ಬೆಂಗಳೂರು,ಜ.18- ಮಂಗಳೂರಿನ ಉಲ್ಲಾಳದ ಕೋಟೆಕಾರ್ ಬ್ಯಾಂಕ್ ದರೋಡೆ ಮಾಡಿದ ದರೋಡೆಕೋರರು ಪೊಲೀಸರ ತನಿಖೆಯ ಹಾದಿ ತಪ್ಪಿಸಲು ಚಳ್ಳೆಹಣ್ಣು ತಿನ್ನಿಸಿ ಎರಡು ಭಾಗಗಳಾಗಿ ಬೇರ್ಪಟ್ಟು ಒಂದು ಕಾರಿನಲ್ಲಿ ಮುಂಬೈ ಕಡೆಗೆ ಮತ್ತೊಂದು ಕಾರಿನಲ್ಲಿ ಕೇರಳದ ಕಡೆಗೆ ಹೋಗಿರುವುದು ಗೊತ್ತಾಗಿದೆ.
ದರೋಡೆಕೋರರು ಒಂದೇ ರೀತಿಯ ಎರಡು ಕಾರುಗಳನ್ನು ಬಳಸಿರುವುದರಿಂದ ಪೊಲೀಸರು ಗೊಂದಲಕ್ಕೀಡಾಗಿದ್ದಾರೆ. ದರೋಡೆಕೋರರು ಕೋಟೆಕಾರ್ಬ್ಯಾಂಕ್ ದರೋಡೆ ಮಾಡಿದ ನಂತರ ತಪ್ಪಿಸಿಕೊಳ್ಳಲು ಚಾಲಕಿ ಐಡಿಯಾ ಬಳಸಿರುವುದು ಗೊತ್ತಾಗಿದೆ.
ಕೆಲವೇ ನಿಮಿಷಗಳಲ್ಲಿ ಬ್ಯಾಂಕ್ ಲೂಟಿ ಮಾಡಿ 6 ಕೋಟಿ ರೂ. ಹೆಚ್ಚು ಮೌಲ್ಯದ ಚಿನ್ನಾಭರಣ ಹಾಗೂ ಹಣ ದರೋಡೆ ಮಾಡಿ ಚೀಲಗಳಲ್ಲಿ ತುಂಬಿಸಿಕೊಂಡು ಕಾರಿನಲ್ಲಿ ಮಂಗಳೂರು ಹೆದ್ದಾರಿ ಮಾರ್ಗವಾಗಿ ಹೋಗಿದ್ದು, ನಂತರ ದರೋಡೆಕೋರರು ಬೇರ್ಪಟ್ಟಿದ್ದಾರೆ.
ಒಂದು ಕಾರು ಮುಂಬೈ ಕಡೆಗೆ ಮತ್ತೊಂದು ಕಾರು ಕೇರಳದ ಕಡೆಗೆ ಹೋಗಿರುವುದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ. ದರೋಡೆ ವೇಳೆ ಬ್ಯಾಂಕ್ ಸಿಬ್ಬಂದಿಯ ಮೊಬೈಲ್ಗಳನ್ನು ಕಸಿದುಕೊಂಡಿದ್ದ ದರೋಡೆಕೋರರು ಆ ಮೊಬೈಲ್ಗಳನ್ನು ಮಂಗಳೂರು- ಉಡುಪಿ ಗಡಿ ಪ್ರದೇಶವಾದ ಹೆಜಮಾಡಿ ಬಳಿ ಎಸೆದಿರುವುದು ಪತ್ತೆಯಾಗಿದ್ದು, ಪೊಲೀಸರು ವಶಕ್ಕೆ ಪಡೆದಿದ್ದಾರೆ.
5 ತಂಡ ರಚನೆ
ಬ್ಯಾಂಕ್ ದರೋಡೆಕೋರರ ಬಂಧನಕ್ಕೆ 5 ತಂಡಗಳನ್ನು ರಚಿಸಲಾಗಿದೆ. ಈ ಪೈಕಿ 3 ತಂಡಗಳು ಕೇರಳ ರಾಜ್ಯಕ್ಕೂ ಹೋಗಿದ್ದರೆ, 2 ತಂಡಗಳು ಮಹಾರಾಷ್ಟ್ರಕ್ಕೆ ಹೋಗಿದ್ದು, ಶೋಧ ನಡೆಸುತ್ತಿವೆ. ದರೋಡೆಕೋರರು ಪರಾರಿಯಾಗಿ ರುವ ಮಾರ್ಗದ ರಸ್ತೆಗಳಲ್ಲಿನ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿ ಪೊಲೀಸರು ಚಹರೆಗಳನ್ನು ಆಧರಿಸಿ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ.