ಬೆಂಗಳೂರು,ನ.12- ಫ್ಲೈ ಓವರ್ ಮೇಲೆ ಸಂಭವಿಸಿದ ಸರಣಿ ಅಪಘಾತದಲ್ಲಿ ಇಬ್ಬರು ಮೃತಪಟ್ಟಿರುವ ಘಟನೆ ಯಲಹಂಕ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ.ಅಪಘಾತದಲ್ಲಿ ಮೃತಪಟ್ಟವರನ್ನು ಲಾರಿ ಚಾಲಕ ಕುಲದೀಪ್ ಕುಮಾರ್ (42) ಮತ್ತು ಕಾರು ಚಾಲಕ ಜಗದೀಶ್ (40) ಎಂದು ಗುರುತಿಸಲಾಗಿದೆ.
ಬಿಬಿ ಮುಖ್ಯರಸ್ತೆ, ಯಲಹಂಕದ ಲೆಗಸಿ ಅಪಾರ್ಟ್ಮೆಂಟ್ ಮುಂಭಾಗದ ಫ್ಲೈ ಓವರ್ ಮೇಲೆ ರಾತ್ರಿ 11.20 ರ ಸುಮಾರಿನಲ್ಲಿ ಜಗದೀಶ್ ಅವರು ತಮ ಇನ್ನೋವಾ ಕಾರಿನಲ್ಲಿ ಹೋಗುತ್ತಿದ್ದಾಗ ಹಿಂದಿನಿಂದ ಅತಿ ವೇಗವಾಗಿ ಬಂದ ಸಿಮೆಂಟ್ ಮಿಕ್ಸರ್ ಲಾರಿ ಡಿಕ್ಕಿ ಹೊಡೆದಿದೆ.
ಪರಿಣಾಮ ಕಾರು ಚಾಲನೆ ಮಾಡುತ್ತಿದ್ದ ಜಗದೀಶ್ ಅವರು ರಸ್ತೆ ಮಧ್ಯದಲ್ಲಿಯೇ ಕಾರು ನಿಲ್ಲಿಸಿ ಲಾರಿ ಚಾಲಕನೊಂದಿಗೆ ವಾಗ್ವಾದ ಮಾಡುತ್ತಿದ್ದರು.ಇದೇ ವೇಳೆ ಹೆಬ್ಬಾಳದ ಕಡೆಯಿಂದ ದೇವನಹಳ್ಳಿ ಮಾರ್ಗವಾಗಿ ಅತೀವೇಗ ಹಾಗೂ ಅಜಾಗರೂಕತೆಯಿಂದ ಬಂದ ಬಿಎಂಟಿಸಿ ವೋಲ್ವೊ ಬಸ್ ನಿಯಂತ್ರಣ ತಪ್ಪಿ ಲಾರಿಯ ಹಿಂಭಾಗಕ್ಕೆ ಡಿಕ್ಕಿ ಹೊಡೆದ ರಭಸಕ್ಕೆ ಲಾರಿ ಮುಂದೆ ಚಲಿಸಿ ವಾಗ್ವಾದ ನಡೆಸುತ್ತಿದ್ದ ಇಬ್ಬರು ಚಾಲಕರಿಗೂ ಗುದ್ದಿದೆ.
ಲಾರಿ ಗುದ್ದಿದ ರಭಸಕ್ಕೆ ಲಾರಿ ಚಾಲಕ ಕುಲದೀಪ್ ಕುಮಾರ್ಗೆ ಗಂಭೀರ ಪೆಟ್ಟಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಾಯಗೊಂಡ ಕಾರು ಚಾಲಕನನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ಕರೆದೊಯ್ದಾಗ ವೈದ್ಯರು ಪರೀಕ್ಷಿಸಿ ಅವರುಮೃತಪಟ್ಟಿರುವುದಾಗಿ ದೃಢೀಕರಿಸಿದ್ದಾರೆ.
ಅಪಘಾತದಲ್ಲಿ ಬಿಎಂಟಿಸಿ ಬಸ್ ಚಾಲಕ ಗಂಭೀರವಾಗಿ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಏರ್ಪೋರ್ಟ್ಗೆ ಹೋಗುತ್ತಿದ್ದ ಈ ಬಸ್ನಲ್ಲಿ ಒಬ್ಬರೇ ಪ್ರಯಾಣಿಕರಿದ್ದ ಪರಿಣಾಮ ಹೆಚ್ಚಿನ ಅವಘಡ ಸಂಭವಿಸಿಲ್ಲ. ಅಪಘಾತದ ರಭಸಕ್ಕೆ ಬಸ್ನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ.ಸುದ್ದಿ ತಿಳಿದು ಯಲಹಂಕ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.