ಲಖನೌ,ಜೂನ್.19– ಮಹಿಳಾ ಪ್ರಯಾಣಿಕರೊಬ್ಬರು ಸಹಪ್ರಯಾಣಿ ಕರೊಂದಿಗೆ ಜಗಳವಾಡಿ, ತಡೆಯಲು ಬಂದು ರಕ್ಷಣಾ ಸಿಬ್ಬಂದಿ ಕೈ ಕಚ್ಚಿ ಗಾಯಗೊಳಿಸಿರುವ ಘಟನೆ ಇಲ್ಲಿನ ಚೌಧರಿ ಚರಣ್ ಸಿಂಗ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ಲಖನೌದಿಂದ ಮುಂಬೈಗೆ ತೆರಳುತ್ತಿದ್ದ 1525 ಆಕಾಸಾ ವಿಮಾನದಲ್ಲಿ ಈ ಘಟನೆ ನಡೆದಿದ್ದು,ಸದ್ಯ ಲಖನೌ ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.ನಿನ್ನೆ ಸಂಜೆ ಮಹಿಳೆಯೊಬ್ಬರು ಲಖನೌದಿಂದ ಮುಂಬೈಗೆ ತೆರಳಲು 1525 ಆಕಾಸಾ ವಿಮಾನವನ್ನು ಏರಿ ಆಸನದಲ್ಲಿ ಕೂರುವಾಗ ಸಹಪ್ರಯಾಣಿಕರೊಂದಿಗೆ ಜಗಳವಾಡಿದ್ದಾರೆ.
ಇದನ್ನು ಕಂಡ ವಿಮಾನ ಸಿಬ್ಬಂದಿ ವಿಚಾರಿಸಲು ಹೋದಾಗ ಮಹಿಳೆ ಸಿಬ್ಬಂದಿಗಳೊಂದಿಗೂ ಜಗಳವಾಡಿದ್ದಾರೆ ಎಷ್ಟೇ ಪ್ರಯತ್ನಿಸಿದರೂ ಶಾಂತವಾಗದ ಮಹಿಳೆ ಸಿಬ್ಬಂದಿ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ.
ಈ ವಿಷಯ ತಿಳಿದ ಅಲ್ಲಿದ್ದ ಭದ್ರತಾ ಸಿಬ್ಬಂದಿ ಮಹಿಳೆಯನ್ನುವಿಮಾನದಿಂದ ಕೆಳಗಿಳಿಸಿದ್ದಾರೆ.ಇಷ್ಟಾದರೂ ಸುಮನಾಗದ ಮಹಿಳೆ ವಿಮಾನದೊಳಗೆ ಮರುಪ್ರವೇಶಿಸಲು ಯತ್ನಿಸಿದ್ದಾರೆ. ಇದನ್ನು ತಡೆದ ಭದ್ರತಾ ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡಿ ಕೈಯನ್ನು ಕಚ್ಚಿ ಗಾಯಗೊಳಿಸಿದ್ದಾರೆ.
ಇದನ್ನು ಕಂಡು ವಿಚಲಿತರಾದ ಪ್ರಯಾಣಿಕರು ನಂತರ ಸಮಾಧಾನಗೊಂಡಿದ್ದಾರೆ. ಪೊಲೀಸರಿಗೆ ಮಾಹಿತಿ ನೀಡಿ ಅವರು ಸ್ಥಳಕ್ಕೆ ದಾವಿಸಿ ಮಹಿಳೆಯನ್ನು ವಶಕ್ಕೆ ಪಡೆದಿದ್ದಾರೆ. ಸರೋಜಿನಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಮಹಿಳೆಯ ಮಾನಸಿಕ ಸ್ಥಿತಿ ಸರಿಯಿಲ್ಲ ಎಂದು ಹೇಳಲಾಗುತ್ತಿದೆ. ವೈದ್ಯಕೀಯ ಪರೀಕ್ಷೆಗೆ ಕಳುಹಿಸಿ ವರದಿ ಬಂದ ಬಳಿಕ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಂಟಿ ಪೊಲೀಸ್ ಆಯುಕ್ತ ಕುಲ್ಹಾರಿ ಘಟನೆ ಬಗ್ಗೆ ತಿಳಿಸಿದ್ದಾರೆ.