ನವದೆಹಲಿ, ಜೂ. 17 (ಪಿಟಿಐ) ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಮಾಡಿಕೊಂಡ ಮನವಿಯಂತೆ ಮಣಿಪುರದಲ್ಲಿ ಶಾಂತಿ ನೆಲೆಸುವಂತೆ ನೋಡಿಕೊಳ್ಳಲು ಕೇಂದ್ರ ಸರ್ಕಾರ ಮನಸು ಮಾಡಿದೆ.
ಹೀಗಾಗಿ ಒಂದು ವರ್ಷದಿಂದ ಜನಾಂಗೀಯ ಹಿಂಸಾಚಾರಕ್ಕೆ ಸಾಕ್ಷಿಯಾಗಿರುವ ಮಣಿಪುರದಲ್ಲಿ ಭದ್ರತಾ ಪರಿಸ್ಥಿತಿಯನ್ನು ಕೇಂದ್ರ ಗಹ ಸಚಿವ ಅಮಿತ್ ಶಾ ಇಂದು ಪರಿಶೀಲನೆ ನಡೆಸಲಿದ್ದಾರೆ.ಶಾ ಭೇಟಿ ಸಂದರ್ಭದಲ್ಲಿ ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮತ್ತು ಇತರ ಭದ್ರತಾ ಪಡೆಗಳ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.
ನಿನ್ನೆ ಮಣಿಪುರ ರಾಜ್ಯಪಾಲರಾದ ಅನುಸೂಯಾ ಉಯ್ಕೆ ಅವರು ಷಾ ಅವರನ್ನು ಭೇಟಿ ಮಾಡಿದ್ದರು ಮತ್ತು ಈಶಾನ್ಯ ರಾಜ್ಯದಲ್ಲಿ ಚಾಲ್ತಿಯಲ್ಲಿರುವ ಪರಿಸ್ಥಿತಿಯನ್ನು ಚರ್ಚಿಸಿದ್ದಾರೆ ಎಂದು ನಂಬಲಾಗಿದೆ.
ಕಳೆದ ವರ್ಷದ ಮೇ 3 ರಂದು ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ಭುಗಿಲೆದ್ದಿದ್ದು, ಅಲ್ಲಿಂದೀಚೆಗೆ, ಮುಂದುವರಿದ ಹಿಂಸಾಚಾರದಲ್ಲಿ ಕುಕಿ ಮತ್ತು ಮೈತೇಯಿ ಎರಡೂ ಸಮುದಾಯಗಳಿಗೆ ಸೇರಿದ 220 ಕ್ಕೂ ಹೆಚ್ಚು ಜನರು ಮತ್ತು ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ.
ಮಣಿಪುರದ ಜನಸಂಖ್ಯೆಯ ಸುಮಾರು 53 ಪ್ರತಿಶತದಷ್ಟು ಮೈತೇಯಿಗಳು ಇಂಫಾಲ್ ಕಣಿವೆಯಲ್ಲಿ ವಾಸಿಸುತ್ತಿದ್ದಾರೆ, ಆದರೆ ನಾಗಾಗಳು ಮತ್ತು ಕುಕಿಗಳನ್ನು ಒಳಗೊಂಡಿರುವ ಬುಡಕಟ್ಟು ಜನಾಂಗದವರು ಶೇ.40 ರಷ್ಟಿದ್ದಾರೆ ಮತ್ತು ಮುಖ್ಯವಾಗಿ ಬೆಟ್ಟದ ಜಿಲ್ಲೆಗಳಲ್ಲಿ ವಾಸಿಸುತ್ತಿದ್ದು ಈ ಎರಡು ಸಮುದಾಯಗಳ ನಡುವಿನ ಕದನ ಮಣಿಪುರವನ್ನು ಅಲ್ಲೋಲ ಕಲ್ಲೋಲ ಮಾಡಿದೆ.
ಒಂದು ವರ್ಷದಿಂದ ಮಣಿಪುರದಲ್ಲಿ ಹಿಂಸಾಚಾರ ನಡೆಯುತ್ತಿದ್ದರೂ ಅದನ್ನು ತಪ್ಪಿಸುವಲ್ಲಿ ವಿಫಲವಾಗಿರುವ ಬಗ್ಗೆ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಕಳವಳ ವ್ಯಕ್ತಪಡಿಸಿದ್ದರು.
ಮಣಿಪುರದ ಪರಿಸ್ಥಿತಿಯನ್ನು ಆದ್ಯತೆಯೊಂದಿಗೆ ಪರಿಗಣಿಸಬೇಕಾಗಿದೆ ಮತ್ತು ಚುನಾವಣಾ ವಾಕ್ಚಾತುರ್ಯದಿಂದ ಹೊರಬರಲು ಮತ್ತು ರಾಷ್ಟ್ರ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಗಮನಹರಿಸುವ ಅಗತ್ಯವಿದೆ ಎಂದು ಭಾಗವತ್ ಹೇಳಿದ್ದರು ಇದೀಗ ಅವರ ಮಾತಿಗೆ ಮನ್ನಣೆ ನೀಡುವ ರೀತಿಯಂತೆ ಸಮಸ್ಯೆ ಪರಿಹರಿಸುವ ಕಾರ್ಯಕ್ಕೆ ಶಾ ಮುಂದಾಗಿದ್ದಾರೆ.