ಬೆಂಗಳೂರು,ಜ.12– ರಾಜ್ಯಗಳಿಗೆ ಅನ್ಯಾಯ, ತಾರತಮ್ಯವಾಗಿರುವುದನ್ನು 50 ವರ್ಷ ರಾಜ್ಯ ಮತ್ತು ದೇಶದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್ನವರು ಏಕೆ ತೆಗೆದು ಹಾಕಲಿಲ್ಲ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 1952ರಲ್ಲಿ ಹಣಕಾಸು ಆಯೋಗವನ್ನು ಜಾರಿಗೆ ತಂದವರು ಕಾಂಗ್ರೆಸ್ನವರು. 50 ವರ್ಷಗಳಿಂದ ದೇಶ ಮತ್ತು ರಾಜ್ಯವನ್ನು ಆಳಿದ್ದಾರೆ. ರಾಜ್ಯಗಳಿಗೆ ಆಗುವ ಅನ್ಯಾಯವನ್ನು ಮಾರ್ಗಸೂಚಿಯಲ್ಲಿ ತೆಗೆದು ಹಾಕಬೇಕಿತ್ತು. ಈಗ ಜ್ಞಾನೋದಯವಾಗಿದೆಯೇ ಎಂದು ವ್ಯಂಗ್ಯವಾಡಿದರು.
ಹತ್ತು ವರ್ಷಗಳ ಕಾಲ ಡಾ.ಮನಮೋಹನ್ ಸಿಂಗ್ ಅವರೇ ಪ್ರದಾನಿಯಾಗಿದ್ದರು. ಆಗ ಮಾರ್ಗಸೂಚಿಯಲ್ಲಿ ಬದಲಾವಣೆ ಮಾಡಬೇಕಿತ್ತು ಎಂದು ಜಿಎಸ್ಟಿ ತಾರತಮ್ಯದ ಬಗ್ಗೆ ಕಾಂಗ್ರೆಸ್ ನಾಯಕರಿಂದ ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ನಡೆಸುವ ಕುರಿತಂತೆ ಅವರು ಪ್ರತಿಕ್ರಿಯಿಸಿದರು.
ತೆರಿಗೆ ವಿಚಾರ ಆಮೇಲೆ ಚರ್ಚೆ ಮಾಡಲಿ. ನೈಸ್ ಹೆಸರಿನಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಅಧಿಕಾರಿಗಳು, ಕಾಂಗ್ರೆಸ್ನವರು ಭೂಮಿ ಲೂಟಿ ಮಾಡಿದ್ದಾರೆ. ಸುಪ್ರೀಂಕೋರ್ಟ್ ತೀರ್ಪು ನೀಡಿ ಎಷ್ಟು ದಿನವಾಗಿದೆ? ಏನು ಮಾಡಿದ್ದಾರೆ? ಎಂದು ರಾಜ್ಯ ಸರ್ಕಾರದ ವಿರುದ್ದ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
2019ರ ಮಾರ್ಗಸೂಚಿ ಪ್ರಕಾರ ಹಣ ನೀಡಬೇಕಿದೆ. ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್, ಡಿನ್ನರ್ ಪಾರ್ಟಿ ಮಾಡಿಕೊಂಡು ಕುಂತಿದ್ದಾರೆ. ರೈತರಿಗೆ ಎರಡು ತಿಂಗಳಲ್ಲಿ ಹಣ ಕೊಡಬೇಕಲ್ಲವೇ? ರೈತರ ಬಗ್ಗೆ ಚಿಂತೆ ಕಾಳಜಿ ಇದೆಯೇ ಎಂದು ಹರಿಹಾಯ್ದರು.
