ಪೌರಿ(ಉತ್ತರಖಂಡ್,ಜ.13)- ಚಾಲಕನ ನಿಯಂತ್ರಣ ತಪ್ಪಿದ ಬಸ್ಸು ಆಳವಾದ ಕಂದಕಕ್ಕೆ ಬಿದ್ದ ಪರಿಣಾಮ, ಆರು ಮಂದಿ ಸಾವನ್ನಪ್ಪಿದ್ದು, ಹಲವರು ತೀವ್ರವಾಗಿ ಗಾಯಗೊಂಡಿರುವ ಘಟನೆ ಉತ್ತರಾಖಂಡದಲ್ಲಿ ನಡೆದಿದೆ.
ಪೌರಿಯಿಂದ ಸೆಂಟ್ರಲ್ ಶಾಲೆಗೆ ಹೋಗುವ ಮಾರ್ಗ ಮಧ್ಯೆ ಈ ಅಪಘಾತ ಸಂಭವಿಸಿದೆ. ಇದುವರೆಗೂ 6 ಮಂದಿ ಸಾವನ್ನಪ್ಪಿದ್ದು, 22ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಖಾಸಗಿ ಬಸ್ ನಿಯಂತ್ರಣ ತಪ್ಪಿ ರಸ್ತೆಯಿಂದ ಸುಮಾರು 100 ಮೀಟರ್ ದೂರದಲ್ಲಿರುವ ಕಂದಕಕ್ಕೆ ಬಿದ್ದಿದೆ. ಬಸ್ ಕೆಳಗೆ ಬಿದ್ದ ನಂತರ ಮರಕ್ಕೆ ಡಿಕ್ಕಿ ಹೊಡೆದು ನಿಂತಿದೆ. ಬಸ್ಸಿನ ಬ್ರೇಕ್ ವೈಫಲವಾದ ಆದ ಕಾರಣ ಈ ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಅಪಘಾತದಲ್ಲಿ ಗಾಯಗೊಂಡವರನ್ನು ಪೌರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.