ಬೆಂಗಳೂರು,ಅ.3– ಮುಡಾ ಹಗರಣ ಸಂಬಂಧ ಸಿಎಂ ಸಿದ್ದರಾಮಯ್ಯ ವಿರುದ್ಧ ಇಸಿಐಆರ್ ದಾಖಲಾಗಿರುವ ಬೆನ್ನಲ್ಲೇ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್‌ಗೆ ವಿಚಾರಣೆಗೆ ಹಾಜರಾಗಬೇಕೆಂದು ಜಾರಿನಿರ್ದೇಶನಾಲಯ(ಇಡಿ) ನೋಟಿಸ್ ಜಾರಿ ಮಾಡಿದೆ.
ಇ.ಡಿ ನೋಟಿಸ್‌ಗೆ ಉತ್ತರಿಸಿರುವ ಸಚಿವ ಭೈರತಿ ಸುರೇಶ್ ಅವರು ನವರಾತ್ರಿ ಹಬ್ಬ ಇರುವ ಕಾರಣ ವಿಚಾರಣೆಗೆ ಬರಲು ಸಾಧ್ಯವಾಗುತ್ತಿಲ್ಲ. ಹಬ್ಬ ಮುಗಿದ ತಕ್ಷಣ ಬರುವುದಾಗಿ ಹೇಳಿದ್ದಾರೆ. ಬೆಳಗ್ಗೆ ಹೆಬ್ಬಾಳದಲ್ಲಿರುವ ಭೈರತಿ ಸುರೇಶ್ ಅವರ ನಿವಾಸಕ್ಕೆ ತೆರಳಿದ್ದ ಇಡಿ ಅಧಿಕಾರಿಗಳ ತಂಡ ನೋಟಿಸ್ ನೀಡಿ ವಿಚಾರಣೆಗೆ ಆಗಮಿಸಬೇಕೆಂದು ಸೂಚನೆ ನೀಡಿದೆ.
ನಗರಾಭಿವೃದ್ದಿ ಸಚಿವರಾಗಿರುವ ಸುರೇಶ್ ಅವರು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದಲ್ಲಿ ನಡೆದಿರುವ ಅಕ್ರಮಗಳ ದಾಖಲೆಗಳನ್ನು ತೆಗೆದುಕೊಂಡು ಹೋಗಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.
ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಕುಟುಂಬದವರ ಹೆಸರು ಪ್ರಕರಣದಲ್ಲಿ ಕೇಳಿಬರುತ್ತಿದ್ದಂತೆ ರಾತ್ರೋರಾತ್ರಿ ಮೈಸೂರಿಗೆ ತೆರಳಿದ್ದ ಸಚಿವರು ಕೆಲವು ಮಹತ್ವದ ದಾಖಲೆಗಳನ್ನು ವಿಶೇಷ ವಿಮಾನದಲ್ಲಿ ತೆಗೆದುಕೊಂಡು ಬೆಂಗಳೂರಿಗೆ ಬಂದಿದ್ದಾರೆ ಎಂಬ ಆರೋಪವನ್ನು ಪ್ರತಿಪಕ್ಷದ ನಾಯಕರು ಮಾಡಿದ್ದರು.
ಇ.ಡಿಗೆ 500 ಪುಟಗಳ ದೂರು ನೀಡಿದ್ದ ಮೈಸೂರಿನ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರು ಕೆಲವು ಮಹತ್ವದ ಮಾಹಿತಿಯನ್ನು ತನಿಖಾಧಿಕಾರಿಗಳ ಗಮನಕ್ಕೆ ತಂದಿದ್ದರು ಎನ್ನಲಾಗಿದೆ. ಈ ದೂರಿನ ಆಧಾರದ ಮೇಲೆ ಇಡಿ ಅಧಿಕಾರಿಗಳು ಸಚಿವ ಸುರೇಶ್‌ಗೆ ನೋಟಿಸ್ ನೀಡಿದ್ದು, ಸರ್ಕಾರದ ಪ್ರಭಾವಿ ಸಚಿವರಿಗೆ ಕಾನೂನಿನ ಕುಣಿಕೆ ಬಿಗಿಯಾಗಿದೆ.
