Friday, November 22, 2024
Homeರಾಜ್ಯರಾಜ್ಯದಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದರೂ ಏರಿಕೆಯಾಗಿಲ್ಲ ಜಲಾಶಯಗಳ ನೀರಿನ ಮಟ್ಟ

ರಾಜ್ಯದಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದರೂ ಏರಿಕೆಯಾಗಿಲ್ಲ ಜಲಾಶಯಗಳ ನೀರಿನ ಮಟ್ಟ

ಬೆಂಗಳೂರು, ಜೂ.16-ರಾಜ್ಯದಲ್ಲಿ ನೈರುತ್ಯ ಮುಂಗಾರು ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದರೂ ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಸಂಗ್ರಹ ಮಾತ್ರ ಶೇ.21ರಷ್ಟಿದೆ. ನಾರಾಯಣಪುರ ಹಾಗೂ ವಾಣಿವಿಲಾಸ ಸಾಗರ ಜಲಾಶಯ ಹೊರತುಪಡಿಸಿದರೆ, ಉಳಿದ ಯಾವ ಜಲಾಶಯದಲ್ಲೂ ಶೇ.50ಕ್ಕಿಂತ ಹೆಚ್ಚು ನೀರಿಲ್ಲ.

ಮೇ ತಿಂಗಳಲ್ಲಿ ಪೂರ್ವ ಮುಂಗಾರು ಮಳೆ ಹಾಗೂ ಕಳೆದ ಎರಡು ವಾರಗಳಿಂದ ಮುಂಗಾರು ಮಳೆ ರಾಜ್ಯದಲ್ಲಿ ವಾಡಿಕೆಗಿಂತ ಹೆಚ್ಚಾಗಿದೆ. ಇದರಿಂದ ಕೃಷಿ ಚಟುವಟಿಕೆ ಚುರುಕುಗೊಂಡಿದ್ದು, ಕುಡಿಯುವ ನೀರು ಹಾಗೂ ಜಾನುವಾರುಗಳ ಮೇವಿಗೆ ಪರಿಹಾರ ದೊರೆತಂತಾಗಿದೆ.

ಆದರೆ, ಜಲ ವಿದ್ಯುತ್‌ ಉತ್ಪಾದಿಸುವ ಹಾಗೂ ಕೃಷಿಗೆ ನೀರು ಪೂರೈಸುವ ಜಲಾಶಯಗಳಿಗೆ ಮಾತ್ರ ಗಣನೀಯವಾಗಿ ಒಳ ಹರಿವು ಹೆಚ್ಚಾಗಿಲ್ಲ. ಮುಂಗಾರು ಮಳೆ ಆರಂಭ ಉತ್ತಮವಾಗಿದ್ದು, ಜಲಾಶಯಗಳ ಒಳಹರಿವು ಆರಂಭಗೊಂಡಿದ್ದರೂ ಸಾಕಷ್ಟು ಪ್ರಮಾಣದಲ್ಲಿ ಒಳ ಹರಿವು ಬರುತ್ತಿಲ್ಲ. ಕಳೆದ ವರ್ಷ ಮುಂಗಾರು ದುರ್ಬಲವಾಗಿತ್ತು, ಅಲ್ಲದೆ, ರಾಜ್ಯದಲ್ಲಿ ಬರದ ಕರಾಳ ಛಾಯೆ ಆವರಿಸಿ ಜನ-ಜಾನುವಾರುಗಳನ್ನು ಸಂಕಷ್ಟಕ್ಕೆ ದೂಡಿತ್ತು.

ಈ ಬಾರಿ ಮುಂಗಾರು ಉತ್ತಮವಾಗಿದ್ದರೂ ಈತನಕ ಜಲಾಶಯಗಳು ಭರ್ತಿಯಾಗುವ ಪ್ರಮಾಣಕ್ಕೆ ಅನುಗುಣವಾಗಿ ಒಳಹರಿವು ಇಲ್ಲದಿರುವುದು ಮತ್ತೊಂದು ಆತಂಕಕ್ಕೆ ಕಾರಣವಾಗಿದೆ.

ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ ನಿನ್ನೆಯವರೆಗೆ ರಾಜ್ಯದ 14 ಪ್ರಮುಖ ಜಲಾಶಯಗಳಲ್ಲಿ 187.46 ಟಿಎಂಸಿ ಅಡಿಯಷ್ಟು ನೀರಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 185.85 ಟಿಎಂಸಿ ಅಡಿಯಷ್ಟು ನೀರಿತ್ತು. ಕಳೆದ ವರ್ಷಕ್ಕಿಂತ ಎರಡು ಟಿಎಂಸಿಯಷ್ಟು ಮಾತ್ರ ನೀರು ಹೆಚ್ಚಿದೆಯಷ್ಟೇ.

