ವಾಷಿಂಗ್ಟನ್,ಜು.5- ಮಹತ್ವಾಕಾಂಕ್ಷಿ ಒನ್ ಬಿಗ್ ಬ್ಯೂಟಿಫುಲ್ ಬಿಲ್‌ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿ ಮಾಡಿದ್ದಾರೆ. ಈ ಹೊಸ ಕಾನೂನಿನ ಪ್ರಕಾರ, ತೆರಿಗೆ ಕಡಿತ ಮತ್ತು ಪೆಂಟಗನ್ ಮತ್ತು ಗಡಿ ಭದ್ರತೆಗೆ ಹಣಕಾಸು ಹೆಚ್ಚಳ ಮಾಡುವುದು ಸೇರಿದಂತೆ ಹಲವು ನಿಯಮಗಳು ಜಾರಿಗೆ ಬರಲಿವೆ.
ಜಾಗತಿಕ ಮಟ್ಟದಲ್ಲೂ ಅಮೆರಿಕದ ಈ ನಿರ್ಧಾರ ಸಂಚಲನ ಸೃಷ್ಟಿಯಾಗುವಂತೆ ಮಾಡಿದೆ. ಏಕೆಂದರೆ ಆರ್ಥಿಕವಾಗಿ ಸಾಕಷ್ಟು ಸಂಕಷ್ಟದಲ್ಲಿರುವ ಅಮೆರಿಕಾಗೆ ಈ ಮಸೂದೆ ಹೊಸ ಶಕ್ತಿ ತುಂಬುವ ನಿರೀಕ್ಷೆ ಇದೆ.
ಮಹತ್ವದ ಒನ್ ಬಿಗ್ ಬ್ಯೂಟಿಫುಲ್ ಮಸೂದೆ ಮೂಲಕ ಅಮೆರಿಕ ಸರ್ಕಾರಕ್ಕೆ ಸಾಕಷ್ಟು ಹಣ ಉಳಿಸಲು ಟ್ರಂಪ್ ಪ್ಲಾನ್ ಮಾಡಿದ್ದಾರೆ. ತೆರಿಗೆ ಕಡಿತ, ಮಿಲಿಟರಿ ಬಜೆಟ್, ರಕ್ಷಣಾ ಮತ್ತು ಇಂಧನ ಉತ್ಪಾದನೆಗೆ ಹೆಚ್ಚಿದ ಖರ್ಚು ಸೇರಿ ಅಮೆರಿಕದ ಪ್ರಜೆಗಳಿಗೆ ಹಲವು ಅನುಕೂಲ ಮಾಡಲು ಒನ್ ಬಿಗ್ ಬ್ಯೂಟಿಫುಲ್ ಸಹಾಯ ಮಾಡಲಿದೆ.
ಜೊತೆಗೆ ಆರೋಗ್ಯ ಮತ್ತು ಪೌಷ್ಟಿಕಾಂಶ ಕಾರ್ಯಕ್ರಮಗಳಲ್ಲಿ ಅಮೆರಿಕ ಸರ್ಕಾರದ ಹಣ ವ್ಯಯವನ್ನು ಕಡಿಮೆ ಮಾಡಲು ಮುಂದಾಗಲಿದೆ. ಅಮೆರಿಕದ ಸಂಸತ್ ಈ ಬಿಲ್‌ಗೆ ಒಪ್ಪಿಗೆ ನೀಡಿದ ನಂತರ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಮಸೂದೆಗೆ ಸಹಿ ಮಾಡಿ ಕಾನೂನಾಗಿ ಜಾರಿಗೂ ತಂದಿದ್ದಾರೆ.
ಆರ್ಥಿಕ ಚೇತರಿಕೆಗೆ ಈ ಕ್ರಮ: ಅಮೆರಿಕ ಆರ್ಥಿಕತೆ ಹಳ್ಳ ಹಿಡಿದು ಈಗಾಗಲೇ ಹಲವು ವರ್ಷಗಳೇ ಕಳೆದಿದ್ದು, ಜಾಗತಿಕವಾಗಿ ದೊಡ್ಡಣ್ಣ ಎಂದು ಕರೆಸಿಕೊಳ್ಳುವ ಅಮೆರಿಕ ಯಾವಾಗ ಬೇಕಾದರೂ ನಂಬರ್ 2 ದೇಶವಾಗಿ ಬದಲಾಗುವ ಸಾಧ್ಯತೆ ಇದೆ. ಇದು ಎದುರಾಗುವ ಮೊದಲೇ ಹೊಸ ಮಸೂದೆ ಮೂಲಕ ತಕ್ಷಣವೇ ಅಮೆರಿಕದ ಆರ್ಥಿಕತೆಗೆ ಚೇತರಿಕೆಯನ್ನ ನೀಡುವುದು ಮತ್ತು ಹೊಸ ಹುಮಸ್ಸು ತುಂಬುವುದು ಡೊನಾಲ್ಡ್ ಟ್ರಂಪ್ ಅವರ ಪ್ಲಾನ್ ಆಗಿತ್ತು. ಈಗ ಅವರ ಕನಸಿಗೆ ಅಮೆರಿಕ ಸಂಸತ್ ಸದಸ್ಯರು ಅಮೆರಿಕನ್ ಕಾಂಗ್ರೆಸ್ ಸದಸ್ಯರು ಕೂಡ ಬೆಂಬಲ ನೀಡಿದ್ದಾರೆ.
