Sunday, July 7, 2024
Homeರಾಷ್ಟ್ರೀಯಕೇವಲ 300 ರೂ. ಬೆಲೆಯ ಆಭರಣಕ್ಕೆ 6 ಕೋಟಿ ಕೊಟ್ಟು ಮೋಸಹೋದ ವಿದೇಶಿ ಮಹಿಳೆ..!

ಕೇವಲ 300 ರೂ. ಬೆಲೆಯ ಆಭರಣಕ್ಕೆ 6 ಕೋಟಿ ಕೊಟ್ಟು ಮೋಸಹೋದ ವಿದೇಶಿ ಮಹಿಳೆ..!

ಜೈಪುರ, ಜೂ. 12- ಕೇವಲ 300 ರೂ. ಮೌಲ್ಯದ ಆಭರಣವನ್ನು ಜೈಪುರಕ್ಕೆ ಭೇಟಿ ನೀಡಿದ್ದ ಅಮೆರಿಕ ಪ್ರವಾಸಿಗರೊಬ್ಬರಿಗೆ 6 ಕೋಟಿ ರೂ.ಗೆ ಮಾರಾಟ ಮಾಡಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.

ಅಮೆರಿಕದ ನಿವಾಸಿ ಚರೀಷ್‌ ಎಂಬುವರು ಜೈಪುರದ ಮನೌಕ್‌ಚೌಕ ಪೊಲೀಸ್‌‍ ಠಾಣಾ ವ್ಯಾಪ್ತಿಯ ಜೋಹ್ರಿ ಬಜಾರ್‌ನಲ್ಲಿರುವ ಅಂಗಡಿಯೊಂದರಿಂದ 6 ಕೋಟಿ ರೂ. ಮೌಲ್ಯದ ವಜ್ರಾಭರಣವನ್ನು ಖರೀದಿಸಿದ್ದರು. ನಂತರ ಕಳೆದ ಏಪ್ರಿಲ್‌ನಲ್ಲಿ ಅವರು ಯುಎಸ್‌‍ಎನಲ್ಲಿ ನಡೆದ ಮೇಳದಲ್ಲಿ ಆಭರಣವನ್ನು ಪ್ರದರ್ಶಿಸಿದರು. ಆಗ ಅದು ನಕಲಿ ಎಂದು ತಿಳಿದುಬಂದಿದೆ.

ಚರೀಷ್‌ ಅವರು ಜೈಪುರಕ್ಕೆ ಬಂದು ಅಂಗಡಿ ಮಾಲೀಕರಾದ ರಾಜೇಂದ್ರ ಸೋನಿ ಮತ್ತು ಅವರ ಮಗ ಗೌರವ್‌ ಅವರನ್ನು ಪ್ರಶ್ನಿಸಿದಾಗ, ಆಕೆಯ ಆರೋಪವನ್ನು ಅವರು ಸಂಪೂರ್ಣವಾಗಿ ತಳ್ಳಿಹಾಕಿದ್ದರು. ಕೂಡಲೇ ಮೇ 18 ರಂದು ಮಹಿಳೆ ಅಂಗಡಿ ಮಾಲೀಕರ ವಿರುದ್ಧ ಮನೌಕ್‌ಚೌಕ ಪೊಲೀಸ್‌‍ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆದರೆ ಆರೋಪಿಗಳು ಆ ಮಹಿಳೆಯ ವಿರುದ್ಧವೇ ಪ್ರತಿದೂರು ದಾಖಲಿಸಿ, ಅಂಗಡಿಯಿಂದ ಆಭರಣದೊಂದಿಗೆ ಮಹಿಳೆ ಪರಾರಿಯಾಗಿದ್ದಾರೆ ಎಂದು ಆರೋಪಿಸಿದ್ದರು.

ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಅದು ಸುಳ್ಳು ಎಂದು ಕಂಡುಬಂದಿದೆ.
ನಕಲಿ ವಜ್ರಾಭರಣ ಖರೀದಿಯಿಂದ ತೊಂದರೆಗೊಳಗಾಗಿ ಬಲಿಪಶುವಾದ ಚರೀಷ್‌ ಅವರು ಯುಎಸ್‌‍ನ ರಾಯಭಾರ ಕಚೇರಿಯನ್ನು ಸಂಪರ್ಕಿಸಿದರು. ರಾಯಭಾರ ಕಚೇರಿಯ ಮಧ್ಯಪ್ರವೇಶದ ನಂತರ ಪೊಲೀಸರು ತನಿಖೆ ನಡೆಸಿದಾಗ ನಕಲಿ ಆಭರಣದ ಘಟನೆ ಬೆಳಕಿಗೆ ಬಂದಿದೆ.

