Sunday, September 8, 2024
Homeರಾಜ್ಯಶಿರೂರು ಗುಡ್ಡ ಕುಸಿತ : ಅಧಿಕಾರಿಗಳ ಆರೋಪ- ಪ್ರತ್ಯಾರೋಪ, ಸಂತ್ರಸ್ತರು ಅತಂತ್ರ

ಶಿರೂರು ಗುಡ್ಡ ಕುಸಿತ : ಅಧಿಕಾರಿಗಳ ಆರೋಪ- ಪ್ರತ್ಯಾರೋಪ, ಸಂತ್ರಸ್ತರು ಅತಂತ್ರ

ಬೆಂಗಳೂರು,ಜು.19-ಉತ್ತರಕನ್ನಡ ಅಂಕೋಲ ಬಳಿಯ ಶಿರೂರು ಬಳಿ ಗುಡ್ಡ ಕುಸಿದು ನದಿಯಲ್ಲಿ ಕೊಚ್ಚಿ ಹೋಗಿ ಏಳು ಮಂದಿ ಮೃತಪಟ್ಟು ಅಪಾರ ಹಾನಿ ಉಂಟಾಗಿದೆ. ಸಂತ್ರಸ್ತರು ಅತಂತ್ರ ಸ್ಥಿತಿಯಲ್ಲಿದ್ದರೆ, ಇತ್ತ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಆರೋಪ-ಪ್ರತ್ಯಾರೋಪದಲ್ಲಿ ತೊಡಗಿದ್ದಾರೆ.

ಶಿರೂರಿನ ರಾಷ್ಟ್ರೀಯ ಹೆದ್ದಾರಿ 65ರಲ್ಲಿ ಭೂಕುಸಿತದಿಂದ ಜೀವಹಾನಿಗಳಾಗಿ ಶವಗಳನ್ನು ಹೊರತೆಗೆಯುವ ಕಾರ್ಯದಲ್ಲಿ ರಾಜ್ಯ ಸರ್ಕಾರ ತೊಡಗಿದೆ. ತಮ ಪ್ರಾಣ ಪಣಕ್ಕಿಟ್ಟು ಜಿಲ್ಲಾಡಳಿತ ಹಾಗೂ ಸಿಬ್ಬಂದಿ ಮೃತದೇಹಗಳಿಗಾಗಿ ಕಾರ್ಯಾಚರಣೆಯಲ್ಲಿ ಹಗಲಿರುಳು ತೊಡಗಿದ್ದಾರೆ.

ಈ ಭಾಗದಲ್ಲಿ ಸತತ ಮಳೆ ಸುರಿಯುತ್ತಿದ್ದು, ಕಾರ್ಯಾಚರಣೆಗೆ ಅಡ್ಡಿಯಾಗಿದ್ದರೂ ಸಹ ತಮ ಪ್ರಾಣವನ್ನು ಲೆಕ್ಕಿಸದೆ ಸ್ಥಳೀಯರ ನೆರವಿಗಾಗಿ ಧಾವಿಸಿದ್ದಾರೆ. ಮಳೆ ಜೋರಾಗಿ ಮತ್ತೆ ಗುಡ್ಡ, ಜೆಸಿಬಿಯೂ ಕುಸಿಯುವ ಆತಂಕದಲ್ಲಿ ರಾಜ್ಯ ಸರ್ಕಾರ ತಮ ಜವಾಬ್ದಾರಿಯನ್ನು ಮರೆಯದೆ ಪರಿಸ್ಥಿತಿ ಸರಿದೂಗಿಸಲು ಯತ್ನಿಸುತ್ತಿದೆ. ಆದರೆ ಇತ್ತ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದವರು ರಸ್ತೆ ಮಧ್ಯೆ ಬಿದ್ದಿರುವ ಮಣ್ಣನ್ನು ತೆರವುಗೊಳಿಸುತ್ತೇವೆ. ಮೊದಲು ರಸ್ತೆ ಕ್ಲಿಯರ್‌ ಆಗಬೇಕೆಂದು ಒತ್ತಡ ಹಾಕುತ್ತಿದ್ದಾರೆ.