ಬೆಂಗಳೂರು: ಮುಡಾ ಹಗರಣದಲ್ಲಿ ಅಕ್ರಮವಾಗಿ ಹಣ ವರ್ಗಾವಣೆಯಾಗಿರುವುದಾಗಿ ದೂರು ನೀಡಿದ್ದ ಮೈಸೂರಿನ ಸ್ನೇಹಮಯಿ ಕೃಷ್ಣ ಅವರು ಜಾರಿ ನಿರ್ದೇಶಾನಾಲಯ (ಇಡಿ) ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ.
ಇಡಿ ನೋಟೀಸ್ ಕೊಟ್ಟಿಲ್ಲ ಬೈರತಿ ಸುರೇಶ್ ಸ್ಪಷ್ಟನೆ
ಮುಡಾ ಪ್ರಕರಣ ಸಂಬಂಧ ನನಗೆ ಯಾವುದೇ ರೀತಿಯ ನೋಟಿಸ್ ಬಂದಿಲ್ಲ. ಕೆಲವರು ಅನಗತ್ಯವಾಗಿ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಸ್ಪಷ್ಟಪಡಿಸಿದರು.
ತಮಗೆ ವಿಚಾರಣೆಗೆ ಹಾಜರಾಗಬೇಕೆಂದು ಇಡಿ ನೋಟಿಸ್ ನೀಡಿದೆ ಎಂಬುದರ ಕುರಿತು ಸ್ಪಷ್ಟನೆ ನೀಡಿದ ಅವರು, ನನ್ನ ಕಚೇರಿಗೆ ಆಗಲಿ, ಮನೆಗೆ ಯಾರು ಬಂದು ನೋಟಿಸ್ ಕೊಟ್ಟಿಲ್ಲ. ತಪ್ಪೇ ಮಾಡದಿದ್ದಾಗ ನನಗೇಕೆ ನೋಟಿಸ್ ಕೊಡುತ್ತಾರೆ ಎಂದು ಪ್ರಶ್ನೆ ಮಾಡಿದರು.
ನನ್ನನ್ನು ತೇಜೋವಧೆ ಮಾಡುವ ಪ್ರಯತ್ನ ನಡೆಸಲಾಗಿದೆ. ಕಾನೂನುಬದ್ದವಾಗಿ ನಾನು ಇಲಾಖೆಯನ್ನು ನಿರ್ವಹಿಸಿದ್ದೇನೆ. ಇಂಥ ಸುಳ್ಳು ಸುದ್ದಿಗಳನ್ನು ಯಾರೂ ಹಬ್ಬಿಸುತ್ತಿದ್ದಾರೋ ಗೊತ್ತಿಲ್ಲ. ಅವರಿಗೆ ಒಳ್ಳೆಯದಾಗಲಿ ಎಂದು ಪರೋಕ್ಷವಾಗಿ ತಮ ಎದುರಾಳಿಗಳಿಗೆ ತಿರುಗೇಟು ನೀಡಿದರು.
ವಿಚಾರಣೆಗೆ ಹಾಜರಾದ ಸ್ನೇಹಮಯಿ ಕೃಷ್ಣ:
ಮೈಸೂರು ಅಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆಯಲ್ಲಿ ಅವ್ಯವಹಾರ ಎಸಗಿರುವುದಾಗಿ ಸಿಎಂ ಸಿದ್ದರಾಮಯ್ಯ, ಪತ್ನಿ ಪಾರ್ವತಿ, ಬಾಮೈದ ಮಲ್ಲಿಕಾರ್ಜುನ ಹಾಗೂ ಅಂದಿನ ಮುಡಾ ಆಯುಕ್ತರ ವಿರುದ್ಧ ಲೋಕಾಯುಕ್ತ ಪೊಲೀಸರು ಎಫ್‌ಐಆರ್ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಈ ಮಧ್ಯೆ ಮುಡಾ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆಯಾಗಿದ್ದು ಸಿದ್ದರಾಮಯ್ಯ ಒಳಗೊಂಡಂತೆ ಸಂಬಂಧಿಸಿದ ವ್ಯಕ್ತಿಗಳ ವಿರುದ್ಧ ತನಿಖೆ ಕೋರಿ ಸ್ನೇಹಮಯಿ ಕೃಷ್ಣ ಅವರು ಸೆ.27ರಂದು ಇಡಿಗೆ ದೂರು ನೀಡಿದ್ದರು. ದೂರು ಸ್ವೀಕರಿಸಿದ ಅಧಿಕಾರಿಗಳು ಇಂದು ವಿಚಾರಣೆಗೆ ಬರುವಂತೆ ಅ.1ರಂದು ನೋಟಿಸ್ ಜಾರಿ ಮಾಡಿದ್ದರು. ಇದರಂತೆ ಇಂದು ಇಡಿ ಮುಂದೆ ಹಾಜರಾಗಿದ್ದರು.
ಇದಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಸ್ನೇಹಮಯಿ ಕೃಷ್ಣ, ವಿಚಾರಣೆಗೆ ಹಾಜರಾಗುವಂತೆ ಇಡಿ ನೋಟಿಸ್ ನೀಡಿ ನನ್ನ ಮತ್ತು ನನ್ನ ಕುಟುಂಬದ ಬಗ್ಗೆ ದಾಖಲೆ ಕೇಳಿದ್ದರು. ಆಸ್ತಿ ಪತ್ರ, ಬ್ಯಾಂಕ್ ಖಾತೆ ವಿವರ ಹಾಗೂ ಆದಾಯದ ಮಾಹಿತಿ ಕೇಳಿದ್ದರು. ಇಡಿ ಅಧಿಕಾರಿಗಳ ತನಿಖೆ ಪ್ರಕಾರ ಮೊದಲು ದೂರುದಾರರ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಾರೆ. ಹೀಗಾಗಿ ಮೊದಲು ನನ್ನ ವಿಚಾರಣೆಗೆ ಕರೆದಿದ್ದಾರೆ. 500 ಪುಟಗಳ ದಾಖಲೆಗಳನ್ನು ಸಲ್ಲಿಸಿ ವಿಚಾರಣೆಗೆ ಹಾಜರಾಗುತ್ತಿದ್ದೇನೆ ಎಂದರು.
ಪ್ರಕರಣದ ಹಿಂದೆ ಕಾಣದ ಕೈಗಳು ಇದೆಯಾ ಎಂಬ ಪ್ರಶ್ನೆಗೆ ಉತ್ತರಿಸಿ, ಇಲ್ಲಿ ಸಿಎಂ ವಿರುದ್ಧ ಹೋರಾಡಲು ಯಾರಾದರೇನು? ಸಮಾಜದ ಕಟ್ಟ ಕಡೆಯ ವ್ಯಕ್ತಿ ಕೂಡ ಸಿಎಂ ವಿರುದ್ಧ ಹೋರಾಟ ಮಾಡಬಹುದು. ಸಿಎಂ ವಿರುದ್ಧ ಒಬ್ಬ ಮಧ್ಯಮವರ್ಗದವನು ಹೋರಾಟ ಮಾಡಬಾರದಾ? ಕಾಣದ ಕೈಗಳು ಇದಾವೋ ಇಲ್ವೋ ಅನ್ನೋದು ಮುಖ್ಯವಲ್ಲ. ಸಿಎಂ ವಿರುದ್ಧ ಕೇಳಿ ಬಂದಿರುವ ಆರೋಪ ಎಷ್ಟು ಸತ್ಯ ಅಥವಾ ಸುಳ್ಳು ಅನ್ನೋದು ನೋಡಬೇಕು. ಹಾಗೇನಾದರೂ ನನ್ನ ಮೇಲೆ ಅನುಮಾನವಿದ್ದರೆ ಯಾವ ತನಿಖಾ ಸಂಸ್ಥೆಯಾದರೂ ನನ್ನ ವಿಚಾರಣೆ ನಡೆಸಬಹುದು ಎಂದರು.
ಸಿಬಿಐಗೆ ವರ್ಗಾವಣೆ ವಿಚಾರ ಸಂಬಂಧ ಈಗಾಗಲೇ ಲೋಕಾಯುಕ್ತ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ನನ್ನ ಕಣ್ಣ ಮುಂದೆಯೇ ಕೇಸ್ ತನಿಖೆ ಶುರು ಮಾಡಿದ್ದಾರೆ. ಆದರೂ ನಾನು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದೇನೆ. ಸಿಬಿಐ ತನಿಖೆ ಬಗ್ಗೆ ನಮ ವಕೀಲರು ವಾದ ಮಾಡಲಿದ್ದಾರೆ ಎಂದರು.