ಬೆಂಗಳೂರು,ಜ.22– ರಾಜ್ಯ ಬಿಜೆಪಿ ಘಟಕದೊಳಗೆ ಉಂಟಾಗಿದ್ದ ಭಿನ್ನಮತವನ್ನು ಶಮನಗೊಳಿಸಲು ಆಗಮಿಸಿದ್ದ ಉಸ್ತುವಾರಿ ರಾಧಾಮೋಹನ್ ದಾಸ್ ಎದುರೇ ಇಬ್ಬರು ಪ್ರಭಾವಿ ನಾಯಕರು ಜಟಾಪಟಿ ನಡೆಸಿ ಮಾತಿಗೆ ಮಾತು ಬೆಳೆಸಿರುವ ಘಟನೆ ನಡೆದಿದೆ.
ಪಕ್ಷದ ಕಚೇರಿಯಲ್ಲಿ ರಾಜ್ಯ ಉಸ್ತುವಾರಿ, ರಾಧಾಮೋಹನ್ ದಾಸ್, ಸಹ ಉಸ್ತುವಾರಿ ಸುಧಾಕರ್ ಸೇರಿದಂತೆ ಕೋರ್ ಕಮಿಟಿಯ ಸದಸ್ಯರಾದ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್, ಕೇಂದ್ರದ ಮಾಜಿ ಸಚಿವ ಡಿ.ವಿ.ಸದಾನಂದಗೌಡ, ಸಂಸದ ಬಸವರಾಜ ಬೊಮಾಯಿ ಮತ್ತಿತರರು ಸಭೆಯಲ್ಲಿ ಭಾಗಿಯಾಗಿದ್ದರು.
ಸಭೆಯ ಮಧ್ಯೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ಶಾಸಕ ಮಾಜಿ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ ನಡುವೆ ಜಟಾಪಟಿ ನಡೆದು ಮಾತಿಗೆ ಮಾತು ಬೆಳೆದಿದೆ.
ಒಂದು ಹಂತದಲ್ಲಿ ಏಕವಚನ ಪದ ಪ್ರಯೋಗ ಬಳಸಿದ ಇಬ್ಬರು ನಾಯಕರೂ ಸಭೆಯಿಂದ ಹೊರ ನಡೆಯಲು ಮುಂದಾದಾಗ ಮಧ್ಯಪ್ರವೇಶ ಮಾಡಿದ ಅಶೋಕ್ ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸಿದ್ದಾರೆ. ಕೊನೆಗೆ ವಿಜಯೇಂದ್ರ ಮತ್ತು ಅಶ್ವತ್ಥ ನಾರಾಯಣ ಅವರಿಂದ ಬೇಸತ್ತ ರಾಧಾಮೋಹನ್ ದಾಸ್ ಮೌನವಾಗಿರುವಂತೆ ತಾಕೀತು ಮಾಡಿದರು.
ಅಷ್ಟಕ್ಕೂ ನಡೆದದ್ದು ಏನೆಂದರೆ ಕೋರ್ ಕಮಿಟಿ ಸಭೆಯಲ್ಲಿ ಬೆಂಗಳೂರು ಉತ್ತರ ಹಾಲಿ ಜಿಲ್ಲಾಧ್ಯಕ್ಷರಾಗಿರುವ ಬಿಬಿಎಂಪಿ ಮಾಜಿ ಉಪಮೇಯರ್ ಹರೀಶ್ ಅವರನ್ನು ಬದಲಾಯಿಸಿ ಹೊಸಬರನ್ನು ನ ನೇಮಕ ಮಾಡಬೇಕೆಂದು ಅಶ್ವಥ್ ನಾರಾಯಣ ಪಟ್ಟು ಹಿಡಿದರು.
ಮೊದಲಿನಿಂದಲೂ ಹರೀಶ್ ವಿಜಯೇಂದ್ರ ಬಣದಲ್ಲಿ ಗುರುತಿಸಿಕೊಂಡವರು. ಹೀಗಾಗಿ ಅವರನ್ನು ಬದಲಾವಣೆ ಮಾಡದೆ ಅದೇ ಹುದ್ದೆಯಲ್ಲಿ ಮುಂದುವರೆಸಬೇಕೆಂಬುದು ರಾಜ್ಯಾಧ್ಯಕ್ಷರ ಒತ್ತಾಯವಾಗಿತ್ತು.
