ಚಿಕ್ಕಮಗಳೂರು,ಅ.31- ಹಸುವಿಗೆ ಸೊಪ್ಪು ತರಲು ಇಂದು ಮುಂಜಾನೆ ವ್ಯಕ್ತಿಗಳಿಬ್ಬರು ಹೋಗುತ್ತಿದ್ದಾಗ ಏಕಾಏಕಿ ಕಾಡಾನೆಯೊಂದು ಇವರ ಮೇಲೆ ದಾಳಿ ಮಾಡಿದ ಪರಿಣಾಮ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲ್ಲೂಕಿನ ಕೆರೆ ಗದ್ದೆ ಗ್ರಾಮದ ನಿವಾಸಿಗಳಾದ ಹರೀಶ್ ಮತ್ತು ಉಮೇಶ್ ಮೃತಪಟ್ಟವರು. ಇಂದು ಮುಂಜಾನೆ 6.30 ರ ಸುಮಾರಿನಲ್ಲಿ ಇವರಿಬ್ಬರೂ ಹಸುವಿಗೆ ಸೊಪ್ಪು ತರಲು ಕುದುರೆ ಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಹೋಗುತ್ತಿದ್ದಾಗ ಕೆರೆ ಗ್ರಾಪಂ ವ್ಯಾಪ್ತಿಯ ಮುಡುಬಾ ಎಲ್ಸಾರ ಬಳಿ ಕಾಡಾನೆಯೊಂದು ಏಕಾಏಕಿ ಇವರ ಮೇಲೆ ದಾಳಿ ನಡೆಸಿ ತುಳಿದು ಸಾಯಿಸಿದೆ.
ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿ ಸ್ಥಳದಲ್ಲೇ ಪ್ರತಿಭಟನೆ ನಡೆಸಿದರು.ಸುದ್ದಿ ತಿಳಿದು ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು, ಶೃಂಗೇರಿ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಮೈಸೂರಿನ ಸರಗೂರಿನಲ್ಲಿ ಹುಲಿಯೊಂದು ದಾಳಿ ಮಾಡಿ ವ್ಯಕ್ತಿಯೊಬ್ಬರನ್ನು ಸಾಯಿಸಿತು. ಈ ಘಟನೆ ಮಾಸುವ ಮುನ್ನವೇ ಇಂದು ಆನೆ ದಾಳಿಯಿಂದ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಇತ್ತೀಚೆಗೆ ಪ್ರಾಣಿಗಳು ಹಾಗೂ ಮಾನವ ಸಂಘರ್ಷ ಹೆಚ್ಚಾಗಿದ್ದು, ಅರಣ್ಯ ಭಾಗದ ನಿವಾಸಿಗಳು ಆತಂಕಗೊಂಡಿದ್ದಾರೆ.

