ಡಮಾಸ್ಕಸ್,ಡಿ.9– ಸಿರಿಯಾ ಬಂಡುಕೋರರ ಕೈವಶವಾಗಿ ಅಧ್ಯಕ್ಷ ಬಶರ್ ಅಲ್ ಅಸ್ಸಾದ್ ದೇಶ ಬಿಟ್ಟು ಪರಾರಿಯಾಗುತ್ತಿದ್ದಂತೆ ಅಮೆರಿಕ ಅಲ್ಲಿನ ಐಸಿಸ್ ನೆಲೆಗಳ ಮೇಲೆ ತೀವ್ರ ದಾಳಿ ನಡೆಸಿದೆ.
ಅಸ್ಸಾದ್ ದೇಶ ತೊರೆದಿರುವುದನ್ನು ಸೇನೆ ಖಚಿತಪಡಿಸಿದ್ದು, ಅಧ್ಯಕ್ಷರ ಅಧಿಕಾರ ಕೊನೆಗೊಂಡಿದೆ ಎಂದು ಹೇಳಿದೆ. ಐಸಿಸ್ ಎಂದು ಕರೆಯಲ್ಪಡುವ ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿ ಗುಂಪು ಸಿರಿಯಾದಲ್ಲಿ ತನ್ನನ್ನು ತಾನು ಮರುಸ್ಥಾಪಿಸಲು ಪ್ರಸ್ತುತ ಪರಿಸ್ಥಿತಿಯ ಲಾಭವನ್ನು ಪಡೆಯಲು ಪ್ರಯತ್ನಿಸುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಆರೋಪಿಸಿದ್ದಾರೆ.
ನಿನ್ನೆ ಸಿರಿಯಾದೊಳಗೆ ಐಸಿಸ್ ವಿರುದ್ಧ ತನ್ನ ಪಡೆಗಳು ದಾಳಿ ನಡೆಸಿವೆ ಎಂದು ಅವರು ಶ್ವೇತಭವನಕ್ಕೆ ಮಾಹಿತಿ ನೀಡಿದ್ದಾರೆ. ತನ್ನ ಯುದ್ಧ ವಿಮಾನಗಳು ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕರು ಮತ್ತು ಸ್ಥಾನಗಳನ್ನು ಗುರಿಯಾಗಿಸಿಕೊಂಡಿವೆ ಎಂದು ಅಮೆರಿಕ ಮಿಲಿಟರಿ ಪಡೆ ದಢಪಡಿಸಿದೆ.
ಅಮೆರಿಕ ತನ್ನ ಅತ್ಯಾಧುನಿಕ ವಾಯುಪಡೆಯ ವಿಮಾನಗಳನ್ನು ಬಳಸಿಕೊಂಡು ಮಧ್ಯ ಸಿರಿಯಾದಲ್ಲಿ 75 ಕ್ಕೂ ಹೆಚ್ಚು ಸ್ಥಳಗಳ ಮೇಲೆ ಮೇಲೆ ದಾಳಿ ಮಾಡಲಾಗಿದೆ ಎಂದು ಅಮೆರಿಕ ಸೆಂಟ್ರಲ್ ಕಮಾಂಡ್ ತಿಳಿಸಿದೆ. ಇಸ್ಲಾಮಿಕ್ ಸ್ಟೇಟ್ ಹೋರಾಟಗಾರರ ವಿರುದ್ಧ ಹೋರಾಡಲು ಯುಎಸ್ ಆಗ್ನೇಯ ಸಿರಿಯಾಕ್ಕೆ ಸುಮಾರು 900 ಸೈನಿಕರ ತುಕಡಿಯನ್ನು ನಿಯೋಜಿಸಿದೆ.
ಕಳೆದ ಹಲವು ದಿನಗಳಿಂದ ಸಿರಿಯಾದಲ್ಲಿ ಬಂಡುಕೋರ ಗುಂಪುಗಳು ಮತ್ತು ಸೇನೆಯ ನಡುವೆ ಹೋರಾಟ ನಡೆಯುತ್ತಿತ್ತು. ಅಂತಿಮವಾಗಿ, ಇಸ್ಲಾಮಿ ಹಯಾತ್ ತಹ್ರೀರ್ ಅಲ್-ಶಾಮ್ ಗುಂಪು ಅಸ್ಸಾದ್ ಕುಟುಂಬದ ಐದು ದಶಕಗಳ ಆಳ್ವಿಕೆಗೆ ಸವಾಲು ಹಾಕಿದ 11 ದಿನಗಳ ನಂತರ ಸರ್ಕಾರವು ಪತನವಾಗಿದೆ.
ಬಂಡುಕೋರ ಹೋರಾಟಗಾರರು ಭಾನುವಾರ ರಾಜಧಾನಿ ಡಮಾಸ್ಕಸ್ನನ್ನೂ ವಶಪಡಿಸಿಕೊಂಡಿದ್ದು, ಬೀದಿಗಳಲ್ಲಿ ಗುಂಡಿನ ದಾಳಿ ನಡೆಸಿ ವಿಜಯೋತ್ಸವ ಆಚರಿಸುತ್ತಿದ್ದಾರೆ. 2011 ರಲ್ಲಿ ಪ್ರಾರಂಭವಾದ ಸಿರಿಯಾದ ಅಂತರ್ಯುದ್ಧದಲ್ಲಿ 500,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ಅರ್ಧದಷ್ಟು ಜನರು ಓಡಿಹೋಗಿದ್ದಾರೆ.
ಅಮೆರಿಕ, ರಷ್ಯಾ, ಇರಾನ್ ಮತ್ತು ಸೌದಿ ಅರೇಬಿಯಾ ಸೇರಿಕೊಂಡ ನಂತರ ಈ ಸಂಘರ್ಷ ಮತ್ತಷ್ಟು ಹೆಚ್ಚಾಯಿತು. ಇದೇ ವೇಳೆ ಭಯೋತ್ಪಾದಕ ಸಂಘಟನೆ ಐಸಿಸ್ ಕೂಡ ಸಿರಿಯಾದಲ್ಲಿ ತನ್ನ ರೆಕ್ಕೆಗಳನ್ನು ಚಾಚಿತ್ತು. 2020ರ ಕದನ ವಿರಾಮ ಒಪ್ಪಂದದ ನಂತರ ಇಲ್ಲಿ ಅಲ್ಲಲ್ಲಿ ಘರ್ಷಣೆಗಳು ಮಾತ್ರ ನಡೆದಿವೆ.
ವಿಶ್ವಸಂಸ್ಥೆಯ ವರದಿಯ ಪ್ರಕಾರ, ದಶಕದ ಅಂತರ್ಯುದ್ಧದಲ್ಲಿ 3 ಲಕ್ಷಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಇದಲ್ಲದೇ ಲಕ್ಷಾಂತರ ಜನರು ನಿರಾಶ್ರೀತರಾಗಬೇಕಾಯಿತು.