ಬೆಂಗಳೂರು,ಫೆ.11– ಮೈಸೂರಿನ ಉದಯಗಿರಿಯಲ್ಲಿ ಈಗ ಪರಿಸ್ಥಿತಿ ಶಾಂತವಾಗಿದ್ದು, ಕಲ್ಲು ತೂರಾಟ ನಡೆಸಿ ದಾಂಧಲೆ ಮಾಡಿ ಪರಾರಿಯಾಗಿರುವ ಆರೋಪಿಗಳ ಬಂಧನದ ಪ್ರಕ್ರಿಯೆ ನಡೆಯುತ್ತಿದೆ ಎಂದು ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾದ ಹಿತೇಂದ್ರಅವರು ತಿಳಿಸಿದ್ದಾರೆ.
ಈ ಸಂಜೆಯೊಂದಿಗೆ ಮಾತನಾಡಿದ ಅವರು, ಕಲ್ಲುತೂರಾಟ ನಡೆಸಿ ಪರಾರಿಯಾಗಿರುವವರ ಬಂಧನಕ್ಕೆ ಸಿಸಿಕ್ಯಾಮರಾಗಳು ಹಾಗೂ ಮೊಬೈಲ್ನಲ್ಲಿ ಸೆರೆ ಹಿಡಿಯಲಾಗಿರುವ ಛಾಯಾಚಿತ್ರಗಳನ್ನು ಆಧರಿಸಿ ಶೋಧ ಕಾರ್ಯ ನಡೆಸಲಾಗ್ತುತಿದೆ ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಿದ್ದೇವೆ ಎಂದರು.
ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ್ದ ವ್ಯಕ್ತಿಯನ್ನ ಉದಯಗಿರಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆ ಸಂದರ್ಭದಲ್ಲಿ ಗುಂಪೊಂದು ಠಾಣೆ ಮುಂದೆ ಜಮಾಯಿಸಿದಾಗ ಪರಿಸ್ಥಿತಿ ಉದ್ವಿಗ್ನಗೊಂಡು ಪ್ರತಿಭಟನಾಕಾರರು ಪೊಲೀಸ್ ವಾಹನಗಳ ಮೇಲೆ ಕಲ್ಲು ತೂರಾಟ ಮಾಡಿದ್ದರಿಂದ ವಾಹನಗಳ ಗಾಜು ಹೊಡೆದು ಜಖಂಗೊಂಡಿವೆ.
ಆ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿ ಸೇರಿದಂತೆ 6 ಕ್ಕೂ ಹೆಚ್ಚು ಸಿಬ್ಬಂದಿಗೆ ಕಲ್ಲು ತಾಗಿ ಪೆಟ್ಟಾಗಿದೆ. ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು.ಉದಯಗಿರಿಯಲ್ಲಿ ಸ್ಥಳೀಯ ಪೊಲೀಸರ ಜೊತೆಗೆ ಕೆಎಸ್ಆರ್ಪಿ, ಡಿಎಆರ್ ತುಕಡಿಗಳನ್ನು ನಿಯೋಜಿಸಲಾಗಿದೆ. ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ. ಪರಿಸ್ಥಿತಿ ಶಾಂತಿಯುತವಾಗಿದೆ ಎಂದು ಅವರು ಈ ಸಂಜೆಗೆ ತಿಳಿಸಿದರು.