Saturday, October 5, 2024
Homeರಾಜ್ಯಜನರ ಆರೋಗ್ಯ ಹಾಳುಮಾಡುತ್ತಿವೆ ಸ್ವಚ್ಛತೆ ಕಾಪಾಡಿಕೊಳ್ಳದ ಹೋಟೆಲ್‌ಗಳು

ಜನರ ಆರೋಗ್ಯ ಹಾಳುಮಾಡುತ್ತಿವೆ ಸ್ವಚ್ಛತೆ ಕಾಪಾಡಿಕೊಳ್ಳದ ಹೋಟೆಲ್‌ಗಳು

ಬೆಂಗಳೂರು,ಜೂ.12- ಸಿಲಿಕಾನ್‌ ಸಿಟಿಯಲ್ಲಿ ಹೈಜೆನಿಕ್‌ ಎನ್ನುವುದೇ ಮಾಯವಾಗಿದೆ. ರಸ್ತೆ ಬದಿಗಳಲ್ಲಿ ಎಲ್ಲೆಂದರಲ್ಲಿ ಅಲ್ಲಿ ಎಗ್ಗಿಲ್ಲದೆ ತಿಂಡಿ ತಿನಿಸುಗಳನ್ನು ಮಾರಾಟ ಮಾಡುವುದು ಸಾಮಾನ್ಯವಾಗಿದ್ದು, ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ.
ಇಷ್ಟೆಲ್ಲಾ ಆದರೂ ಬಿಬಿಎಂಪಿ ಆರೋಗ್ಯಾಧಿಕಾರಿಗಳು ಮಾತ್ರ ಜನರ ಆರೋಗ್ಯಕ್ಕೂ ನಮಗೂ ಸಂಬಂಧವಿಲ್ಲ ಎನ್ನುವಂತೆ ಕೈ ಕಟ್ಟಿ ಕುಳಿತಿರುವುದಕ್ಕೆ ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ನಗರದ ಬಹುತೇಕ ಪ್ರದೇಶಗಳ ರಸ್ತೆ ಬದಿಗಳಲ್ಲಿ ಮತ್ತು ರಾಜಕಾಲುವೆಗಳ ಪಕ್ಕದಲ್ಲೇ ಹೋಟೆಲ್‌ಗಳನ್ನು ತೆರೆದು ವ್ಯಾಪಾರ ಮಾಡುವುದು ಕಂಡುಬರುತ್ತದೆ ಕೆಲವು ಪ್ರದೇಶಗಳಲ್ಲಿ ಹೈಜೆನಿಕ್‌ ಕಾಪಾಡಿಕೊಳ್ಳದಿರುವುದು ಕಂಡು ಬಂದರೂ ಆರೋಗ್ಯಾಧಿಕಾರಿಗಳು ಕಣುಚ್ಚಿ ಕುಳಿತಿರುವುದು ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಅದರಲ್ಲೂ ನಗರದ ಹೃದಯ ಭಾಗದಲ್ಲಿರುವ ಗುಬ್ಬಿ ವೀರಣ್ಣ ಕಲಾಕ್ಷೇತ್ರದ ಪಕ್ಕದ ರಸ್ತೆ ತುಂಬಾ ಹೋಟೆಲ್‌ ವ್ಯಾಪಾರ ಭರ್ಜರಿಯಾಗಿ ನಡೆಯುತ್ತಿದೆ. ಕೆಲವರು ಬಿಬಿಎಂಪಿಯಿಂದ ವ್ಯಾಪಾರ ಪರವಾನಿಗಿ ಪಡೆದುಕೊಂಡಿದ್ದರೆ ಉಳಿದವರು ಯಾವುದೇ ಅನುಮತಿ ಇಲ್ಲದೆ ರಸ್ತೆ ಬದಿಯಲ್ಲೇ ಹೋಟೆಲ್‌ ತೆರೆದು ವ್ಯಾಪಾರ ಮಾಡುತ್ತಿದ್ದಾರೆ.

ಹೀಗಾಗಿ ಇಡೀ ರಸ್ತೆ ಗಬ್ಬೇದ್ದು ಹೋಗಿದ್ದು ಅಲ್ಲಿ ಹೈಜೆನಿಕ್‌ ಎನ್ನವುದೇ ಮಾಯವಾಗಿದೆ. ಈ ರಸ್ತೆಯಲ್ಲಿರುವ ಹೋಟೆಲ್‌ಗಳಲ್ಲಿ ಊಟ ಮಾಡಿರುವ ಕೆಲವರಿಗೆ ವಾಂತಿ ಭೇದಿ ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.

ಅದೇ ರಸ್ತೆಯಲ್ಲಿ ಊಟ ಮಾಡಿ ತೀವ್ರ ಅನಾರೋಗ್ಯಕ್ಕೆ ತುತ್ತಾಗಿ ಇತ್ತಿಚೆಗಷ್ಟೇ ಚೇತರಿಸಿಕೊಂಡಿರುವ ವ್ಯಕ್ತಿಯೊಬ್ಬರು ಗುಬ್ಬಿ ವೀರಣ್ಣ ಕಲಾಕ್ಷೇತ್ರದ ಪಕ್ಕದ ರಸ್ತೆಯಲ್ಲಿರುವ ಪ್ರದೇಶಕ್ಕೆ ತೆರಳಿ ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸುವಂತೆ ನೀಡಿದ್ದ ಸಲಹೆ ಮೇರೆಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ ಅಲ್ಲಿನ ಕರ್ಮಕಾಂಡ ಬಯಲಾಗಿದೆ.

ಈ ರಸ್ತೆಯಲ್ಲಿರುವುದು ಬಹುತೇಕ ಹೋಟೆಲ್‌ಗಳೇ ಬಹುತೇಕ ಹೋಟೆಲ್‌ಗಳಲ್ಲಿ ಹೈಜೆನಿಕ್‌ ಎನ್ನುವುದೇ ಇಲ್ಲ. ಅಂತಹ ಸ್ಥಳಗಳಲ್ಲಿ ಊಟ ಮಾಡಿದರೆ ಅಂತವರನ್ನು ಆ ದೇವರೇ ಕಾಪಾಡಬೇಕು ಎನ್ನುವಂತಹ ಪರಿಸ್ಥಿತಿಯಿರುವುದು ಕಂಡು ಬಂದಿದೆ.

ಈಗಲಾದರೂ ಬಿಬಿಎಂಪಿ ಆರೋಗ್ಯಾಧಿಕಾರಿಗಳು ಎಚ್ಚೆತ್ತುಕೊಂಡು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಕಾನೂನುಬಾಹಿರವಾಗಿ ನಡೆಸುತ್ತಿರುವ ಹೋಟೆಲ್‌ಗಳು ಹಾಗೂ ಹೈಜೆನಿಕ್‌ ಕಾಪಾಡಿಕೊಳ್ಳದೆ ಇರುವಂತವರ ವಿರುದ್ಧ ಕ್ರಮ ಕೈಗೊಳ್ಳುವ ಮೂಲಕ ಜನರ ಆರೋಗ್ಯ ರಕ್ಷಣೆಗೆ ಸಹಕರಿಸಬೇಕು ಎನ್ನುವುದೇ ಈ ಲೇಖನದ ಉದ್ದೇಶವಾಗಿದೆ.

RELATED ARTICLES

Latest News