ಒನ್ ಬಿಗ್ ಬ್ಯೂಟಿಫುಲ್ ಬಿಲ್ ಜಾರಿಗೆ ಬಂದ ನಂತರ ಡೊನಾಲ್‌್ಡ ಟ್ರಂಪ್ ಅವರಿಗೆ ಮತ್ತಷ್ಟು ಬಲ ಕೂಡ ಬಂದಂತೆ ಕಾಣುತ್ತಿದೆ.
ಇದೇ ಕಾರಣಕ್ಕೆ ಅಮೆರಿಕದ ವ್ಯವಸ್ಥೆಯಲ್ಲಿ ಮತ್ತಷ್ಟು ಕಠಿಣ ಹಾಗೂ ಕ್ರಾಂತಿಕಾರಿ ನಿರ್ಧಾರ ಕೈಗೊಳ್ಳಲು ಇದೀಗ ಅಮೆರಿಕ ಅಧ್ಯಕ್ಷ ಡೊನಾಲ್‌್ಡ ಟ್ರಂಪ್ ಮುಂದಾಗಿದ್ದಾರೆ. ಅನಾವಶ್ಯಕ ಖರ್ಚುಗಳನ್ನು ಕಡಿತಗೊಳಿಸಲು ಕೂಡ ಹಲವಾರು ಕ್ರಮ ಕೈಗೊಂಡಿದ್ದಾರೆ.
ಅಮೆರಿಕ ಸಂಸತ್‌ನಲ್ಲಿ ನಡೆದ ಮತದಾನದಲ್ಲಿ 218-214 ಅಂತರದೊಂದಿಗೆ ನಾಲ್ಕು ಮತಗಳಿಂದ ಮಸೂದೆಗೆ ಹೌಸ್ ಆಫ್ ರೆಪ್ರೆಸೆಂಟೆಟಿವ್ ಅಂಗೀಕಾರ ನೀಡಿತು. ಇಬ್ಬರು ರಿಪಬ್ಲಿಕನ್ ಸದಸ್ಯರಾದ ಥಾಮಸ್ ಮ್ಯಾಸಿ ಮತ್ತು ಬ್ರಿಯಾನ್ ಫಿಟ್ಜ್ಪ್ಯಾಟ್ರಿಕ್ ವಿಧೇಯಕದ ವಿರುದ್ಧ ಮತ ಚಲಾಯಿಸಿದರು ಎಂದು ದಿ ಹಿಲ್ ವರದಿ ಮಾಡಿದೆ. ಮಸೂದೆ ಅಂಗೀಕಾರದ ನಂತರ ಡೊನಾಲ್‌್ಡ ಟ್ರಂಪ್, ಜನಪ್ರತಿನಿಧಿಗಳ ಸಭೆಯಲ್ಲಿನ ರಿಪಬ್ಲಿಕನ್ನರು ಒಂದು ದೊಡ್ಡ ಮಸೂದೆಯನ್ನು ಕಾಯ್ದೆಯಾಗಿ ಅಂಗೀಕರಿಸಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿ, ನಮ ಪಕ್ಷವು ಹಿಂದೆಂದಿಗಿಂತಲೂ ಹೆಚ್ಚು ಒಗ್ಗಟ್ಟಿನಿಂದ ಕೂಡಿದೆ ಎಂದು ಬಣ್ಣಿಸಿದರು.
