ಬೆಂಗಳೂರು, ಅ.11- ನಿರ್ಮಾಣ ಹಂತದ ವಸತಿ ಸಮುಚ್ಚಯದಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು 13ನೇ ಮಹಡಿಯಿಂದ ಕೆಳಗೆ ಬಿದ್ದು, ಮೃತಪಟ್ಟಿರುವ ದುರ್ಘಟನೆ ಬೆಳ್ಳಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ರಾಮ್‌ದೇವ್ ಮೆಡಿಕಲ್ಸ್ ಬಳಿ ನಡೆದಿದೆ. ಪಶ್ಚಿಮ ಬಂಗಾಳದ ಸೊನ್‌ಪುರ್‌ನ ಅಮಿರ್ ಹುಸೇನ್(33), ಮುಮ್ತಾಜ್ ಅಲಿ ಮೋಲಾ(28) ಮೃತ ದುರ್ದೈವಿಗಳು.
ಡಿಎನ್‌ಆರ್ ಹರಿಸ್ತಾ ಡೆವಲಪರ್‌ರಸ ವತಿಯಿಂದ ಇಲ್ಲಿ ವಸತಿ ಸಮುಚ್ಚಯವನ್ನು ನಿರ್ಮಿಸಲಾಗುತ್ತಿತ್ತು. ಇದನ್ನು ಇಂಪಿರಿಯಲ್ ಬಿಲ್ಡ್ ಟೆಕ್ ಪ್ರವೇಟ್ ಲಿಮಿಟೆಡ್ ಸಂಸ್ಥೆ ಕಾಮಗಾರಿಯ ಜವಾಬ್ದಾರಿ ವಹಿಸಿಕೊಂಡಿತ್ತು.
ನಿನ್ನೆ ಸಂಜೆ 13ನೇ ಅಂತಸ್ತಿನಲ್ಲಿ ಸುಮಾರು 10 ಮಂದಿ ಕಾರ್ಮಿಕರು ಬಾಲ್ಕಾನಿ ನಿರ್ಮಾಣ ಕಾಮಗಾರಿಯನ್ನು ಮಾಡುತ್ತಿದ್ದರು. ಈ ವೇಳೆ ಏಕಾಏಕಿ ಅಳವಡಿಸಿದ್ದ ಸೆಂಟ್ರಿಂಗ್ ಕುಸಿದು ಮೇಲಿನಿಂದ ಇಬ್ಬರು ಕೆಳಗೆ ಬಿದಿದ್ದಾರೆ. ತೀವ್ರವಾಗಿ ಗಾಯಗೊಂಡ ಅವರು ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಕೊನೆಯುಸಿರೆಳೆದಿದ್ದಾರೆ.
ಬೆಳ್ಳಂದೂರು ಠಾಣೆ ಪೊಲೀಸರು ಘಟನೆಗೆ ಕುರಿತಂತೆ ನಿರ್ಲಕ್ಷ್ಯ ಸೇರಿದಂತೆ ಹಲವು ಕಾಯ್ದೆಯಡಿ ಪ್ರಕರಣ ದಾಖಲಿಸಿ ಕಟ್ಟಡ ನಿರ್ಮಾಣ ಕಾಮಗಾರಿ ಉಸ್ತುವಾರಿ ವತಿಯಿಂದ ಇಂಪಿರಿಯಲ್ ಬಿಲ್ಡ್ ಟೆಕ್‌ನ ಸೈಟ್ ಎಂಜಿನಿಯರ್ ಸೇರಿದಂತೆ ಆರು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.