ಆರೋಪಿಗಳು ಕೇವಲ 300 ರೂ. ಮೌಲ್ಯದ ವಜ್ರಾಭರಣವನ್ನು 6 ಕೋಟಿ ರೂ.ಗೆ ವಿದೇಶಿಗರಿಗೆ ಮಾರಾಟ ಮಾಡಿ ವಂಚನೆ ಮಾಡಿರುವುದು ತನಿಖೆಯಿಂದ ಬಯಲಾಗಿದೆ. ಈ ಆಭರಣವನ್ನು ಪರಿಶೀಲಿಸಿದಾಗ 14 ಕ್ಯಾರೆಟ್‌ ಇರಬೇಕಾದ ನೈಸರ್ಗಿಕ ವಜ್ರದ ಆಭರಣ ಸಂಪೂರ್ಣ ನಕಲಿ ಎಂಬುದು ಗೊತ್ತಾಗಿದೆ.

ಆಭರಣದ ಸತ್ಯಾಸತ್ಯತೆಯ ಬಗ್ಗೆ ನಕಲಿ ಪ್ರಮಾಣಪತ್ರವನ್ನು ನೀಡಿದ್ದ ನಂದಕಿಶೋರ್‌ ಎಂಬಾತನನ್ನು ಬಂಧಿಸಲಾಗಿದ್ದು, ವಿದೇಶಿ ಮಹಿಳೆಗೆ ವಂಚಿಸಿ, ತಲೆಮರೆಸಿಕೊಂಡಿರುವ ಆರೋಪಿ ತಂದೆ ಮತ್ತು ಮಗನಿಗೆ ಶೋಧ ನಡೆಸಲಾಗುತ್ತಿದೆ. ಲುಕ್‌ಔಟ್‌ ನೋಟಿಸ್‌‍ ಜಾರಿ ಮಾಡಲಾಗಿದೆ ಎಂದು ಡಿಸಿಪಿ ಭಜರಂಗ್‌ ಸಿಂಗ್‌ ಶೇಖಾವತ್‌ ತಿಳಿಸಿದ್ದಾರೆ.

ಆರೋಪಿಗಳು ಇತ್ತೀಚೆಗೆ ಜೈಪುರದ ಸಿ ಸ್ಕೀಂ ಪ್ರದೇಶದಲ್ಲಿ 3 ಕೋಟಿ ರೂ. ಮೌಲ್ಯದ ಫ್ಲಾಟ್‌ ಖರೀದಿಸಿದ್ದಾರೆ ಎಂಬ ಅಂಶವೂ ಕೂಡ ಬಹಿರಂಗವಾಗಿದೆ. ಇವರ ಪತ್ತೆಗಾಗಿ ವಿಶೇಷ ತಂಡಗಳನ್ನು ರಚಿಸಲಾಗಿದೆ. ಮಹಿಳೆಗೆ ವಂಚನೆ ಆರೋಪದ ನಂತರ ಇವರ ವಿರುದ್ಧ ಮತ್ತಷ್ಟು ದೂರುಗಳು ಬಂದಿವೆ.

ಭಾರತಕ್ಕೆ ಭೇಟಿ ನೀಡುವ ವಿದೇಶಿಗರಿಗೆ ಇಷ್ಟು ಪ್ರಮಾಣದಲ್ಲಿ ವಂಚನೆ ಮಾಡಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ರಾಯಭಾರ ಕಚೇರಿಯ ಮಧ್ಯಸ್ಥಿಕೆಯಿಂದ ಪ್ರಕರಣದ ತನಿಖೆ ತೀವ್ರಗೊಂಡಿದೆ. ವಜ್ರ ಖರೀದಿ ಮಾಡುವ ಸಾರ್ವಜನಿಕರೇ ಎಚ್ಚರ! ಪ್ರತಿ ವಜ್ರ ಖರೀದಿಯಲ್ಲಿ ಮೋಸವಾಗುವ ಸಾಧ್ಯತೆ ಇರುತ್ತದೆ.

ವಜ್ರಾಭರಣ ಖರೀದಿ ಸಂಘ ನೀಡುವ ಪ್ರಮಾಣಪತ್ರದ ಮೂಲಕ ವಜ್ರವನ್ನು ಖರೀದಿಸಬೇಕು. ಇಲ್ಲದಿದ್ದರೆ ಮೋಸ ಹೋಗುವುದು ಗ್ಯಾರಂಟಿ. ವಜ್ರಾಭರಣ ಖರೀದಿಯ ಆಸಕ್ತರು ಸೂಕ್ಷ್ಮವಾಗಿ ಇದನ್ನು ಗಮನಿಸಬೇಕು. ಇಲ್ಲದಿದ್ದರೆ ಸಾಮಾನ್ಯ ಹರಳುಗಳನ್ನು ವಜ್ರವೆಂದು ವ್ಯಾಪಾರ ಮಾಡುತ್ತಾರೆ. ಎಚ್ಚರ !

RELATED ARTICLES

Latest News