ಜಲವಿದ್ಯುತ್‌ ಉತ್ಪಾದಿಸುವ ಲಿಂಗನಮಕ್ಕಿ ಜಲಾಶಯದಲ್ಲಿ ಶೇ.10ರಷ್ಟು, ಸೂಪಾ ಜಲಾಶಯದಲ್ಲಿ ಶೇ.22ರಷ್ಟು ಹಾಗೂ ವರಾಹಿ ಜಲಾಶಯದಲ್ಲಿ ಶೇ.11ರಷ್ಟು ಮಾತ್ರ ನೀರು ಸಂಗ್ರಹವಾಗಿದೆ. ಈ ಮೂರು ಜಲಾಶಯಗಳಿಗೆ ಒಟ್ಟಾರೆ 1300 ಕ್ಯುಸೆಕ್‌್ಸನಷ್ಟು ಮಾತ್ರ ಒಳಹರಿವಿದೆ.

ಕಾವೇರಿ ನದಿ ಪಾತ್ರದ ಕಬಿನಿಯಲ್ಲಿ ಶೇ.45, ಹಾರಂಗಿಯಲ್ಲಿ ಶೇ.38, ಹೇಮಾವತಿಯಲ್ಲಿ ಮತ್ತು ಕೆಆರ್‌ಎಸ್‌‍ನಲ್ಲಿ ಶೇ.28ರಷ್ಟು ನೀರು ಸಂಗ್ರಹವಿದೆ. ಈ ನಾಲ್ಕು ಜಲಾಶಯಗಳಿಗೆ ಒಟ್ಟಾರೆ 4000 ಕ್ಯುಸೆಕ್‌್ಸಗೂ ಹೆಚ್ಚು ಒಳಹರಿವಿದೆ.

ಕೃಷ್ಣಾ ಕೊಳದ ಭದ್ರಾದಲ್ಲಿ ಶೇ.21, ತುಂಗಭದ್ರಾದಲ್ಲಿ ಕೇವಲ ಶೇ.6ರಷ್ಟು ಮಾತ್ರ ನೀರಿದೆ. ಘಟಪ್ರಭಾದಲ್ಲಿ ಶೇ.16, ಮಲಪ್ರಭಾದಲ್ಲಿ ಶೇ.17, ಆಲಮಟ್ಟಿಯಲ್ಲಿ ಶೇ.21, ನಾರಾಯಣಪುರದಲ್ಲಿ ಶೇ.63 ಹಾಗೂ ವಾಣಿ ವಿಲಾಸ ಸಾಗರದಲ್ಲಿ ಶೇ. 60ರಷ್ಟು ನೀರು ಸಂಗ್ರಹವಾಗಿದೆ.

ಕೃಷ್ಣಾ ಕೊಳ್ಳದ ಆರು ಜಲಾಶಯಗಳಲ್ಲಿ 17 ಸಾವಿರ ಕ್ಯುಸೆಕ್‌್ಸಗೂ ಹೆಚ್ಚಿನ ಒಳಹರಿವಿದೆ. ಇತ್ತೀಚೆಗೆ ಮಲೆನಾಡು ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ಮಳೆ ಹೆಚ್ಚಾದ್ದರಿಂದ ಒಳಹರಿವಿನ ಪ್ರಮಾಣ ಹೆಚ್ಚಾಗಿದೆ.

ಸದ್ಯಕ್ಕೆ ಮುಂಗಾರು ದುರ್ಬಲಗೊಂಡಿದ್ದು, ರಾಜ್ಯದಲ್ಲಿ ಮಳೆ ಪ್ರಮಾಣ ಇಳಿಮುಖವಾಗಿದೆ. ಮತ್ತೆ ವಾರಾಂತ್ಯಕ್ಕೆ ಚೇತರಿಸಿಕೊಳ್ಳುವ ಲಕ್ಷಣಗಳಿವೆ. ವಾಡಿಕೆಗಿಂತ ಹೆಚ್ಚು ಮಳೆ ಎರಡು ವಾರಗಳಲ್ಲಿ ಆಗಿದ್ದರೂ ಭಾರೀ ಮಳೆಯಾಗಿಲ್ಲ. ಹೀಗಾಗಿ ಬರದ ತೀವ್ರತೆ ತಗ್ಗಿದೆಯೇ ಹೊರತು ಜಲಾಶಯಗಳ ಒಳ ಹರಿವು ಗಣನೀಯವಾಗಿ ಹೆಚ್ಚಳವಾಗಿಲ್ಲ. ಹೀಗಾಗಿ ಮಳೆ ಬಂದರೂ ನೀರಿಗೆ ಬರ ಎನ್ನುವಂತಾಗಿದೆ. ಪ್ರಸಕ್ತ ಜಲ ವರ್ಷದ ಆರಂಭವಾಗಿದ್ದು, ನೆರೆಯ ರಾಜ್ಯಗಳ ಪಾಲಿನ ನೀರನ್ನು ಬಿಡಬೇಕಾದ ಸಂಕಷ್ಟ ಮುಂದಿನ ತಿಂಗಳಿನಿಂದ ಪ್ರಾರಂಭವಾಗಲಿದೆ.

RELATED ARTICLES

Latest News