ಒಂದು ವೇಳೆ ಈ ಮಣ್ಣಿನಡಿ ಯಾರಾದರೂ ಸಿಲುಕಿಕೊಂಡಿದ್ದರೆ ಮಣ್ಣು ತೆರವು ವೇಳೆ ಜೆಸಿಬಿ ತಾಗಿದರೆ ಎಂಬ ಆತಂಕ ಜಿಲ್ಲಾಡಳಿತದ್ದು, ಹಾಗಾಗಿ ರಾಜ್ಯಸರ್ಕಾರ ಹಾಗೂ ಕೇಂದ್ರ ಸರ್ಕಾರದ ಸಂಘರ್ಷದಿಂದ ಅಲ್ಲಿನ ಸ್ಥಳೀಯರು ಪರದಾಡುವಂತಾಗಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದವರು ಮನಸೋ ಇಚ್ಛೆ ಗುಡ್ಡ ಕೊರೆದು ರಸ್ತೆ ನಿರ್ಮಿಸಿರುವುದೇ ಇಂದಿನ ಅನಾಹುತಕ್ಕೆ ಕಾರಣವಾಗಿದೆ ಎಂಬುದು ರಾಜ್ಯ ಸರ್ಕಾರದ ಆರೋಪವಾಗಿದೆ. ಪ್ರಕೃತಿ ವಿಕೋಪದಿಂದ ಉಂಟಾಗಿರುವ ಶಿರೂರು ಅನಾಹುತಕ್ಕೆ ಕೇಂದ್ರ ಸ್ಪಂದಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಹೆದ್ದಾರಿ ಮಾನದಂಡಗಳನ್ನು ಪಾಲಿಸಿಲ್ಲ. ಟೋಲ್‌ ಸಂಗ್ರಹವೇ ಅವರ ಏಕೈಕ ಉದ್ದೇಶದಿಂದ ರಸ್ತೆ ನಿರ್ಮಾಣ ಮಾಡುತ್ತಿದ್ದಾರೆ. ನಂತರ ಸಂಭವಿಸುವ ಅಪಾಯಗಳಿಗೆ ರಾಜ್ಯ ಸರ್ಕಾರವೇ ಉತ್ತರ ಕೊಡಬೇಕು. ಆದರೆ ಕೇಂದ್ರ ಸರ್ಕಾರ ಹೆದ್ದಾರಿಗಳಲ್ಲಿ ಟೋಲ್‌ ಸಂಗ್ರಹಿಸುವುದಷ್ಟೇ ಅವರ ಮಾನದಂಡವಾಗಿದೆಯೇ ಹೊರತು ಯಾವುದೇ ಜವಾಬ್ದಾರಿ ತೆಗೆದುಕೊಳ್ಳುತ್ತಿಲ್ಲ.

ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಜಿಲ್ಲಾಧಿಕಾರಿ ಮನವಿ ಮಾಡಿದರೂ ಸ್ಪಂದಿಸದೆ, ಕೇವಲ ಹೆದ್ದಾರಿ ಮಧ್ಯೆ ಬಿದ್ದಿರುವ ಮಣ್ಣು ತೆರವುಗೊಳಿಸಲಷ್ಟೇ ಯೋಚಿಸುತ್ತಿದೆ. ಈ ಭಾಗದಲ್ಲಷ್ಟೇ ಅಲ್ಲದೆ ಇದೇ ರೀತಿಯ ಅಪಾಯಕರ ಹೆದ್ದಾರಿಗಳಿವೆ. ಅದನ್ನು ಗುರುತಿಸಿ ಮಾಹಿತಿ ಸಂಗ್ರಹಿಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಜೊತೆ ಸಭೆ ನಡೆಸಿ ಮುಂದಾಗುವ ಅಪಾಯವನ್ನು ತಪ್ಪಿಸಬೇಕಿದೆ.

RELATED ARTICLES

Latest News