ಕೌಶಾಂಬಿ, ಮೇ 4: ಚಾಲಕನ ನಿಯಂತ್ರಣ ತಪ್ಪಿ ಕಾರು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಮೃತಪಟ್ಟು, ಮತ್ತೊಬ್ಬರು ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಗುಂಗ್ವಾ ಕಾ ಬಾಗ್ ಬಳಿ ಇಂದು ಮುಂಜಾನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮುಂಜಾನೆ 3:30 ರ ಸುಮಾರಿಗೆ ಕಾರಿನ ಚಾಲಕ ಮತ್ತೊಂದು ವಾಹನಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಪ್ರಯತ್ನಿಸಿ ಮರಕ್ಕೆ ಡಿಕ್ಕಿ ಹೊಡೆದಾಗ ಈ ಅಪಘಾತ ಸಂಭವಿಸಿದೆ ಎಂದು ಸ್ಟೇಷನ್ ಹೌಸ್ ಆಫೀಸರ್ (ಎಎಚ್ ಒ) ಸಿದ್ದಾರ್ಥ್ ಸಿಂಗ್ ತಿಳಿಸಿದ್ದಾರೆ.
ಮೃತರು ಚೈಲ್ ಪಟ್ಟಣದ ವಾರ್ಡ್ ಸಂಖ್ಯೆ 4, ಅಂಬೇಡ್ಕರ್ ನಗರ ಪ್ರದೇಶದಲ್ಲಿ ಮದುವೆಯಿಂದ ಹಿಂದಿರುಗುತ್ತಿದ್ದರು. ಸಮಾರಂಭದ ನಂತರ, ವರನ ಕಡೆಯ ನಾಲ್ವರು ಸದಸ್ಯರು ಚಾಲಕನೊಂದಿಗೆ ಹಿಂದಿರುಗುತ್ತಿದ್ದಾಗ ಅಪಘಾತ ಸಂಭವಿಸಿದೆ.
ಮೃತರನ್ನು ಪ್ರಯಾಗ್ ರಾಜ್ ನ ಪುರಮುಫ್ರಿ ಪ್ರದೇಶದ ನಿವಾಸಿಗಳಾದ ಸುನಿಲ್ ಕುಮಾರ್ ಪಟೇಲ್ (35), ರವಿ ಕುಮಾರ್ ಪಟೇಲ್ (38) ಮತ್ತು ಚಾಂದ್ ಬದನ್ (36) ಮತ್ತು ಬಲ್ಲಿಯಾ ಜಿಲ್ಲೆಯ ಬಟೇರಿಯಾ ಪೊಲೀಸ್ ಠಾಣೆ ಪ್ರದೇಶದ ನಿವಾಸಿ ವಿಕಾಸ್ ಕುಮಾರ್ (38) ಎಂದು ಗುರುತಿಸಲಾಗಿದೆ. ಚಾಲಕನಿಗೆ ಗಂಭೀರ ಗಾಯಗಳಾಗಿವೆ.ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. |