ಮಸೂದೆಯನ್ನು ಅಮೆರಿಕದ ಸೆನೆಟ್‌ನಲ್ಲಿ 51-50 ಮತಗಳಿಂದ ಅಂಗೀಕರಿಸಲಾಯಿತು. ಉಪಾಧ್ಯಕ್ಷ ಜೆಡಿವ್ಯಾನ್‌್ಸ ಅವರು ಟೈ-ಬ್ರೇಕಿಂಗ್ ಮತ ಚಲಾಯಿಸುವ ಮೂಲಕ ವಿಧೇಯಕವನ್ನು ಅಂಗೀಕರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ಅಮೆರಿಕದ ಜನತೆಗೆ ಟ್ರಂಪ್ ನೀಡಿದ್ದ ಭರವಸೆಗಲನ್ನು ಈಡೇರಿಸುತ್ತಿದ್ದಾರೆ. ಐತಿಹಾಸಿಕ 165 ಶತಕೋಟಿ ಡಾಲರ್ಗಳನ್ನು ಡಿಎಚ್‌ಎಸ್‌ಗೆ ಹಂಚಿಕೆ ಮಾಡಲಾಗುತ್ತಿದೆ. ಅಕ್ರಮವಾಗಿ ವಲಸೆ ಬಂದಿರುವ ಅಪರಾಧಿಗಳನ್ನು ಗಡೀಪಾರು ಮಾಡಲು, ಗಡಿಯನ್ನು ಸುಭದ್ರವಾಗಿಸಲು ಮತ್ತು ಅಮೆರಿಕವನ್ನು ಮತ್ತೆ ಸುರಕ್ಷಿತವಾಗಿಸಲು ಅಗತ್ಯವಾಗಿದ್ದ ಸಂಪನೂಲವನ್ನು ಡಿಎಚ್‌ಎಸ್‌ಗೆ ಇದು ಒದಗಿಸಲಿದೆ ಎಂದು ಎಕ್‌್ಸನಲ್ಲಿ ಬಣ್ಣಿಸಿದೆ.
ಈ ಮಸೂದೆ ಟ್ರಂಪ್ ಎರಡನೇ ಅವಧಿಯ ಕಾರ್ಯಸೂಚಿಯ ಪ್ರಮುಖ ಆಧಾರಸ್ತಂಭ ಎನಿಸಿದ್ದು, ವಿಭಜಿತ ಅಮೆರಿಕದ ಕಾಂಗ್ರೆಸ್ನಲ್ಲಿ ವ್ಯಾಪಕ ಸಂಧಾನ ಮಾತುಕತೆಗಳ ಬಳಿಕ ಜಾರಿಗೆ ಬಂದಿದೆ. ಇದನ್ನು ಟ್ರಂಪ್ ಹಾಗೂ ಬೆಂಬಲಿಗರು ದೊಡ್ಡ ವಿಜಯ ಎಂದು ವಿಶ್ಲೇಷಿಸಿದ್ದಾರೆ. ಆದರೆ ವೈದ್ಯಕೀಯ ನೆರವು ಕಡಿತಗೊಳಿಸುವ ಪ್ರಸ್ತಾವಕ್ಕೆ ಡೆಮಾಕ್ರಟಿಕ್ ಪಾರ್ಟಿ ಹಾಗೂ ರಿಪಬ್ಲಿಕನ್ ಪಾರ್ಟಿಯ ಕೆಲವರಿಂದಲೂ ಟೀಕೆ ವ್ಯಕ್ತವಾಗಿದೆ.
ಭಾರತದ ಮೇಲೇನು ಪರಿಣಾಮ?
ಭಾರತೀಯರು ವಲಸೆ ಹೋಗುವ ರಾಷ್ಟ್ರಗಳ ಪೈಕಿ ಅಮೆರಿಕವೇ ಮೊದಲ ಆಯ್ಕೆ. ಇಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಭಾರತೀಯರಿದ್ದಾರೆ. ಬ್ಯೂಟಿಫುಲ್ ಮಸೂದೆಯ ಅಂಶಗಳು ವಲಸಿಗರ ಮೇಲೆ ಹೆಚ್ಚಿನ ನಿರ್ಬಂಧಗಳನ್ನು ವಿಧಿಸುತ್ತದೆ.ಹಣ ರವಾನೆ ಮೇಲೆ ಭಾರೀ ತೆರಿಗೆ: ಅಮೆರಿಕದಲ್ಲಿ ದುಡಿದ ಹಣವನ್ನು ಭಾರತಕ್ಕೆ ಕಳುಹಿಸಿದರೆ, ಅದರ ಮೇಲೆ ಹೆಚ್ಚಿನ ಪ್ರಮಾಣದ ತೆರಿಗೆ ಬೀಳಲಿದೆ. ರವಾನಿಸುವ ಹಣಕ್ಕೆ ಶೇ.3.5ರಷ್ಟು ತೆರಿಗೆ ಇರಲಿದೆ. ಅಂದರೆ, ವಲಸಿಗರೊಬ್ಬರು ಅಮೆರಿಕದಿಂದ ಭಾರತಕ್ಕೆ 83 ಸಾವಿರ ರೂಪಾಯಿ ಕಳುಹಿಸಿದಲ್ಲಿ ಅದಕ್ಕೆ 2,900 ತೆರಿಗೆ ಕಡಿತವಾಗಲಿದೆ. ಈ ತೆರಿಗೆಯು ಎಚ್1ಬಿ, ಎಲ್-1, ಎಫ್-1 ವಿಸಾ ಹಾಗೂ ಗ್ರೀನ್ ಕಾರ್ಡ್ ಹೊಂದಿರುವವರ ಅನ್ವಯವಾಗಲಿದೆ.
