ಬೆಂಗಳೂರು,ನ.15- ಸಿಎಂ ಸಿದ್ದರಾಮಯ್ಯ ನವರ ಕುರ್ಚಿಯನ್ನು ಅಲುಗಾಡಿಸುತ್ತಿರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದ ನಿವೇಶನ ಹಂಚಿಕೆ ಪ್ರಕರಣದಲ್ಲಿ ಇಬ್ಬರು ಸಚಿವರು ಪ್ರಭಾವ ಬೀರಿರುವುದು ಬೆಳಕಿಗೆ ಬಂದಿದೆ.
ಕಳೆದ ಒಂದು ತಿಂಗಳಿನಿಂದ ಮುಡಾ ಪ್ರಕರಣದಲ್ಲಿ ಆಯುಕ್ತರು, ಹಿಂದಿನ ಆಯುಕ್ತರು, ಅಧ್ಯಕ್ಷರು ಹಾಗೂವಿವಿಧ ಶ್ರೆಣಿಯ ಅಧಿಕಾರಿಗಳನ್ನು ಇ.ಡಿ ತನಿಖೆಗೆ ಒಳಪಡಿಸಿದಾಗ, ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದ ಇಬ್ಬರು ಸಚಿವರು ಪ್ರಭಾವ ಬೀರಿ ನಿವೇಶನ ಹಂಚುವಂತೆ ತಮ ಮೇಲೆ ಒತ್ತಡ ಹಾಕಿದ್ದರು ಎಂಬ ಸ್ಫೋಟಕ ಮಾಹಿತಿಯನ್ನು ಹೊರಹಾಕಿದ್ದಾರೆ.
ಕಾನೂನು ಉಲ್ಲಂಘಿಸಿ ಹಂಚಿಕೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರೂ ಸಹ ತಮ ಪ್ರಭಾವ ಬಳಸಿಕೊಂಡು ಆಪ್ತರಿಗೆ ನಿವೇಶನಗಳನ್ನು ಮಾಡಲು ನಮಿಂದ ಅಧಿಕಾರ ದುರುಪಯೋಗಪಡಿಸಿ ಕೊಂಡಿದ್ದಾರೆಂಬ ಮಾಹಿತಿಯನ್ನು ತನಿಖೆ ವೇಳೆ ಬಹಿರಂಗಪಡಿಸಿದ್ದಾರೆ.
ಈ ಸಚಿವರು ಯಾರು ಎಂಬುದು ಬಹಿರಂಗವಾಗಿಲ್ಲವಾದರೂ ಮೂಲಗಳ ಪ್ರಕಾರ ಸಿದ್ದರಾಮಯ್ಯ ಬಣದಲ್ಲಿ ಗುರುತಿಸಿಕೊಂಡಿರುವ ಬೆಂಗಳೂರು ಹಾಗೂ ಮೈಸೂರಿನ ಸಚಿವರೇ ಪ್ರಭಾವ ಬಳಸಿ ನಿವೇಶನವನ್ನು ಹಂಚಲು ಒತ್ತಡ ಹಾಕಿದ್ದರು ಎಂಬುದು ಗೊತ್ತಾಗಿದೆ.
ಮುಡಾದಲ್ಲಿ ಹಿಂದೆ ಕೆಲಸ ಮಾಡಿದ ಅಧಿಕಾರಿಗಳನ್ನು ಇ.ಡಿ ವಿಚಾರಣೆಗೆ ಒಳಪಡಿಸಿದೆ. ಈ ವೇಳೆ 50:50 ಅನುಪಾತದಲ್ಲಿ ಸೈಟ್ ಹಂಚಿಕೆ ಮಾಡುವಾಗ ಇಬ್ಬರು ಸಚಿವರು ಪ್ರಭಾವ ಬೀರಿದ್ದಾರೆ. ಪ್ರಮುಖ ಸಚಿವರಿಂದಲೇ ಅಕ್ರಮ ನಡೆದಿದೆ ಎಂಬುದು ಗೊತ್ತಾಗಿದೆ.
ಮುಡಾ ಮಾಜಿ ಅಧಿಕಾರಿಗಳ ಹೇಳಿಕೆಯನ್ನು ಬೆನ್ನತ್ತಿರುವ ಇಡಿ ಈಗ ದಾಖಲೆ ಪರಿಶೀಲನೆಯನ್ನು ತೀವ್ರಗೊಳಿಸಿದೆ. ಒಂದು ವೇಳೆ ಅಧಿಕಾರಿಗಳ ಹೇಳಿಕೆಗೆ ಸಂಬಂಧಿಸಿದಂತೆ ಪೂರಕ ದಾಖಲೆಗಳು ಸಿಕ್ಕಿದರೆ ಇ.ಡಿ ಇಬ್ಬರು ಸಚಿವರನ್ನು ವಿಚಾರಣೆಗೆ ಕರೆಸಿಕೊಳ್ಳುವ ಸಾಧ್ಯತೆಯಿದೆ.
ಮುಡಾ ಮಾಜಿ ಅಧ್ಯಕ್ಷರಾದ ಮರೀಗೌಡ, ಶಿವಣ್ಣ, ಮಾಜಿ ಆಯುಕ್ತ ನಟೇಶ್, 2004ರಲ್ಲಿ ಮೈಸೂರು ತಹಸೀಲ್ದಾರ್ ಆಗಿದ್ದ ಮಾಳಿಗೆ ಶಂಕರ್ ಅವರನ್ನು ಇ.ಡಿ ವಿಚಾರಣೆಗೆ ಒಳಪಡಿಸಿತ್ತು.