ಮೈಸೂರು-ಮಂಡ್ಯದಲ್ಲಿ ಭತ್ತ ಖರೀದಿ ಕೇಂದ್ರ ಶುರು ಮಾಡಿಲ್ಲ. ರಾಜ್ಯದಲ್ಲಿ ಸರ್ಕಾರ ನಮ ರೈತರಿಗೆ ಏನು ಅಗತ್ಯವಿದೆಯೋ ಅದನ್ನು ಮಾಡಲಿ ಎಂದರು. ಟಿ.ಬಿ.ಜಯಚಂದ್ರ ಅವರು ಕಾನೂನು ಸಚಿವರಾಗಿದ್ದಾಗ ರಚನೆಯಾಗಿದ್ದ ಸದನ ಸಮಿತಿಯ ಅಧ್ಯಕ್ಷರಾಗಿದ್ದರು. ಅವರ ನೇತೃತ್ವದ ಸದನ ಸಮಿತಿ ನೈಸ್ ರಸ್ತೆಗೆ ಸಂಬಂಧಪಟ್ಟಂತೆ ನೀಡಿದ ವರದಿಯನ್ನು ಕಸದಬುಟ್ಟಿಗೆ ಹಾಕಿದ್ದೀರಿ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗ್ರೇಟ್ ಅಂತೆ. ದೇಶದಲ್ಲಿ ಯಾರೂ ಮಾಡದ ಕಾರ್ಯಮಾಡಿದ್ದಾರಂತೆ ಎಂದು ವ್ಯಂಗ್ಯವಾಡಿದರು.
ಮಾಜಿ ಸಚಿವ ಸಾ.ರಾ.ಮಹೇಶ್ ಮಾತನಾಡಿ, ಜೆಡಿಎಸ್ ಪಕ್ಷ ಒಂದು ಕುಟುಂಬವಿದ್ದಂತೆ. ಕುಟುಂಬದಲ್ಲಿ ಯಾವುದೇ ಅಸಮಾಧಾನ ಇಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಮಾಜಿ ಸಚಿವ ಪುಟ್ಟರಾಜು ಅವರೊಂದಿಗೆ ಶಾಸಕ ಜಿ.ಟಿ.ದೇವೇಗೌಡ ಅವರನ್ನು ಭೇಟಿ ಮಾಡಿದ್ದೆವು. ಅವರು ಇಂದಿನ ಸಭೆಗೆ ಬರಲು ಆಗುವುದಿಲ್ಲ. ಕ್ಷೇತ್ರದ ಕಡೆಗೆ ಹೆಚ್ಚು ಗಮನ ಕೊಡುವುದಾಗಿ ಹೇಳಿದ್ದಾರೆ. ಮುಂದೆ ಪಕ್ಷದ ಚಟುವಟಿಕೆಯಲ್ಲಿ ಭಾಗಿಯಾಗುವುದಾಗಿ ಹೇಳಿದ್ದಾರೆಂದು ಸ್ಪಷ್ಟಪಡಿಸಿದರು.
ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರಿಗೆ ಪಕ್ಷದ ಜವಾಬ್ದಾರಿ ನೀಡುವಂತೆ ಒತ್ತಡವಿದೆ. ಎಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರ ಸಚಿವರಾಗಿರುವುದರಿಂದ ರಾಜ್ಯಾಧ್ಯಕ್ಷರ ಜವಾಬ್ದಾರಿಯನ್ನು ನೀಡುವ ಬಗ್ಗೆ ಕಾರ್ಯಕರ್ತರು, ಮಾಜಿ ಸಚಿವರು, ಶಾಸಕರು ಒತ್ತಾಯಿಸುತ್ತಿದ್ದಾರೆ. ಸದ್ಯಕ್ಕೆ ಪಕ್ಷದ ಸದಸ್ಯತ್ವ ನೊಂದಣಿ ಪ್ರಕ್ರಿಯೆ ಮುಗಿಯಲಿ. ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆಯ ನಂತರ ರಾಜ್ಯಾಧ್ಯಕ್ಷರ ಆಯ್ಕೆಯಾಗಲಿ ಎಂಬುದು ನಿಖಿಲ್ಕುಮಾರಸ್ವಾಮಿ ಅವರ ಅಭಿಪ್ರಾಯವಾಗಿದೆ ಎಂದರು.