ವಲಸಿಗರ ಮೇಲೆ ನಿರ್ಬಂಧ: ಭಾರತ ಸೇರಿದಂತೆ ಯಾವುದೇ ದೇಶದಿಂದ ಅಮೆರಿಕಕ್ಕೆ ಕಾನೂನಾತಕವಾಗಿ ಬರುವ ವಲಸಿಗ ಇನ್ನು ಮುಂದೆ ಆತನ ಜೊತೆ ಹೆಂಡತಿ ಮತ್ತು ಮಕ್ಕಳನ್ನು ಮಾತ್ರವೇ ಬರಬಹುದು. ಕುಟುಂಬದ ಇತರ ಸದಸ್ಯರಿಗೆ ಈ ಮಸೂದೆ ಅವಕಾಶ ಮಾಡಿಕೊಡುವುದಿಲ್ಲ.
ಗ್ರೀನ್ ಕಾರ್ಡ್ ಲಾಟರಿ ವ್ಯವಸ್ಥೆ ರದ್ದು: ಕಡಿಮೆ ವಲಸಿಗರು ಬರುವ ದೇಶಗಳಿಗೆ ಅಮೆರಿಕ ನೀಡಿದ್ದ `ಆಫರ್’ ಇದಾಗಿತ್ತು. ಅಂದರೆ, ಅಮೆರಿಕಕ್ಕೆ ವಲಸೆ ಬರಲು ಆಯ್ದ ದೇಶಗಳ ಜನರಿಗೆ ಲಾಟರಿ ಮೂಲಕ ಗ್ರೀನ್ ಕಾರ್ಡ್ ನೀಡಲಾಗುತ್ತಿತ್ತು. ಹೊಸ ಮಸೂದೆಯು ಡೈವರ್ಸಿಟಿ ವೀಸಾ ಲಾಟರಿ ವ್ಯವಸ್ಥೆಯನ್ನು ರದ್ದು ಮಾಡುತ್ತದೆ.
ಬುದ್ಧಿವಂತರಿಗೆ ಮಾತ್ರ ವೀಸಾ:
ಅಮೆರಿಕಾಕ್ಕೆ ಇನ್ನು ಮುಂದೆ ವಲಸೆ ಹೋಗಬೇಕಾದಲ್ಲಿ ಶಿಕ್ಷಣ ಮತ್ತು ಕೌಶಲ್ಯವನ್ನು ಹೊಂದಿರುವುದು ಕಡ್ಡಾಯವಾಗಲಿದೆ. ಯಾರೆಂದರವರಿಗೆ ಇನ್ನು ಮುಂದೆ ವೀಸಾ ಸಿಗುವುದು ಕಷ್ಟವಾಗಲಿದೆ.
- ಲಕ್ಕುಂಡಿಗೆ ಯುನೆಸ್ಕೋ ಸ್ಥಾನಮಾನ ಪಡೆಯಲು ಸರ್ಕಾರ ಪ್ರಯತ್ನ : ಎಚ್.ಕೆ. ಪಾಟೀಲ
- ಸಿಎಂ, ಡಿಸಿಎಂ ಮನೆಗಳನ್ನು ಸ್ಫೋಟಿಸುವುದಾಗಿ ಇ-ಮೇಲ್ ಬೆದರಿಕೆ
- ಅಕ್ರಮ ಪಟಾಕಿ ದಾಸ್ತಾನು-ಮಾರಾಟ ಮಾಡಿದರೆ ಕಠಿಣ ಕ್ರಮ : ಸೀಮಂತ್ ಕುಮಾರ್ ಸಿಂಗ್ ಎಚ್ಚರಿಕೆ
- ಬೆಂಗಳೂರಲ್ಲಿ ಕುಳಿತು ಅಮೆರಿಕಾದ ಪ್ರಜೆಗಳನ್ನು ಡಿಜಿಟಲ್ ಅರೆಸ್ಟ್ ಮಾಡುತ್ತಿದ್ದ ಕಿಲಾಡಿಗಾಗಿ ಪೊಲೀಸರ ಹುಡುಕಾಟ
- ಪೂಜೆ ಮಾಡಿ ನಿಧಿ ತೆಗೆಸಿ ಕೊಡಿಸುವ ನೆಪದಲ್ಲಿ ಕಳ್ಳತನ ಮಾಡಿದ್ದವನ ಬಂಧನ