ಡೆಹ್ರಾಡೂನ್, ಮಾ.2- ಉತ್ತರಾಖಂಡದ ಚಮೋಲಿ ಜಿಲ್ಲೆಯ ಮಾನಾ ಗ್ರಾಮದ ಹಿಮಪಾತ ಪೀಡಿತ ಬಿಆರ್‌ಒ ಶಿಬಿರದ ಸ್ಥಳದಲ್ಲಿ ಕಾಣೆಯಾದ ನಾಲ್ವರು ಕಾರ್ಮಿಕರನ್ನು ಪತ್ತೆಹಚ್ಚುವ ಶೋಧ ಕಾರ್ಯಾಚರಣೆಯನ್ನು ಮುಂದುವರೆಸಲಾಗಿದೆ.
ಕಾರ್ಯಚರಣೆಗೆ ಸ್ನಿಫರ್ ನಾಯಿಗಳು ಮತ್ತು ಹೆಲಿಕಾಪ್ಟರ್‌ಗಳ ಸಹಾಯ ಬಳಸಿಕೊಳ್ಳಲಾಗುತ್ತಿದೆ. ಚಮೋಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಸಂದೀಪ್ ತಿವಾರಿ ಮಾತನಾಡಿ, ಹವಾಮಾನವು ಸ್ಪಷ್ಟವಾಗಿರುವುದರಿಂದ ಶೋಧ ಕಾರ್ಯಾಚರಣೆಯು ವೇಗವನ್ನು ಪಡೆಯುವ ನಿರೀಕ್ಷೆಯಿದೆ ಮತ್ತು ಪ್ರಯತ್ನಗಳಿಗೆ ಸಹಾಯ ಮಾಡಲು ದೆಹಲಿಯಿಂದ ಗೌಂಡ್ ಪೆನೆಟ್ರೇಟಿಂಗ್ ರಾಡಾರ್ (ಜಿಪಿಆರ್) ವ್ಯವಸ್ಥೆಯು ಯಾವುದೇ ಕ್ಷಣದಲ್ಲಿ ಇಲ್ಲಿಗೆ ಬರುವ ನಿರೀಕ್ಷೆಯಿದೆ ಎಂದು ಹೇಳಿದರು.
ಹಿಮಪಾತದ ಸ್ಥಳಕ್ಕೆ ಜಿಪಿಆರ್ ವ್ಯವಸ್ಥೆಯನ್ನು ಹಾರಿಸಲು ಎಂಐ-17 ಹೆಲಿಕಾಪ್ಟರ್ ಡೆಹ್ರಾಡೂನ್‌ನಲ್ಲಿ ಕಾಯುತ್ತಿದೆ ಎಂದು ಅವರು ಹೇಳಿದರು. ಮಾನಾ ಮತ್ತು ಬದರೀನಾಥ್ ನಡುವಿನ ಬಾರ್ಡರ್ ರೋಡ್ಸ್ ಆರ್ಗನೈಸೇಶನ್ (ಬಿಆರ್‌ಒ) ಶಿಬಿರದಲ್ಲಿ ಶುಕ್ರವಾರ ಹಿಮಪಾತ ಸಂಭವಿಸಿದ್ದು, 55 ಕಾರ್ಮಿಕರು ಎಂಟು ಕಂಟೇನರ್‌ಗಳು ಮತ್ತು ಶೆಡ್‌ಗಳಲ್ಲಿ ಸಿಲುಕಿ ಹಾಕೊಂಡಿದ್ದರು.
ಹಿಮಪಾತ ಪೀಡಿತ ಕಾರ್ಮಿಕರ ಸಂಖ್ಯೆಯನ್ನು ಈಗ 55 ರಿಂದ 54 ಕ್ಕೆ ಪರಿಷ್ಕರಿಸಲಾಗಿದೆ, ಏಕೆಂದರೆ ಹಿಮಾಚಲ ಪ್ರದೇಶದ ಅವರಲ್ಲಿ ಒಬ್ಬರು ತಮ್ಮ ಉದ್ಯೋಗದಾತರಿಗೆ ಹೇಳದೆ ಅನಧಿಕೃತ ರಜೆಯಲ್ಲಿದ್ದರು. ಅವರು ಸುರಕ್ಷಿತವಾಗಿ ಮನೆಗೆ ತಲುಪಿದ್ದಾರೆ. ಶುಕ್ರವಾರದ ವೇಳೆಗೆ ಐವತ್ತು ಕಾರ್ಮಿಕರನ್ನು ಹಿಮದಿಂದ ಹೊರತೆಗೆಯಲಾಯಿತು. ಅದರಲ್ಲಿ ನಾಲ್ವರು ಸಾವನ್ನಪ್ಪಿದ್ದರು ಉಳಿದ ನಾಲ್ವರ ರಕ್ಷಣಾ ಕಾರ್ಯಚರಣೆ ಮುಂದುವರೆದಿದ್ದು ಅವರ ಸಾವು-ನೋವಿನ ಬಗ್ಗೆ ಮಾಹಿತಿ ಸಿಕ್ಕಿಲ್ಲ.