ಬೆಂಗಳೂರು,ಜ.06– ಇಬ್ಬರು ಪುಟ್ಟ ಕಂದಮಗಳಿಗೆ ವಿಷವುಣಿಸಿ ಕೊಂದು ದಂಪತಿ ಆತಹತ್ಯೆಗೆ ಶರಣಾಗಿರುವ ದಾರುಣ ಘಟನೆ ಸದಾಶಿವನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ.
ಆರ್‌ಎಂವಿ ಎಕ್ಸ್ ಟೆನ್ಷನ 2ನೇ ಹಂತದಲ್ಲಿ ಬಾಡಿಗೆ ಮನೆಯಲ್ಲಿ 2 ವರ್ಷಗಳಿಂದ ವಾಸವಾಗಿದ್ದ ಉತ್ತರಪ್ರದೇಶದ ಅಲಹಾಬಾದ್ ನಿವಾಸಿಗಳಾದ ಅನೂಪ್ ಕುಮಾರ್(38) ಪತ್ನಿ ರಾಖಿ (35) ಹಾಗೂ 5 ವರ್ಷದ ಹೆಣ್ಣು ಮಗು ಅನುಪ್ರಿಯಾ ಮತ್ತು 2 ವರ್ಷದ ಗಂಡು ಮಗು ಪ್ರಿಯಾಂಕ್ ಮೃತಪಟ್ಟವರು.
ಅನೂಪ್ ಕುಮಾರ್‌ರವರು ಸಾಪ್ಟವೇರ್ ಎಂಜಿನಿಯರ್. ಹೆಣ್ಣುಮಗುವಿಗೆ ಆರೋಗ್ಯ ಸಮಸ್ಯೆಯಿದ್ದ ಕಾರಣ ಮಕ್ಕಳನ್ನು ನೋಡಿಕೊಳ್ಳಲು ಹಾಗೂ ಮನೆಗೆಲಸಕ್ಕೆ ಇಬ್ಬರು ಕೆಲಸದವರನ್ನು ನೇಮಿಸಿಕೊಂಡಿದ್ದರು.ದಂಪತಿ ಅನ್ಯೋನ್ಯವಾಗಿಯೇ ಇದ್ದರು. ಆದರೆ ಈ ಕುಟುಂಬದಲ್ಲಿ ಏನಾಯಿತೋ ಏನೋ ಗೊತ್ತಿಲ್ಲ. ಬೆಳಗಾಗುವಷ್ಟರಲ್ಲಿ ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ನಂತರ ದಂಪತಿ ನೇಣಿಗೆ ಶರಣಾಗಿದ್ದಾರೆ.
ಮನೆ ಕೆಲಸದವರಿಗೆ ನಾವು ಪಾಂಡಿಚೆರಿಗೆ ಹೋಗಬೇಕು. ಬೆಳಗ್ಗೆ ಬೇಗ ಬರುವಂತೆ ನಿನ್ನೆ ತಿಳಿಸಿದ್ದರಿಂದ ಇಂದು ಬೆಳಗ್ಗೆ ಮನೆ ಕೆಲಸದಾಕೆ ಬಂದು ಕಾಲಿಂಗ್ ಬೆಲ್ ಒತ್ತಿದ್ದಾರೆ. ಮನೆಯೊಳಗಿನಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ ಬಾಗಿಲು ತಳ್ಳಿದ್ದಾರೆ. ಬಾಗಿಲು ತೆರೆದುಕೊಳ್ಳತ್ತಿದ್ದಂತೆ ಒಳಗೆ ಹೋಗಿ ನೋಡಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ತಕ್ಷಣ ನೆರೆಹೊರೆಯವರನ್ನು ಕರೆದು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಸುದ್ದಿತಿಳಿಯುತ್ತಿದ್ದಂತೆ ಸದಾಶಿವನಗರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.ಆತಹತ್ಯೆಗೆ ಮುನ್ನ ಅನೂಪ್ ಕುಮಾರ್ ಅವರು ತನ್ನ ಸಹೋದರನಿಗೆ ಆತಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಇ-ಮೇಲ್ ಮಾಡಿದ್ದಾರೆಂದು ಪೊಲೀಸರು ಹೇಳಿದ್ದಾರೆ.
ಆತಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ಆತಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಎಫ್‌ಎಸ್‌ಎಲ್ ಸಿಬ್ಬಂದಿ ಮನೆಯನ್ನೆಲ್ಲಾ ಶೋಧಿಸುತ್ತಿದ್ದು, ಡೆತ್ ನೋಟ್ ಏನಾದರೂ ಬರೆದಿರಬಹುದೇ ಎಂಬುದನ್ನು ಹುಡುಕುತ್ತಿದ್ದು, ಹೆಚ್ಚಿನ ಮಾಹಿತಿಗಳನ್ನು ಕಲೆ ಹಾಕುತ್ತಿದ್ದಾರೆ.
ನಾಲ್ವರ ಮೃತದೇಹಗಳನ್ನು ಎಂಎಸ್ ರಾಮಯ್ಯ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಿ ಅನೂಪ್ ಕುಮಾರ್‌ಅವರ ಕುಟುಂಬಸ್ಥರಿಗೆ ವಿಷಯ ತಿಳಿಸಿದ್ದಾರೆ. ಸಂಜೆ ವೇಳೆಗೆ ನಗರಕ್ಕೆ ಕುಟುಂಬದವರು ಬರುವ ಸಾಧ್ಯತೆ ಇದೆ.