ಹರೀಶ್ ಜಿಲ್ಲಾಧ್ಯಕ್ಷರಾದ ಮೇಲೆ ಪಕ್ಷದ ಸಂಘಟನೆಯನ್ನು ಹೇಳಿಕೊಳ್ಳುವಂತಹ ಮಟ್ಟಕ್ಕೆ ಬೆಳೆಸಿಲ್ಲ. ಅಲ್ಲದೆ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ ದೊಡ್ಡ ಕ್ಷೇತ್ರವಾಗಿದ್ದು, ಇಲ್ಲಿ ಕೆಳಹಂತದ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಸುವಲ್ಲಿ ವಿಫಲರಾಗಿದ್ದಾರೆ ಎಂಬುದು ಅಶ್ವತ್ಥ ನಾರಾಯಣ ಅವರ ಆರೋಪವಾಗಿತ್ತು.
ಬೆಂಗಳೂರು ಉತ್ತರ ಜಿಲ್ಲೆಯು ಬಿಜೆಪಿಯ ಭದ್ರ ಕೋಟೆಯಾಗಿದ್ದು, 2028ರ ವಿಧಾನಸಭೆ ಚುನಾವಣೆಯಲ್ಲಿ ನಾವು ಇಡೀ 8 ಕ್ಷೇತ್ರಗಳನ್ನು ಗೆಲ್ಲಬೇಕು. ಹೀಗಾಗಿ ಹರೀಶ್ ಅವರನ್ನು ಬದಲಾಯಿಸಿ ಎಂದು ಅಶ್ವತ್ಥ ನಾರಾಯಣ ಉಸ್ತುವಾರಿಯಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಆದರೆ ಇದನ್ನು ಒಪ್ಪದ ವಿಜಯೇಂದ್ರ ಉತ್ತರ ಜಿಲ್ಲೆಯಲ್ಲಿ ಸಂಘಟನೆ ಗಟ್ಟಿಯಾಗಿದೆ. ಹರೀಶ್ ಹಿರಿಯರು ಕಿರಿಯರು ಎನ್ನದೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷವನ್ನು ಸಂಘಟಿಸಿದ್ದಾರೆ. ಇದರ ಪರಿಣಾಮ ಲೋಕಸಭೆ ಚುನಾವಣೆಯಲ್ಲಿ ನಾವು ನಿರೀಕ್ಷೆಗೂ ಮೀರಿದ ಗೆಲವು ಸಾಧಿಸಲು ಸಾಧ್ಯವಾಯಿತು ಎಂದು ಸಮರ್ಥನೆ ಮಾಡಿಕೊಂಡರು.
ಬೆಂಬಲಿಗರಿಗೆ ಜಿಲ್ಲಾಧ್ಯಕ್ಷರುಗಳ ಸ್ಥಾನಕ್ಕೆ ಪಟ್ಟು:
ತಮ ಬೆಂಬಲಿಗರಿಗೆ ಜಿಲ್ಲಾಧ್ಯಕ್ಷರ ಸ್ಥಾನ ಕೊಡುವಂತೆ ನಾಯಕರು ಪಟ್ಟು ಹಿಡಿದಿದ್ದು, ಕೇವಲ ವಿಜಯೇಂದ್ರ ನೇಮಿಸಿದ ಅಧ್ಯಕ್ಷರ ಆಯ್ಕೆಗೆ ಗರಂ ಆಗಿ ರಾಧಾ ಮೋಹನ್ ದಾಸ್ ಮುಂದೆಯೇ ಕೆಲ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಂತರ ಎಲ್ಲವನ್ನೂ ಸರಿಮಾಡಿಕೊಂಡು ಹೋಗುತ್ತೇನೆ ಎಂದು ವಿಜಯೇಂದ್ರ ಉತ್ತರಿಸಿದ್ದಾರೆ ಎನ್ನಲಾಗಿದೆ.
