Thursday, December 12, 2024
Homeರಾಜ್ಯಎಸ್ಎಂಕೆ ಅಂತ್ಯಕ್ರಿಯೆಯಲ್ಲಿ ಭಾಗಿಯಾದ ಕೇಂದ್ರ ಸಚಿವ ಹೆಚ್ಡಿಕೆ

ಎಸ್ಎಂಕೆ ಅಂತ್ಯಕ್ರಿಯೆಯಲ್ಲಿ ಭಾಗಿಯಾದ ಕೇಂದ್ರ ಸಚಿವ ಹೆಚ್ಡಿಕೆ

Union Minister HDK attends SMK's funeral

ಬೆಂಗಳೂರು, ಡಿ.11- ಕೇಂದ್ರದ ಭಾರೀ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿ ಅಂತಿಮ ನಮನ ಸಲ್ಲಿಸಲಿದ್ದಾರೆ. ಇಂದು ಬೆಳಿಗ್ಗೆ ನವದೆಹಲಿಯಿಂದ ನಗರಕ್ಕೆ ಆಗಮಿಸಿದ ಅವರು, ಮದ್ದೂರಿನ ಸೋಮನಹಳ್ಳಿಗೆ ತೆರಳಿ ಎಸ್.ಎಂ. ಕೃಷ್ಣ ಅವರ ಪಾರ್ಥೀವ ಅಂತ್ಯಕ್ರಿಯೆ ನಂತರ ಮರಳಿ ಇಂದು ರಾತ್ರಿ ದೆಹಲಿಗೆ ಮರಳುವ ಕಾರ್ಯಕ್ರಮವಿದೆ.

ವಿದ್ಯಾವಂತರು, ಸುಶಿಕ್ಷಿತರು ಆಗಿದ್ದ ಮಾಜಿ ಮುಖ್ಯಮಂತ್ರಿಗಳು, ಮಾಜಿ ಕೇಂದ್ರ ಸಚಿವರಾದ ಎಸ್.ಎಂ.ಕೃಷ್ಣ ಅವರ ನಿಧನ ನನಗೆ ವೈಯಕ್ತಿಕವಾಗಿ ನೋವು ತಂದಿದೆ. ಅವರು ಅಜಾತಶತ್ರುವಾಗಿದ್ದರು ಎಂದು ಕಂಬನಿ ಮಿಡಿದಿದ್ದಾರೆ.

ಹಲವಾರು ಸಲ ಕೃಷ್ಣ ಅವರನ್ನು ನಾನು ಭೇಟಿಯಾಗಿದ್ದೇನೆ. ನಾನು ಮೊದಲು ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದಾಗ ಅವರು ರಾಜ್ಯಸಭೆ ಸದಸ್ಯರಾಗಿದ್ದರು. ಮಾಜಿ ಸಚಿವರಾಗಿದ್ದ ಹೆಚ್.ಎನ್.ನಂಜೇಗೌಡರ ಮನೆಯಲ್ಲಿ ಭೇಟಿಯಾಗಿ ಆಶೀರ್ವಾದ ಪಡೆದಿದ್ದು ಈಗಲೂ ನೆನಪಿದೆ. ಮಂಡ್ಯ ಲೋಕಸಭೆ ಚುನಾವಣೆಗೆ ಎನ್ಡಿಎ ಅಭ್ಯರ್ಥಿಯಾದ ಮೇಲೆ ಸದಾಶಿವನಗರದ ಅವರ ನಿವಾಸದಲ್ಲಿ ಭೇಟಿಯಾಗಿ ಆಶೀರ್ವಾದ ಪಡೆದುಕೊಂಡಿದ್ದೆ. ಎರಡು ಬಾರಿ ಸಿಎಂ ಆಗಿದ್ದಾಗ ಅವರ ಅರ್ಶೀವಾದ ಪಡೆದಿರುವುದನ್ನು ನೆನಪು ಮಾಡಿಕೊಂಡಿದ್ದಾರೆ.

ದೇಶಕ್ಕೆ ರಾಜ್ಯಕ್ಕೆ ಅವರು ದೊಡ್ಡ ಮಟ್ಟದ ಕೊಡುಗೆ ನೀಡಿದ್ದಾರೆ. ರಾಜ್ಯದಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಅವರು ಗಣನೀಯವಾಗಿ ಕೆಲಸ ಮಾಡಿದ್ದಾರೆ.
ಅವರು ನಾಡಿಗೆ ಸಲ್ಲಿಸಿರುವ ಸೇವೆಯನ್ನು ನಾವು ಮರೆಯಲು ಸಾಧ್ಯವಿಲ್ಲ. ಮಾದರಿ ರಾಜಕಾರಣಿ. ಅವರ ಅಗಲಿಕೆ ನನಗೆ ನೋವು ತಂದಿದೆ ಎಂದು ಅವರು ಹೇಳಿದ್ದಾರೆ.

ಕೃಷ್ಣ ಅವರ ರಾಜಕೀಯದ ಸುದೀರ್ಘ ಪಯಣ ಸ್ಫೂರ್ತಿದಾಯಕ. ಬಹುಶಃ ಎಲ್ಲಾ ರಾಜಕಾರಣಿಗಳಿಗೂ ಅಷ್ಟು ಸುದೀರ್ಘ ರಾಜಕೀಯ ಅವಕಾಶ ಸಿಗುವುದು ಕಷ್ಟ. ಅವರಿಗೆ ನಾವು ಸಕಾಲೀನರಲ್ಲ, ನಾವು ಕಿರಿಯರು. ಅವರಿಂದ ಹಲವು ರೀತಿಯಲ್ಲಿ ಮಾರ್ಗದರ್ಶನ ಪಡೆದಿದ್ದೇನೆ. ಬೆಂಗಳೂರು ನಗರ ಅಭಿವೃದ್ಧಿ, ಐಟಿಬಿಟಿ ಕೊಡುಗೆ ಅಪಾರ. ನಮ ರಾಜ್ಯದ ಇತಿಹಾಸದಲ್ಲಿ ಕೃಷ್ಣ ಅವರು ಚಿರಸ್ಥಾಯಿಯಾಗಿ ಉಳಿಯಲಿದ್ದಾರೆ ಎಂದು ಅವರು ನುಡಿದಿದ್ದಾರೆ.

ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು, ಕೃಷ್ಣ ಅವರು ಬೇರೆ ಬೇರೆ ರಾಜಕೀಯ ಹಾದಿಯಿಂದ ಬಂದವರು. ಇಬ್ಬರಲ್ಲೂ ಮುಕ್ತವಾಗಿ ಚರ್ಚೆ ಮಾಡುವ ದಿನಗಳನ್ನು ನಾನು ಕಂಡಿದ್ದೇನೆ. ಇಬ್ಬರು ಕೂಡ ಪರಸ್ಪರ ಗೌರವ, ವಿಶ್ವಾಸದಿಂದ ಇದ್ದರು ಎಂದು ಕೇಂದ್ರ ಸಚಿವರು ತಿಳಿಸಿದ್ದಾರೆ.

RELATED ARTICLES

Latest News