ನವದೆಹಲಿ,ಫೆ.19- ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪುತ್ರ ಜೈ ಶಾ ಎಂದು ಹೇಳಿಕೊಂಡು ಬಿಜೆಪಿ ಶಾಸಕ ಆದೇಶ್ ಚೌಹಾಣ್ ಅವರನ್ನು ವಂಚಿಸಲು ಮುಂದಾಗಿದ್ದ ಯುವಕನನ್ನು ಉತ್ತರಾಖಂಡ ಪೊಲೀಸರು ಬಂಧಿಸಿದ್ದಾರೆ.
ಯುವಕನೊಬ್ಬ ಶಾ ಅವರ ಪುತ್ರ ಎಂದು ಹೇಳಿಕೊಂಡು 5 ಲಕ್ಷ ರೂ.ಗಳಿಗೆ ಬೇಡಿಕೆ ಇಟ್ಟಿದ್ದಾನೆ ಎಂಬ ಬಗ್ಗೆ ಶಾಸಕರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿ ಗೌರವ್ ನಾಥ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಶಾಸಕರ ಫೋನ್‌ಗೆ ಅಪರಿಚಿತ ಸಂಖ್ಯೆಯಿಂದ ಕರೆ ಬಂದಿರುವುದಾಗಿ ಶಾಸಕರ ಸಾರ್ವಜನಿಕ ಸಂಪರ್ಕ ಅಧಿಕಾರಿ ರೋಮಿಶ್ ಕುಮಾರ್ ದೂರು ದಾಖಲಿಸಿದ್ದರು. ಕರೆ ಮಾಡಿದ ವ್ಯಕ್ತಿ ತನ್ನನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪುತ್ರ ಜೈ ಶಾ ಎಂದು ಪರಿಚಯಿಸಿಕೊಂಡಿದ್ದ.
ಗೃಹ ಸಚಿವ ಶಾ ಮತ್ತು ಬಿಜೆಪಿಯ ಹಲವು ಹಿರಿಯ ನಾಯಕರೊಂದಿಗೆ ತನಗೆ ಉತ್ತಮ ಸಂಪರ್ಕವಿದೆ ಎಂದು ಆತ ಹೇಳಿಕೊಂಡಿದ್ದು, ಶಾಸಕರನ್ನು ಬೆದರಿಸಿ 5 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದ.ರಾಣಿಪುರ ಶಾಸಕರ ಹೊರತಾಗಿ ಮೂವರು ಆರೋಪಿಗಳು ಒಟ್ಟಾಗಿ ರುದ್ರಪುರ ಮತ್ತು ಭೀಮತಾಲ್ ಶಾಸಕರಿಗೆ ಕರೆ ಮಾಡಿ ಬೆದರಿಕೆ ಹಾಕಿ ಹಣ ಕೊಡುವಂತೆ ಕೇಳಿದ್ದ.
ಪೊಲೀಸರು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಜೈಲಿಗೆ ಕಳುಹಿಸಿದ್ದಾರೆ.ಜನವರಿ 14 ರಂದು ರಾಣಿಪುರ ಶಾಸಕ ಆದೇಶ್ ಚೌಹಾಣ್ ಅವರಿಗೆ ಕರೆ ಮಾಡಿ ಮಾತನಾಡಿದ ವ್ಯಕ್ತಿ ತನ್ನನ್ನು ಗೃಹ ಸಚಿವ ಅಮಿತ್ ಶಾ ಅವರ ಪುತ್ರ ಜೈಶಾ ಎಂದು ಪರಿಚಯಿಸಿಕೊಂಡಿದ್ದಾನೆ ಎಂದು ಎಸ್‌ಎಸ್‌ಪಿ ಪ್ರಮೋದ್ ದೋಬಾಲ್ ಹೇಳಿದ್ದಾರೆ.
ವಂಚಕನ ಬಗ್ಗೆ ತಿಳಿದುಕೊಂಡು ಶಾಸಕನೊಂದಿಗೆ ಸ್ಪಷ್ಟವಾಗಿ ಮಾತನಾಡಿದಾಗ, ಆತ ತನ್ನನ್ನು ಬೆದರಿಸಿ 5 ಲಕ್ಷ ರೂಪಾಯಿ ಸುಲಿಗೆಗೆ ಒತ್ತಾಯಿಸಿದ್ದಾನೆ. ಹಣ ನೀಡದಿದ್ದರೆ, ಅವಾಚ್ಯ ಶಬ್ದಗಳನ್ನು ಬಳಸಿ ಸಾಮಾಜಿಕ ಮಾಧ್ಯಮದಲ್ಲಿ ಮಾನಹಾನಿ ಮಾಡುವುದಾಗಿ ಬೆದರಿಕೆ ಹಾಕಿದ್ದ ಎನ್ನಲಾಗಿದೆ.