ಆಕಾಂಕ್ಷಿಗಳ ಹೆಸರು ದೆಹಲಿಗೆ :
ಕೋರ್ ಕಮಿಟಿ ಸಭೆ ಬಳಿಕ ಮಾತನಾಡಿದ್ದ ಪರಿಷತ್ ಸದಸ್ಯ ಸಿ.ಟಿ.ರವಿ, ಸಾಮಾಜಿಕ ನ್ಯಾಯದ ಲೆಕ್ಕಾಚಾರದಲ್ಲಿ ಜಿಲ್ಲಾಧ್ಯಕ್ಷರುಗಳ ಆಯ್ಕೆ ನಡೆಯಲಿದೆ, ಈ ನಿರ್ಣಯವನ್ನ ಕೋರ್ ಕಮಿಟಿಯಲ್ಲಿ ತೆಗೆದುಕೊಳ್ಳಲಾಗಿದೆ. ಪ್ರತಿ ಜಿಲ್ಲೆಯ ಮೂವರು ಆಕಾಂಕ್ಷಿಗಳ ಹೆಸರುಗಳನ್ನು ಕೇಂದ್ರಕ್ಕೆ ಕಳುಹಿಸಿಕೊಟ್ಟಿದ್ದೇವೆ. ಸದ್ಯಕ್ಕೆ ರಾಜ್ಯಾಧ್ಯಕ್ಷರ ಬದಲಾವಣೆ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಕೋರ್ ಕಮಿಟಿ ಸಭೆಯಲ್ಲಿ ಅದು ಚರ್ಚೆಗೆ ಬರಲ್ಲ. ಭಿನ್ನಮತೀಯರ ಬಗ್ಗೆಯೂ ಸಾಕಷ್ಟು ಚರ್ಚೆ ಆಗಿದೆ. ಎಲ್ಲರನ್ನ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಸಂಘಟನೆ ಮಾಡಲಾಗುತ್ತದೆ. ಪಕ್ಷ ಇದ್ದರಷ್ಟೇ ಎಲ್ಲರೂ ಅನ್ನೋದನ್ನು ಚರ್ಚೆ ಮಾಡಲಾಗಿದೆ ಎಂದು ಹೇಳಿದ್ದರು.
ಇನ್ನು ಬಿಜೆಪಿ ಉಸ್ತುವಾರಿ ರಾಧಾ ಮೋಹನ ದಾಸ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪಕ್ಷದ ಆಂತರಿಕ ಕಲಹ ಸರಿಪಡಿಸಲು ಕೆಲವು ಶಾಸಕರು ಒತ್ತಾಯ ಮಾಡಿದ್ದಾರೆ ಎನ್ನಲಾಗಿದೆ. ದಿನ ಬೆಳಗಾದರೆ ಇವರದ್ದೇ ಕಿತ್ತಾಟ, ಬಹಿರಂಗ ಹೇಳಿಕೆ ನೋಡಬೇಕು ನಾವು. ಕಾರ್ಯಕರ್ತರು ಅಸಮಧಾನಗೊಂಡಿದ್ದಾರೆ, ನಮಗೂ ಕ್ಷೇತ್ರದಲ್ಲಿ ಮುಜುಗರ ಆಗುತ್ತಿದೆ. ಕಾಂಗ್ರೆಸ್ನವೂ ಕಾಲೆಳೀತಿದ್ದಾರೆ, ನಿಮನೆ ಕತೆ ಇಷ್ಟೇ ಅಂತ ಲೇವಡಿ ಮಾಡುತ್ತಾರೆ. ನಮಗೂ ಬಣ ಕಚ್ಚಾಟ ಸಾಕು ಸಾಕಾಗಿದೆ, ಮೊದಲು ಪರಿಸ್ಥಿತಿ ಸರಿಪಡಿಸಿ. ಮೊದಲು ಭಿನ್ನಮತ ನಿಲ್ಲಬೇಕು, ಇದನ್ನು ಆದ್ಯತೆಯಾಗಿ ನೋಡಿ ಎಂದು ಕೆಲವು ಶಾಸಕರು ಒತ್ತಾಯ ಮಾಡಿದ್ದಾರೆ ಎನ್ನಲಾಗಿದೆ.