ಬೆಂಗಳೂರು,ಮೇ4- ರಾಜ್ಯ ಕಾಂಗ್ರೆಸ್ ಸರ್ಕಾರದ ಕುಮಕ್ಕಿನಿಂದಲೇ ಹಿಂದೂ ಕಾರ್ಯಕರ್ತರ ಹತ್ಯೆಯಾಗುತ್ತಿದೆ ಎಂದು ಆರೋಪಿಸಿದ ವಿಧಾನಪರಿಷತ್‌ನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ, ಮಂಗಳೂರಿನಲ್ಲಿ ಮತ್ತಿಬ್ಬರನ್ನು ಗುರಿ ಮಾಡಿ ಪೋಸ್ಟ್ ಹಾಕಿದ್ದಾರೆ. ಅವರನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರಿನ ಹಿಂದೂ ಕಾರ್ಯಕರ್ತ ಸುಹಾಸ್ ಹತ್ಯೆ ಬಗ್ಗೆ ಪೊಲೀಸರಿಗೆ ಮೊದಲೇ ಗೊತ್ತಿತ್ತು. ಅವರಿಗೆ ರಕ್ಷಣೆ ಕೊಡಬಹುದಿತ್ತಲ್ಲವೇ? ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ. ಪೊಲೀಸ್ ಇಲಾಖೆ ಸರ್ಕಾರದ ನಿಯಂತ್ರದಲ್ಲಿಲ್ಲ. ಮತ್ತಿಬ್ಬರು ಹಿಂದೂ ಕಾರ್ಯಕರ್ತರನ್ನು ಟಾರ್ಗೆಟ್ ಮಾಡಿದ್ದೀವಿ ಎಂದು ಪೋಸ್ಟ್ ಹಾಕಿರುವವರ ಮನೆಗೆ ನುಗ್ಗಿ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.
ಭಯೋತ್ಪಾದಕರು ಪಹಲ್ಗಾಮ್‌ನಲ್ಲಿ ಪ್ರವಾಸಿಗರನ್ನು ಹತ್ಯೆ ಮಾಡಿದ್ದಕ್ಕಾಗಿ ಇಡೀ ದೇಶವೇ ಪಾಕಿಸ್ತಾನದ ವಿರುದ್ಧ ರೋಷಗೊಂಡಿದೆ. ಹೀಗಾಗಿ ಪೋಸ್ಟ್ ಹಾಕಿದವರಿಗೆ ತಕ್ಕ ಶಾಸ್ತಿ ಮಾಡಬೇಕು. ಇಲ್ಲವೇ ಅಧಿಕಾರ ಬಿಟ್ಟು ತೊಲಗಿ ಎಂದು ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದರು.
ಒಳಮೀಸಲಾತಿ ಹೆಸರಿನಲ್ಲಿ ಸಮಯವನ್ನು ದೂಡಲು ದತ್ತಾಂಶ ಸಮೀಕ್ಷೆ ಮಾಡಲಾಗುತ್ತಿದೆ. ಈ ವಿಚಾರದಲ್ಲಿ ಸರ್ಕಾರಕ್ಕೆ ಇಚ್ಛಾಶಕ್ತಿಯ ಕೊರತೆ ಇದೆ. ನಿಜವಾಗಲೂ ಒಳಮೀಸಲಾತಿ ಕೊಡುವುದೇ ಆಗಿದ್ದರೆ 2011ರ ಜನಗಣತಿಯ ಅಂಕಿಅಂಶಗಳ ಆಧಾರದ ಮೇಲೆ ನೀಡಬಹುದಿತ್ತು. ನೆರೆಯ ಆಂಧ್ರಪ್ರದೇಶ ಸೇರಿದಂತೆ ಕೆಲವು ರಾಜ್ಯಗಳು ಈಗಾಗಲೇ ಮೀಸಲಾತಿ ಜಾರಿ ಮಾಡಿವೆ ಎಂದರು.
ಜಾತಿಗಣತಿ ಮಾಡುವುದು ಕೇಂದ್ರ ಸರ್ಕಾರಕ್ಕೆ ಅಧಿಕಾರವಿದೆಯೇ ಹೊರತು ರಾಜ್ಯ ಸರ್ಕಾರಕ್ಕೆ ಇಲ್ಲ. ಕೇಂದ್ರ ಸರ್ಕಾರ ಜನಗಣತಿ ಜೊತೆ ಜಾತಿ ಗಣತಿಯನ್ನೂ ಮಾಡಲಿದೆ. ಆಗ ದತ್ತಾಂಶ ಸರಿ ಇದೆ ಎಂದು ಒಪ್ಪಿಕೊಳ್ಳುವುದು? ಎಂದು ಪ್ರಶ್ನಿಸಿದ ಅವರು, ಸರ್ಕಾರ ಕೇವಲ ಕಣ್ಣೋರೆಸುವ ತಂತ್ರವನ್ನು ಅನುಸರಿಸುತ್ತಿದೆ.
