ಬೆಂಗಳೂರು, ಮಾ.6– ಮಂಗನ ಕಾಯಿಲೆಗೆ ಲಸಿಕೆ ತಯಾರಿಸಲು ಹೈದರಾಬಾದ್‌ನಲ್ಲಿನ ಐಸಿಎಂಆರ್‌ನಲ್ಲಿ ಸಂಶೋಧನೆ ನಡೆಸಲಾಗುತ್ತಿದೆ. ಮುಂದಿನ ವರ್ಷದ ವೇಳೆಗೆ ಪರಿಣಾಮಕಾರಿ ಲಸಿಕೆ ಲಭ್ಯವಾಗಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂ ರಾವ್ ಭರವಸೆ ನೀಡಿದರು.
ವಿಧಾನಸಭೆ ಪ್ರಶ್ನೋತ್ತರ ವೇಳೆಯಲ್ಲಿ ತೀರ್ಥಹಳ್ಳಿ ಕ್ಷೇತ್ರದ ಬಿಜೆಪಿ ಶಾಸಕ ಅರಗಜ್ಞಾನೇಂದ್ರ, ಮಲೆನಾಡು ಭಾಗದಲ್ಲಿ ಮಂಗನಕಾಯಿಲೆ ಹಾಗೂ ಡೆಂಗ್ಯೂ ಸಮಸ್ಯೆ ತೀವ್ರವಾಗಿದೆ. ಮಂಗನಕಾಯಿಲೆಗೆ ಔಷಧಿ ಉತ್ಪಾದಿಸುವ ಘಟಕ ಸ್ಥಗಿತಗೊಂಡಿದೆ. 1957ರಿಂದಲೂ ಮಂಗನಕಾಯಿಲೆ ಕಾಡುತ್ತಿದೆ. ಹಲವಾರು ಮಂದಿ ಸಾವನ್ನಪ್ಪಿದ್ದಾರೆ.
ಸರ್ಕಾರ ನಿರ್ಲಕ್ಷ್ಯ ವಹಿಸದೇ ಕೂಡಲೇ ಲಸಿಕೆ ಅಭಿವೃದ್ಧಿ ಪಡಿಸಬೇಕು. ಜೊತೆಗೆ ಮಲೆನಾಡು ಭಾಗದಲ್ಲಿ ವೈದ್ಯರ ಕೊರತೆ ಇರುವುದರಿಂದ ಸಂಚಾರಿ ಚಿಕಿತ್ಸಾ ಘಟಕ ಆರಂಭಿಸಿ ಎಂದು ಒತ್ತಾಯಿಸಿದರು.
ಉತ್ತರ ನೀಡಿದ ಸಚಿವರು, ಡೆಂಗ್ಯೂ ಮಳೆಗಾಲದಲ್ಲಿ ಹೆಚ್ಚು ಕಾಡುತ್ತಿದೆ. ಮಂಗನಕಾಯಿಲೆ ಬೇಸಿಗೆ ಕಾಲದಲ್ಲಿ ಹೆಚ್ಚಾಗುತ್ತದೆ. ಮುಂಜಾಗೃತಾ ಕ್ರಮಕ್ಕಾಗಿ ಮಲೆನಾಡು ಹಾಗೂ ಕರಾವಳಿ ಭಾಗದ ಅಧಿಕಾರಿಗಳ ಜೊತೆ ಚರ್ಚೆ ನಡೆಸಲಾಗಿದೆ. ಅಗತ್ಯವಾದ ಔಷಧಿ ದಾಸ್ತಾನು ಮಾಡಲಾಗಿದೆ.
ಮಂಗನಕಾಯಿಲೆಯಿಂದ ಒಬ್ಬರು ಸಾವನ್ನಪ್ಪಿದ್ದಾರೆ. ಅವರಿಗೆ ಕಿಡ್ನಿ ಸೇರಿದಂತೆ ಬೇರೆ ಆರೋಗ್ಯ ಸಮಸ್ಯೆಗಳಿದ್ದವು ಎಂದರು.ಮಂಗನಕಾಯಿಲೆಗೆ ನಿರ್ದಿಷ್ಟ ