ಬೆಂಗಳೂರು,ಡಿ.2- ಆರೋಗ್ಯ ಸರಿಯಿಲ್ಲದಿರುವುದರಿಂದ ಪೊಲೀಸ್ ವಿಚಾರಣೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದು ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಶ್ರೀ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ಹೇಳಿದ್ದಾರೆ.
ಸ್ವಾತಂತ್ರ್ಯ ಉದ್ಯಾನವನದ ಬಳಿ ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಮುಸ್ಲಿಂ ಸಮುದಾಯದವರಿಗೆ ಮತದಾನದ ಹಕ್ಕು ರದ್ದುಪಡಿಸಬೇಕೆಂದು ಶ್ರೀಗಳು ಮಾತನಾಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಉಪ್ಪಾರಪೇಟೆ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇಂದು ಠಾಣೆಗೆ ಬಂದು ವಿಚಾರಣೆಗೆ ಹಾಜರಾಗಲು ಪೊಲೀಸರು ಸ್ವಾಮೀಜಿವರಿಗೆ ನೋಟೀಸ್ ನೀಡಿದ್ದರು.
ಈ ಹಿನ್ನಲೆಯಲ್ಲಿ ಇಂದು ಅವರು ವಿಚಾರಣೆಗೆ ಹಾಜರಾಗಬೇಕಿತ್ತು. ಆದರೆ ಆರೋಗ್ಯ ಸರಿ ಇಲ್ಲದಿರುವುದರಿಂದ ವಿಚಾರಣೆಗೆ ಹಾಜರಾಗಲು ಆಗುತ್ತಿಲ್ಲ ಎಂದು ಶ್ರೀಗಳು ಪೊಲೀಸ್ ಅಧಿಕಾರಿಗಳಿಗೆ ಪತ್ರದ ಮೂಲಕ ತಿಳಿಸಿದ್ದಾರೆ.
ಬಾಯಿ ತಪ್ಪಿನಿಂದ ತಾವು ಹೇಳಿಕೆ ನೀಡಿದ್ದಾಗಿ ಹಾಗೂ ಅದಕ್ಕೆ ವಿಷಾದವನ್ನು ವ್ಯಕ್ತಪಡಿಸುವುದಾಗಿ ಸ್ವಾಮೀಜಿ ಹೇಳಿದ್ದರು. ಅಲ್ಲದೆ ಈ ವಿಚಾರವನ್ನು ಬೆಳೆಸದಂತೆ ಮುಕ್ತಾಯಗೊಳಿಸಬೇಕೆಂದು ಕೋರಿದ್ದರು.
ಈ ನಡುವೆ ಸುದ್ದಿಗಾರರೊಂದಿಗೆ ಮಾತನಾಡಿರುವ ಶ್ರೀ ಚಂದ್ರಶೇಖರನಾಥ ಸ್ವಾಮೀಜಿಯವರು, ನ.26ರಂದು ತಾವು ಹೇಳಿಕೆ ನೀಡಿದ್ದು, ಮರುದಿನ ಹೇಳಿಕೆಯ ಬಗ್ಗೆ ಸ್ಪಷ್ಟನೆ ನೀಡಲಾಯಿತು. ಯಾವಾಗ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ ಎಂಬುದು ಗೊತ್ತಿಲ್ಲ ಎಂದಿದ್ದಾರೆ.
ನಮ ಮಠಕ್ಕೆ ಪೊಲೀಸರು ಬಂದು ನೋಟೀಸ್ ಕೊಟ್ಟು ಹೋಗಿದ್ದಾರೆ. ಪೊಲೀಸರು ಬಂದು ಕೇಳಿದರೆ ಅದಕ್ಕೆ ಉತ್ತರ ಕೊಡುವೆ ಎಂದು ಹೇಳಿದ್ದಾರೆ. ನನಗೆ ಹುಷಾರಿಲ್ಲದಿರುವುದರಿಂದ ವೈದ್ಯರು ಬಂದು ಚಿಕಿತ್ಸೆ ನೀಡುತ್ತಿದ್ದಾರೆ. ನಡೆಯಲು ಆಗುತ್ತಿಲ್ಲ. ಕುಳಿತುಕೊಳ್ಳಲು ಆಗುತ್ತಿಲ್ಲ. 80 ವರ್ಷ ವಯಸ್ಸಾಗಿದೆ. ಜೊತೆಗೆ ಹುಷಾರಿಲ್ಲ ಎಂದು ಹೇಳೀದ್ದಾರೆ.
80 ವರ್ಷ ಮೇಲ್ಪಟ್ಟವರ ವಿಚಾರಣೆಗೆ ಸಂಬಂಧಿಸಿದಂತೆ ಅವರಿದ್ದೆಡೆಯೇ ಹೇಳಿಕೆ ಪಡೆಯಬೇಕೆಂಬುದು ಇದೆಯಂತೆ. ಅದರ ಬಗ್ಗೆ ಸರಿಯಾಗಿ ಗೊತ್ತಿಲ್ಲ ಎಂದು ಸ್ವಾಮೀಜಿ ತಿಳಿಸಿದ್ದಾರೆ.