Friday, July 18, 2025
Homeಬೆಂಗಳೂರುಬೆಂಗಳೂರಲ್ಲಿ ಇಂದು ಸಂಭವಿಸಿದ ಎರಡು ಪ್ರತ್ಯೇಕ ಅಪಘಾತಗಳಲ್ಲಿ ಇಬ್ಬರ ಸಾವು

ಬೆಂಗಳೂರಲ್ಲಿ ಇಂದು ಸಂಭವಿಸಿದ ಎರಡು ಪ್ರತ್ಯೇಕ ಅಪಘಾತಗಳಲ್ಲಿ ಇಬ್ಬರ ಸಾವು

Two killed in two separate accidents in Bengaluru

ಬಿಎಂಟಿಸಿ ಬಸ್‌‍ ಡಿಕ್ಕಿ ಬ್ಯಾಂಕ್‌ ಮಹಿಳಾ ಉದ್ಯೋಗಿ ಸಾವು :
ಬೆಂಗಳೂರು,ಜು.18-
ಬಸ್‌‍ ನಿಲ್ದಾಣದೊಳಗೆ ನುಗ್ಗಿದ ಬಿಎಂಟಿಸಿ ಎಲೆಕ್ಟ್ರಿಕ್‌ ಬಸ್‌‍ ನಿಂತಿದ್ದವರಿಗೆ ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟು ನಾಲ್ವರು ಗಾಯಗೊಂಡಿರುವ ಘಟನೆ ಪೀಣ್ಯ ಸಂಚಾರಿ ಪೊಲೀಸ್‌‍ ಠಾಣೆ ವ್ಯಾಪ್ತಿ ಯಲ್ಲಿ ಇಂದು ಬೆಳಗ್ಗೆ ನಡೆದಿದೆ. ಮಂಡ್ಯ ಮೂಲದ ಸುಮಾ (25) ಮೃತಪಟ್ಟ ಮಹಿಳೆ. ಇವರು ಸುಂಕದಕಟ್ಟೆಯಲ್ಲಿ ವಾಸವಾಗಿದ್ದರು.

ಹೆಬ್ಬಾಳದ ಎಚ್‌ಡಿಎಫ್‌ಸಿ ಬ್ಯಾಂಕ್‌ ಒಂದರಲ್ಲಿ ಉದ್ಯೋಗಿಯಾಗಿದ್ದ ಸುಮಾ ಅವರು ಎಂದಿನಂತೆ ಕೆಲಸಕ್ಕೆ ಹೋಗಲು ಪೀಣ್ಯ 2ನೇ ಹಂತದ ಬಸ್‌‍ ನಿಲ್ದಾಣಕ್ಕೆ ಬೆಳಗ್ಗೆ ಬಂದಿದ್ದಾರೆ. ಇವರಂತೆ ಹಲವಾರು ಮಂದಿ ಬಸ್‌‍ಗಾಗಿ ಕಾಯುತ್ತಾ ನಿಂತಿದ್ದರು.ಬೆಳಗ್ಗೆ 8.30 ರ ಸುಮಾರಿನಲ್ಲಿ ಬಸ್‌‍ ನಿಲ್ದಾಣಕ್ಕೆ ಬರುತ್ತಿದ್ದ ಬಿಎಂಟಿಸಿ ಬಸ್‌‍ ನಿಯಂತ್ರಣ ತಪ್ಪಿ ಬಸ್‌‍ಗಾಗಿ ಕಾಯುತ್ತಿದ್ದ ಪ್ರಯಾಣಿಕರಿಗೆ ಡಿಕ್ಕೆ ಹೊಡೆದಿದೆ.

ಪರಿಣಾಮ ಐದು ಮಂದಿ ಗಾಯಗೊಂಡರು. ಈ ಪೈಕಿ ಸುಮಾ ಅವರಿಗೆ ಗಂಭೀರ ಪೆಟ್ಟಾಗಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ದರಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಮೂವರು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದು, ಮತ್ತೊಬ್ಬರು ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ.

ಸುದ್ದಿ ತಿಳಿದು ಪೀಣ್ಯ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ, ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. ಒಂದು ಮೂಲದ ಪ್ರಕಾರ ಚಾಲಕ ಶೌಚಾಲಯಕ್ಕೆ ಹೋಗಿದ್ದರಿಂದ ಬೇರೆ ಬಸ್‌‍ಗಳು ಬಂದು ಜಾಮ್‌ ಆಗುತ್ತದೆ ಎಂದು ನಿರ್ವಾಹಕನೇ ಬಸ್‌‍ನ್ನು ಸ್ವಲ್ಪ ಮುಂದೆ ನಿಲ್ಲಿಸಲು ಚಾಲನೆ ಮಾಡಿದ್ದರಿಂದ ನಿಯಂತ್ರಣಕ್ಕೆ ಸಿಗದೆ ಪುಟ್‌ ಪಾತ್‌ ಮೇಲೆ ಹತ್ತಿಸಿ ಅಪಘಾತ ಮಾಡಿರುವುದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.

ಸ್ಕೂಟರ್‌ಗೆ ಟ್ರ್ಯಾಕ್ಟರ್‌ ಡಿಕ್ಕಿ, ವಿದ್ಯಾರ್ಥಿನಿ ದುರ್ಮರಣ :
ಬೆಂಗಳೂರು,ಜು.18- ಇಬ್ಬರು ವಿದ್ಯಾರ್ಥಿನಿಯರು ಸ್ಕೂಟರ್‌ನಲ್ಲಿ ಹೋಗುತ್ತಿದ್ದಾಗ ಟ್ರ್ಯಾಕ್ಟರ್‌ ಡಿಕ್ಕಿ ಹೊಡೆದ ಪರಿಣಾಮ ಬಿಎಸ್ಸಿ ವಿದ್ಯಾರ್ಥಿನಿ ಮೃತಪಟ್ಟಿರುವ ಘಟನೆ ಸಂಜಯನಗರ ಸಂಚಾರಿ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ ನಡೆದಿದೆ.ಮಲ್ಲೇಶ್ವರದ ಎಂಇಎಸ್‌‍ ಕಾಲೇಜಿನಲ್ಲಿ ಬಿಎಸ್ಸಿ ನಾಲ್ಕನೇ ಸೆಮಿಸ್ಟರ್‌ ವ್ಯಾಸಂಗ ಮಾಡುತ್ತಿದ್ದ ಕುಮಾರಿ ಲಕ್ಷ್ಮೀ (22) ಮೃತಪಟ್ಟ ವಿದ್ಯಾರ್ಥಿನಿ.

ಈಕೆಯ ಸ್ನೇಹಿತೆ ಸಿಂಚನ ನಾಗರಾಜ್‌ ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇವರಿಬ್ಬರು ಒಂದೇ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು, ಇಂದು ಬೆಳಗ್ಗೆ 6.30 ರ ಸುಮಾರಿನಲ್ಲಿ ಯಲಹಂಕ ಏರ್‌ಪೋರ್ಸ್‌ ಕಡೆಯಿಂದ ಸಿಂಚನ ಅವರು ಕುಮಾರಿ ಲಕ್ಷ್ಮೀಯನ್ನು ಸ್ಕೂಟರ್‌ನಲ್ಲಿ ಕರೆದುಕೊಂಡು ಬೆಂಗಳೂರು-ಬಳ್ಳಾರಿ ರಸ್ತೆಯಲ್ಲಿ ಬರುತ್ತಿದ್ದರು.

ಹೆಬ್ಬಾಳ ಬ್ಯಾಪಿಸ್ಟ್‌ ಆಸ್ಪತ್ರೆ ಎದುರು ಬರುತ್ತಿದ್ದಾಗ ಇವರ ಸ್ಕೂಟರ್‌ಗೆ ಟ್ರ್ಯಾಕ್ಟರ್‌ ಡಿಕ್ಕಿ ಹೊಡೆದಿದೆ. ಆ ವೇಳೆ ಇಬ್ಬರೂ ಕೆಳಗೆ ಬಿದ್ದಿದ್ದು, ಲಕ್ಷ್ಮೀ ಅವರು ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ.ಸುದ್ದಿ ತಿಳಿದು ಸಂಜಯನಗರ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.

RELATED ARTICLES

Latest News