ಬೆಂಗಳೂರು,ಫೆ.10- ಕೆಲಸ ಮಾಡುವ ವಿಚಾರಕ್ಕೆ ಇಬ್ಬರು ಕಾರ್ಮಿಕರ ನಡುವೆ ಗಲಾಟೆಯಾಗಿದ್ದು, ಒಬ್ಬ ಕಾರ್ಮಿಕನನ್ನು ಚಾಕುವಿನಿಂದ ಇರಿದು ಹತ್ಯೆಗೈದಿರುವ ಘಟನೆ ಸಂಪಿಗೆಹಳ್ಳಿಯ ಆಕಾಶವಾಣಿ ಲೇಔಟ್ನಲ್ಲಿ ತಡರಾತ್ರಿ ನಡೆದಿದೆ.
ಮೃತ ಕಾರ್ಮಿಕನನ್ನು ಸೈಯದ್ ಮೆಹಬೂಬ್ ಪಾಷ ಎಂದು ಗುರುತಿಸಲಾಗಿದ್ದು, ಪರಾರಿಯಾಗಿರುವ ಆರೋಪಿ ಖಾನಿಯಾ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.ಈ ಇಬ್ಬರು ಕಾರ್ಮಿಕರು ಜೆಲ್ಲಿ, ಮರಳನ್ನು ಟಾಟಾ ಏಸ್ ಗಾಡಿಗಳಿಗೆ ಲೋಡ್ ಮಾಡುವ ಕೆಲಸ ಮಾಡುತ್ತಿದ್ದರು. ಕಳೆದ ಕೆಲವು ವರ್ಷಗಳಿಂದ ರಾಜು ಎನ್ನುವ ವ್ಯಕ್ತಿ ಜೊತೆಗೂಡಿ ಮೆಹಬೂಬ್ ಜೆಲ್ಲಿ, ಮರಳು ವ್ಯಾಪಾರ ಮಾಡುತ್ತಿದ್ದರು.
ನಿನ್ನೆ ರಾತ್ರಿ ರಾಜು, ಮೆಹಬೂಬ್ಗೆ ಕರೆ ಮಾಡಿ ಬಾಡಿಗೆಯಿದೆ ಬಾ ಎಂದು ಕರೆದಿದ್ದಾನೆ. ಹಾಗಾಗಿ ರಾತ್ರಿ 8.45ರ ಸುಮಾರಿಗೆ ಮೆಹಬೂಬ್ ಸ್ಥಳಕ್ಕೆ ಹೋಗಿದ್ದನು. ಆವೇಳೆ ಅಲ್ಲಿದ್ದ ಖಾನಿಯಾ ಎನ್ನುವ ಮತ್ತೊಬ್ಬ ಕಾರ್ಮಿಕ ಜೊತೆ ಗಲಾಟೆಯಾಗಿದೆ.
ಇವರಿಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ತಿರುಗಿದಾಗ ಖಾನಿಯಾ ಕೈಗೆ ಸಿಕ್ಕದ ಸಿಮೆಂಟ್ ಚೀಲ ಕಟ್ ಮಾಡಲು ಬಳಸುತ್ತಿದ್ದ ಚಾಕುವಿನಿಂದ ಮೆಹಬೂಬ್ಗೆ ಇರಿದು ಕೊಲೆ ಮಾಡಿ ಪಾರಾರಿಯಾಗಿದ್ದಾನೆ. ತಕ್ಷಣ ಅಂಗಡಿ ಪಕ್ಕದ ಪರಿಚಯಸ್ಥರು ಮೆಹಬೂಬ್ ಕುಟುಂಬಸ್ಥರಿಗೆ ಕರೆ ಮಾಡಿ ಯಾರೋ ಹೊಡೆದಿರುವುದಾಗಿ ಮಾಹಿತಿ ನೀಡಿದ್ದಾರೆ.
ಕೂಡಲೇ ಸ್ಥಳಕ್ಕೆ ಆಗಮಿಸಿದ ಕುಟುಂಬಸ್ಥರು ಮೆಹಬೂಬ್ನನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ. ವಿಷಯ ತಿಳಿದು ಸಂಪಿಗೆ ಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ದಾವಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಆರೋಪಿ ಪತ್ತೆಗೆ ಕಾರ್ಯಾಚರಣೆ ಕೈಗೊಂಡಿದ್ದಾರೆ.