Tuesday, August 5, 2025
Homeಬೆಂಗಳೂರುಅಂತರಾಷ್ಟ್ರೀಯ ಕರೆಗಳ ಪರಿವರ್ತನೆ ಜಾಲ ಪತ್ತೆ, ಇಬ್ಬರು ವಂಚಕರ ಸೆರೆ

ಅಂತರಾಷ್ಟ್ರೀಯ ಕರೆಗಳ ಪರಿವರ್ತನೆ ಜಾಲ ಪತ್ತೆ, ಇಬ್ಬರು ವಂಚಕರ ಸೆರೆ

two fraudsters arrested in International call diversion network

ಬೆಂಗಳೂರು,ಆ.4– ಅಂತರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳಾಗಿ ಪರಿವರ್ತಿಸಿ ಸರ್ಕಾರ ಹಾಗೂ ದೂರಸಂಪರ್ಕ ಸಂಸ್ಥೆಗಳಿಗೆ ಕೋಟ್ಯಾಂತರ ರೂಪಾಯಿ ವಂಚನೆ ಮಾಡುತ್ತಿದ್ದ ಕೇರಳದ ವ್ಯಕ್ತಿ ಸೇರಿದಂತೆ ಇಬ್ಬರನ್ನು ಸೈಬರ್‌ ಕ್ರೈಂ ಠಾಣೆ ಪೊಲೀಸರು ಬಂಧಿಸಿದ್ದಾರೆ.ಆರೋಪಿಗಳಿಂದ ಒಂಬತ್ತು ಸಿಮ್‌ ಬಾಕ್‌್ಸಗಳು, ಮೊಬೈಲ್‌, 6 ರೌಟರ್‌ಗಳು, ಲ್ಯಾಪ್‌ಟ್ಯಾಪ್‌, 702 ಸಿಮ್‌ ಕಾರ್ಡ್‌ಗಳನ್ನು ವಶಪಡಿಸಿಕೊಂಡಿದ್ದು, ಇವುಗಳ ಮೌಲ್ಯ 10 ಲಕ್ಷ ರೂ.ಗಳೆಂದು ಅಂದಾಜಿಸಲಾಗಿದೆ.

ವೈಟ್‌ಫೀಲ್‌್ಡನ ಇಮಡಿಹಳ್ಳಿ ಮುಖ್ಯ ರಸ್ತೆಯ ರಾಮಮಂದಿರದ ಬಳಿ ಕೆಲವರು ಸಿಮ್‌ ಬಾಕ್ಸ್ ಗಳಲ್ಲಿ ಸಿಮ್‌ ಕಾರ್ಡ್‌ಗಳನ್ನು ಬಳಸಿ ರಾಷ್ಟ್ರೀಯ ಭದ್ರತೆಗೆ ಬೆದರಿಕೆ ಉಂಟು ಮಾಡುವಂತಹ ರೀತಿಯಲ್ಲಿ ಭಾರತಿ ಏರ್‌ಟೆಲ್‌ ಕಂಪನಿಗೆ ನಷ್ಟ ಉಂಟು ಮಾಡುತ್ತಾ ,ಮಾನ್ಯತೆ ಇಲ್ಲದ ಟೆಲಿಫೋನ್‌ ಎಕ್ಸೈಂಜ್‌ ನಡೆಸುತ್ತಿದ್ದರು.

ಈ ಬಗ್ಗೆ ಕಂಪನಿಯ ನೋಡಲ್‌ ಅಧಿಕಾರಿ ಗಮನಿಸಿ ತಕ್ಷಣ ಸೈಬರ್‌ ಕ್ರೈಂ ಪೊಲೀಸ್‌‍ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ ಪೊಲೀಸರು ಹಲವು ಆಯಾಮಗಳಲ್ಲಿ ಮಾಹಿತಿ ಕಲೆಹಾಕಿ, ದೂರ ಸಂಪರ್ಕ ಇಲಾಖೆ ಅಧಿಕಾರಿಗಳು ಹಾಗೂ ಏರ್‌ಟೆಲ್‌ ಸೇವಾ ದಾತೆಯ ಸಹಯೋಗದೊಂದಿಗೆ ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಆರೋಪಿಯೊಬ್ಬನನ್ನು ಪತ್ತೆಹಚ್ಚಿ ವಿಚಾರಣೆಗೆ ಹಾಜರಾಗುವಂತೆ ನೋಟೀಸ್‌‍ ನೀಡಿದ್ದಾರೆ.

ಆರೋಪಿಯು ವಿಚಾರಣೆಗೆ ಹಾಜರಾಗಿ, ಅಂತರಾಷ್ಟ್ರೀಯ ಕರೆಗಳನ್ನು ಸ್ಥಳೀಯ ದರದಲ್ಲಿ ಮಾರ್ಗ ಮಾಡಲು ಇಮಡಿಹಳ್ಳಿಯಲ್ಲಿ ಸಿಮ್‌ ಬಾಕ್ಸ್ ಸ್ಥಾಪಿಸಿದ್ದಾಗಿ ಹೇಳಿದ್ದಾನೆ. ಆರೋಪಿಯನ್ನು ಸುದೀರ್ಘ ವಿಚಾರಣೆಗೆ ಒಳಪಡಿಸಿದಾಗ ಮತ್ತಿಬ್ಬರು ಇದರಲ್ಲಿ ಭಾಗಿಯಾಗಿರುವ ಬಗ್ಗೆ ಮಾಹಿತಿ ನೀಡಿದ್ದು, ಈ ಪೈಕಿ ಒಬ್ಬ ವಿದೇಶದಲ್ಲಿ ವಾಸವಿದ್ದರೆ, ಮತ್ತೊಬ್ಬ ನಗರದಿಂದ ನೆರವು ನೀಡುತ್ತಿದ್ದನು ಎಂಬ ಬಗ್ಗೆ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾನೆ.

