ಬೆಂಗಳೂರು,ಜ.4– ಶಾಲಾ ವಾರ್ಷಿಕೋತ್ಸವ ಮುಗಿಸಿಕೊಂಡು ಕಾರಿನಲ್ಲಿ ನಾಲ್ವರು ವಿದ್ಯಾರ್ಥಿಗಳು ಹಿಂದಿರುತ್ತಿದ್ದಾಗ ಅತೀ ವೇಗದಿಂದಾಗಿ ವಿದ್ಯುತ್ ಕಂಬಕ್ಕೆ ಕಾರು ಅಪ್ಪಳಿಸಿದ ಪರಿಣಾಮ ಇಬ್ಬರು ಮೃತಪಟ್ಟಿರುವ ಘಟನೆ ಗದಗ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ.
ಎಸ್ಎಸ್ಎಲ್ಸಿ ವಿದ್ಯಾರ್ಥಿ ಸಂಜೀವ್ ಗಿರೆಡ್ಡಿ(16) ಮತ್ತು ದ್ವೀತಿಯ ಪಿಯುಸಿ ವಿದ್ಯಾರ್ಥಿ ಮೊಹಮದ್ ಮುಜಾವರ್(18)ಮೃತಪಟ್ಟವರು.ಶಾಲಾ ವಾರ್ಷಿಕೋತ್ಸವ ಮುಗಿಸಿಕೊಂಡು ನಾಲ್ವರು ವಿದ್ಯಾರ್ಥಿಗಳು ನಿನ್ನೆ ರಾತ್ರಿ 10 ಗಂಟೆ ಸುಮಾರಿನಲ್ಲಿ ಕಾರಿನಲ್ಲಿ ಮನೆಗೆ ಹಿಂದಿರುಗುತ್ತಿದ್ದರು.
ಗದಗ-ಹುಬ್ಬಳ್ಳಿ ರಸ್ತೆಯ ತಾಲೂಕಿನ ಹುಲಿಕೋಟೆ ರೂರಲ್ ಇಂಜಿನಿಯರಿಂಗ್ ಕಾಲೇಜು ಬಳಿ ಅತೀವೇಗದಿಂದಾಗಿ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಮತ್ತೊಂದು ಕಂಬಕ್ಕೆ ಅಪ್ಪಳಿಸಿದ ಪರಿಣಾಮ ಇಬ್ಬರು ವಿದ್ಯಾರ್ತಿಗಳು ಮೃತಪಟ್ಟು ಇನ್ನಿಬ್ಬರು ಗಾಯಗೊಂಡಿದ್ದಾರೆ.
ಸುದ್ದಿ ತಿಳಿದು ಗದಗ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ ಇಬ್ಬರು ವಿದ್ಯಾರ್ಥಿಗಳು ಮೃತ ದೇಹಗಳನ್ನು ಆಸ್ಪತ್ರೆಗೆ ರವಾನಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.