ಮಲ್ಲಿಕಾರ್ಜುನ ಖರ್ಗೆಗೆ ಸವಾಲು:
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಂವಿಧಾನಶಿಲ್ಪಿ ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ಸೋಲಿಸಲಿಲ್ಲ. ಕಮ್ಯೂನಿಸ್ಟ್ ಪಕ್ಷದ ದಾಂಗೆ ಹಾಗೂ ಆರ್‌ಎಸ್‌ಎಸ್‌ನ ಸಾರ್ವಕರ್ ಅವರುಗಳು ಅಂಬೇಡ್ಕರ್‌ನ್ನು ಸೋಲಿಸಿದ್ದು ಎಂದು ಹೇಳಿದ್ದಾರೆ. ಇದನ್ನೇ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಪ್ರಿಯಾಂಕ್ ಖರ್ಗೆ, ರಾಜ್ಯಸಭಾ ಸದಸ್ಯ ಜಯರಾಮ್ ರಮೇಶ್ ಕೂಡ ಹೇಳಿದ್ದಾರೆ. ಈ ನಾಲ್ವರಿಗೂ ಈ ವಿಚಾರದಲ್ಲಿ ಸಾಬೀತುಪಡಿಸಲು ಸವಾಲು ಹಾಕುತ್ತೇನೆ. ಒಂದು ವೇಳೆ ಅವರು ಸಾಬೀತುಪಡಿಸಿದರೆ ನಾನು ವಿರೋಧ ಪಕ್ಷದ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ. ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಕೊಡುತ್ತಾರಾ? ಎಂದು ಸವಾಲು ಹಾಕಿದರು.
ಅದೇ ರೀತಿ ಮಲ್ಲಿಕಾರ್ಜುನ ಖರ್ಗೆ ಅವರು ಸಾಬೀತುಪಡಿಸಿದರೆ ನನ್ನ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ. ಇಲ್ಲವಾದಲ್ಲಿ ಈ ನಾಲ್ವರೂ ರಾಜೀನಾಮೆ ನೀಡಿ ರಾಜಕೀಯ ನಿವೃತ್ತಿ ತೆಗೆದುಕೊಳ್ಳಲಿ. ನನ್ನ ಸಂಬಳದಲ್ಲಿ ಒಂದು ಲಕ್ಷದ ಒಂದು ರೂಪಾಯಿಯನ್ನು ಬಹುಮಾನವಾಗಿ ಹೇಳಿದರು.
ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಿಯಾಂಕ್ ಖರ್ಗೆ ಅವರು ಡಬಲ್ ಇಂಜಿನ್ ಸುಳ್ಳುಗಾರರು. ವಿಧಾನಸೌಧದ ಮುಂಭಾಗದಲ್ಲಿ ವೇದಿಕೆ ಸಿದ್ದಪಡಿಸಿ ಜನರನ್ನು ಕರೆಯಿರಿ. ನಾನು ಆ ಪತ್ರವನ್ನು ತೆಗೆದುಕೊಂಡು ಬರುತ್ತೇನೆ. ಚರ್ಚೆ ಮಾಡೋಣ ಎಂದು ಸವಾಲು ಹಾಕಿದರಲ್ಲದೆ, ಸಾಬೀತುಪಡಿಸಿದರೆ ಅಂದೇ ಮುಖ್ಯಮಂತ್ರಿಯ ಕಾಲಿಗೆ ಬಿದ್ದು ಕ್ಷಮಾಪಣೆ ಕೇಳುತ್ತೇನೆ ಎಂದರು. ಅಂಬೇಡ್ಕರ್ ಅವರು ನಿಧನರಾದಾಗ ಅಂತ್ಯ ಸಂಸ್ಕಾರಕ್ಕೂ ಕಾಂಗ್ರೆಸ್ ಜಾಗ ಕೊಟ್ಟಿಲ್ಲ. ಅಂಬೇಡ್ಕರ್‌ಗೆ ಗೌರವ ಸಿಕ್ಕಿದ್ದು ಬಿಜೆಪಿಯಿಂದ ಸಮರ್ಥಿಸಿಕೊಂಡರು.