್ಷಣೀಯ ಸ್ಥಳಗಳಿಗೂ ಭೇಟಿ ನೀಡಿದ್ದಾರೆ. ಹಿಡ್ಕಲ್ ಜಲಾಶಯ, ಬೆಳಗಾವಿ ಕೋಟೆ, ಪ್ರಾಚೀನ ದೇವಾಲಯಗಳು, ಮೃಗಾಲಯ, ನಗರದಲ್ಲಿರುವ ಕೆರೆ ಸೇರಿದಂತೆ ಪ್ರಮುಖ ಸ್ಥಳಗಳಿಗೆ ಭೇಟಿ ನೀಡಿದ್ದಾರೆ.
ಆದರೆ, ಸುವರ್ಣ ವಿಧಾನಸೌಧದಲ್ಲಿ ಎಂದಿನಂತೆ ಭದ್ರತಾ ಸಿಬ್ಬಂದಿ ಮತ್ತು ಪೊಲೀಸರು ಭದ್ರತೆ ಒದಗಿಸಿದ್ದಾರೆ.ಪ್ರತಿ ವರ್ಷ ಚಳಿಗಾಲದ ಅಧಿವೇಶನ ಬೆಳಗಾವಿಯಲ್ಲೇ ನಡೆಯುತ್ತದೆ. ವಾರಾಂತ್ಯ ರಜಾ ದಿನಗಳಂದು ಈ ರೀತಿ ಪ್ರವಾಸ ಕೈಗೊಳ್ಳುವುದು ರೂಢಿಯಲ್ಲಿದೆ.