ಈ ಮಧ್ಯೆ ಮುಡಾದ ಮತ್ತಷ್ಟು ಅಕ್ರಮಗಳು ಬಹಿರಂಗಗೊಂಡಿವೆ. ಸರಿಯಾದ ಮೂಲ ದಾಖಲೆಗಳೇ ಇಲ್ಲದೇ 1950 ಸೈಟ್ ಹಂಚಿಕೆಯಾಗಿವೆ. ಅಲ್ಲದೇ 5 ಸಾವಿರ ಸೈಟ್ಗಳಿಗೆ 2 ಸಾವಿರ ಬಾಂಡ್ ಪೇಪರ್ಗಳೇ ಇಲ್ಲ ಎನ್ನಲಾಗಿದೆ. ಇನ್ನು, ನನ್ನ ವಿರುದ್ಧದ ದೂರಿನಲ್ಲಿ ಸತ್ಯಾಂಶ ಇಲ್ಲ, ದಾಖಲೆ ನಕಲಿ ಆಗಿದ್ದರೆ ಕಾನೂನು ಹೋರಾಟ ಮಾಡಲಿ ಎಂದು ಸಿಎಂಗೆ ದೂರುದಾರ ಸ್ನೇಹಮಯಿ ಕೃಷ್ಣ ಸವಾಲ್ ಹಾಕಿದ್ದಾರೆ.
ಏನಿದು ಪ್ರಕರಣ?:
ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರ ಹೆಸರಿನಲ್ಲಿದ್ದ ಕೆಸರೆ ಗ್ರಾಮದ ಸರ್ವೆ ನಂಬರ್ 464ರಲ್ಲಿ 3.16 ಎಕರೆ ಜಮೀನನ್ನು ದೇವನೂರು ಬಡಾವಣೆ ನಿರ್ಮಾಣಕ್ಕೆ ಭೂಸ್ವಾಧೀನ ಮಾಡಿಕೊಳ್ಳಲಾಗಿತ್ತು. ಈ ಜಾಗವನ್ನು ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರಿಗೆ ದಾನ ಪತ್ರದ ಮೂಲಕ ಅವರ ಸಹೋದರ ಕೊಟ್ಟಿದ್ದರು. ಇದು ಒಟ್ಟು 1,48,104 ಚದರ ಅಡಿ ಜಾಗ ಇತ್ತು.
ಅದರ ಬದಲಿಗೆ ಮುಡಾ 2021ರಲ್ಲಿ ಪಾರ್ವತಿ ಅವರಿಗೆ ಮೈಸೂರಿನ ವಿಜಯನಗರ ಬಡಾವಣೆಯಲ್ಲಿ 38,284 ಚದರ ಅಡಿ ಜಾಗ ಅಂದರೆ 14 ನಿವೇಶನ ಕೊಟ್ಟಿದ್ದಾರೆ. ಇದು ಈಗ ಚರ್ಚೆಗೆ ಕಾರಣವಾಗಿದೆ. ವಿಜಯನಗರ ಬಡಾವಣೆಯಲ್ಲಿ 14 ನಿವೇಶನ ಪತ್ನಿ ಪಾರ್ವತಿ ಅವರಿಗೆ ಮಂಜೂರು ಆಗಲು, ಸಿದ್ದರಾಮಯ್ಯ ಅವರು ಪ್ರಭಾವ ಬೀರಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಜಾರಿ ನಿರ್ದೇಶನಾಲಯದವರು ಕಾನೂನು ಪ್ರಕಾರ ಏನು ಮಾಡಬೇಕೋ ಮಾಡಲಿ, ಬಿಡಲಿ, ನಾವು ಅಡ್ಡಿಯಾಗಲ್ಲ. ಆದರೆ, ತನಿಖೆ ಮಾಡುತ್ತಿರುವುದು ಸುಳ್ಳು ಕೇಸ್ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದರು.
ಮುಡಾ ಬೆಳಕಿಗೆ ಬಂದಿದ್ಹೇಗೆ?:
ಈ ಮೊದಲು ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಕೆ.ವಿ. ರಾಜೇಂದ್ರ ಅವರು ಇಡೀ ಮುಡಾ ಹಗರಣವನ್ನು ಬಯಲಿಗೆಳೆದಿದ್ದರು. ಮುಡಾ ಲೇಔಟ್ ಯೋಜನೆಗಳಲ್ಲಿ ಆಗಿರಬಹುದಾದ ಅಕ್ರಮಗಳ ಬಗ್ಗೆ ಮೊದಲು ರಾಜೇಂದ್ರ ಅವರು, ಒಂದು ವರ್ಷದಿಂದ ಮುಡಾ ಆಯುಕ್ತರಿಗೆ ಪತ್ರ ಬರೆದು ವಿವರಣೆ ಕೇಳಿದ್ದರು.
ಸುಮಾರು 15 ಪತ್ರಗಳನ್ನು ಬರೆದಿದ್ದರೂ ಮುಡಾ ಆಯುಕ್ತರಿಂದ ಯಾವುದೇ ಉತ್ತರ ಬಂದಿರಲಿಲ್ಲ. ಮುಡಾ ಹಗರಣ ಬಹಿರಂಗವಾಗುತ್ತಿದ್ದಂತೆ ಜಿಲ್ಲಾಧಿಕಾರಿಯನ್ನೇ ಸರ್ಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿತು. ಇದೇ ಈ ಹಗರಣ ತನಿಖೆಯಲ್ಲಿ ಬಹು ಮುಖ್ಯವಾದ ಅಂಶವಾಗಿದೆ.