ವಿದೇಶದಲ್ಲಿರುವ ಆರೋಪಿಯು ಅಲ್ಲಿನ ಬಡ ಕಾರ್ಮಿಕರು ತಮ ಕುಟುಂಬದೊಂದಿಗೆ ಮಾತನಾಡಲು ಅಂತರಾಷ್ಟ್ರೀಯ ಕರೆಗಳ ವೆಚ್ಚ ಹೆಚ್ಚಾಗುತ್ತದೆ ಎಂಬ ಕಾರಣಕ್ಕೆ ಅಲ್ಲಿನ ಕರೆಗಳನ್ನು ಸ್ಥಳೀಯ ಕರೆಗಳಾಗಿ ಪರಿವರ್ತಿಸಿದರೆ ಲಾಭವಾಗುತ್ತದೆ ಎಂದು ತಿಳಿಸಿದ್ದರಿಂದ ವೈಟ್‌ಫೀಲ್‌್ಡನಲ್ಲಿ ಬಾಡಿಗೆ ಮನೆ ಮಾಡಿಕೊಂಡು ಮನೆಯಲ್ಲೇ ಸಿಮ್‌ಬಾಕ್‌್ಸಗಳನ್ನು ಅಳವಡಿಸಿ ರಹಸ್ಯ ಟೆಲಿಫೋನ್‌ ಎಕ್ಸೈಂಜ್‌ ಸ್ಥಾಪನೆ ಮಾಡಿದ್ದಾಗಿ ಆರೋಪಿಯು ವಿಚಾರಣೆ ವೇಳೆ ಹೇಳಿದ್ದಾನೆ.

ವಿದೇಶದಿಂದ ಕೊರಿಯರ್‌ ಮೂಲಕ ಕಳುಹಿಸಿದ ಸಿಮ್‌ಬಾಕ್‌್ಸಗಳನ್ನು ಬಳಸಿ ಮತ್ತೊಬ್ಬ ಸಹಚರನ ಸಹಾಯದಿಂದ ಅಂತರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳನ್ನಾಗಿ ಪರಿವರ್ತಿಸುತ್ತಿದ್ದರಿಂದ ಆರೋಪಿಗೆ ಪ್ರತಿ ತಿಂಗಳು ನಾಲ್ಕರಿಂದ ಐದು ಲಕ್ಷದ ವರೆಗೆ ಹವಾಲಾ ಮಾರ್ಗದಿಂದ ಹಣ ಲಭಿಸುತ್ತಿತ್ತು ಎಂಬುವುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ.

ಆರೋಪಿಗೆ ಸಹಾಯ ಮಾಡುತ್ತಿದ್ದ ಮತ್ತೊಬ್ಬನನ್ನು ಪೊಲೀಸರು ಬಂಧಿಸಿದ್ದು, ಆತನೂ ಸಹ ವಿಚಾರಣೆ ವೇಳೆ ತಪ್ಪು ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ. ಪೊಲೀಸರು ಕಾರ್ಯಾಚರಣೆ ಮುಂದುವರೆಸಿ ವೈಟ್‌ಫೀಲ್‌್ಡನ ಆರೋಪಿ ಮನೆಯಿಂದ ರಹಸ್ಯವಾಗಿ ಅಳವಡಿಸಿದ್ದ ಟೆಲಿಫೋನ್‌ ಎಕ್ಸೈಂಜ್‌ನಿಂದ ಒಂಬತ್ತು ಸಿಮ್‌ ಬಾಕ್ಸ್ ಗಳು, ಮೊಬೈಲ್‌, 6 ರೌಟರ್‌ಗಳು, ಲ್ಯಾಪ್‌ಟ್ಯಾಪ್‌, 702 ಸಿಮ್‌ ಕಾರ್ಡ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ವಂಚಕರ ಈ ಕೃತ್ಯದಿಂದ ಸರ್ಕಾರ ಹಾಗೂ ದೂರ ಸಂಪರ್ಕ ಕಂಪನಿಗಳಿಗೆ ಆಗಿರುವ ಕೋಟ್ಯಾಂತರ ರೂಪಾಯಿ ನಷ್ಟದ ಪ್ರಮಾಣವನ್ನು ಪೊಲೀಸರು ಲೆಕ್ಕಹಾಕುತ್ತಿದ್ದಾರೆ.ಈ ಸಿಮ್‌ ಕಾರ್ಡ್‌ಗಳನ್ನು ಇತರೆ ಸೈಬರ್‌ ಅಪರಾಧಗಳಿಗೂ ಬಳಸಿರುವ ಶಂಕೆ ಇದ್ದು, ತನಿಖೆ ಮುಂದುವರೆದಿದೆ ಎಂದು ನಗರ ಪೊಲೀಸ್‌‍ ಆಯುಕ್ತ ಸೀಮಂತ್‌ಕುಮಾರ್‌ ಸಿಂಗ್‌ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆರು ತಿಂಗಳಿನಿಂದ ಈ ಕೃತ್ಯ ನಡೆಸಿದ್ದಾರೆಂಬುವುದು ತಿಳಿದು ಬಂದಿದೆ. ಸರ್ಕಾರಕ್ಕೆ ಅದರಿಂದ ಎಷ್ಟು ನಷ್ಟ ಉಂಟಾಗಿದೆ ಎಂಬುವುದು ನಿಖರವಾಗಿ ಇನ್ನೂ ತಿಳಿದುಬಂದಿಲ್ಲ ಎಂದು ಅವರು ಹೇಳಿದರು.

RELATED ARTICLES

Latest News