Sunday, June 30, 2024
Homeಅಂತಾರಾಷ್ಟ್ರೀಯಅಮೆರಿಕದಲ್ಲಿ ಮತ್ತೊಂದು ಸಾಮೂಹಿಕ ಗುಂಡಿನ ದಾಳಿ, 5 ಮಂದಿ ಸಾವು

ಅಮೆರಿಕದಲ್ಲಿ ಮತ್ತೊಂದು ಸಾಮೂಹಿಕ ಗುಂಡಿನ ದಾಳಿ, 5 ಮಂದಿ ಸಾವು

ವಾಷಿಂಗ್ಟನ್‌,ಜೂ.26- ಅಮೆರಿಕದಲ್ಲಿ ಮತ್ತೊಂದು ಸಾಮೂಹಿಕ ಗುಂಡಿನ ದಾಳಿಯ ಪ್ರಕರಣ ನಡೆದಿದ್ದು, 5 ಮಂದಿ ಮೃತಪಟ್ಟಿದ್ದಾರೆ. ಉತ್ತರ ಲಾಸ್‌ ವೇಗಾಸ್‌ನಲ್ಲಿ ಈ ಘಟನೆ ನಡೆದಿದ್ದು, ವ್ಯಕ್ತಿಯೊಬ್ಬ ಎರಡು ಅಪಾರ್ಟ್‌ಮೆಂಟ್‌ ಸಂಕೀರ್ಣಗಳಲ್ಲಿ ಗುಂಡು ಹಾರಿಸಿ ನಾಲ್ವರನ್ನು ಕೊಂದು ಬಳಿಕ ಆತ್ಮಹತ್ಯೆಗೆ ಶರಣಾಗಿದ್ದಾನೆ. ಕೃತ್ಯ ಎಸಗಿದವನನ್ನು ಎರಿಕ್‌ ಆಡಮ್ಸೌ(47)ಎಂದು ಗುರುತಿಸಲಾಗಿದೆ.

ಕಾಸಾ ನಾರ್ಟೆ ಡ್ರೈವ್‌ನ ಅಪಾರ್ಟ್‌ಮೆಂಟ್‌ ಸಂಕೀರ್ಣದಲ್ಲಿ ಗುಂಡಿನ ದಾಳಿ ನಡೆಯುತ್ತಿರುವ ಬಗ್ಗೆ ಪೊಲೀಸರಿಗೆ ಕರೆಯೊಂದು ಬಂದಿತ್ತು. ಕೂಡಲೇ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಈ ವೇಳೆ ಗುಂಡೇಟಿನಿಂದ ಗಾಯಗೊಂಡಿದ್ದ 40 ಮತ್ತು 50 ವರ್ಷ ಆಸುಪಾಸಿನ ಇಬ್ಬರು ಮಹಿಳೆಯರು ಕಂಡುಬಂದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ.

ಪಕ್ಕದ ಅಪಾರ್ಟ್‌ಮೆಂಟ್‌ ಆವರಣದಲ್ಲಿ ಇನ್ನೂ ಇಬ್ಬರ ಶವ ಪತ್ತೆಯಾಗಿದೆ. ಇದರಲ್ಲಿ 20-30 ವರ್ಷ ಆಸುಪಾಸಿನ ಮಹಿಳೆ ಮತ್ತು ಪುರುಷರಾಗಿದ್ದಾರೆ. ಘಟನೆಯಲ್ಲಿ 13 ವರ್ಷದ ಬಾಲಕಿ ಗಂಭೀರ ಗಾಯಗೊಂಡಿದ್ದು ಆಕೆಯನ್ನು ಸ್ಥಳೀಯ ಆಸ್ಪತೆಗೆ ದಾಖಲಿಸಲಾಗಿದೆ. ಆಕೆಯ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೃತ್ಯ ಎಸಗಿದವನ ಪತ್ತೆಗಾಗಿ ಕಾರ್ಯ ಆರಂಭಿಸಿ ಕೊನೆಗೂ ಆತನನ್ನು ಸುತ್ತುವರಿದ ಪೊಲೀಸರು ಬಂದೂಕು ಕೆಳಗಿಳಿಸುವಂತೆ ಸೂಚನೆ ನೀಡಿದರೂ ಆತ ನಿರ್ಲಕ್ಷಿಸಿ ಸ್ವತಃ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈಸ್ಟ್ ಲೇಕ್‌ ಮೀಡ್‌ ಬೌಲೆವಾರ್ಡ್‌ನಲ್ಲಿ ವ್‌ಯಾಪಾರಿಯಾಗಿರುವ ಆಡಮ್ಸೌ ಯಾಕಾಗಿ ಈ ಕೃತ್ಯ ಎಸಗಿದ್ದಾನೆ ಎನ್ನುವುದು ತಿಳಿದು ಬಂದಿಲ್ಲ. ಈ ಬಗ್ಗೆ ತನಿಖೆ ನಡೆಯುತ್ತಿದೆ.

ಈ ಹಿಂದೆಯೂ ಅಮೆರಿಕದ ಮೈನ್‌ ಪ್ರದೇಶದ ಲೆವಿಸ್ಟನ್‌ ಎಂಬಲ್ಲಿ ಕಳೆದ ಅಕ್ಟೋಬರ್‌ನಲ್ಲಿ ಅಪರಿಚಿತ ದುಷ್ಕರ್ಮಿಯೊಬ್ಬ ನಡೆಸಿದ ಸಾಮೂಹಿಕ ಗುಂಡಿನ ದಾಳಿಯಲ್ಲಿ ಕನಿಷ್ಠ 16 ಮಂದಿ ಮೃತಪಟ್ಟಿದ್ದರು. ಸುಮಾರು 60 ಜನರು ಗಾಯಗೊಂಡಿದ್ದರು. ಈ ವೇಳೆ ಬಾರ್‌ ಮತ್ತು ರೆಸ್ಟೋರೆಂಟ್‌‍ನ ಎರಡು ಕಡೆ ದಾಳಿ ನಡೆದಿತ್ತು. ಬಂದೂಕು ಸಂಸ್ಕೃತಿ ವ್ಯಾಪಕವಾಗಿರುವ ಅಮೆರಿಕದಲ್ಲಿ ಕಳೆದ ವರ್ಷ 500ಕ್ಕೂ ಹೆಚ್ಚು ಸಾಮೂಹಿಕ ಗುಂಡಿನ ದಾಳಿ ನಡೆದಿದ್ದವು.

RELATED ARTICLES

Latest News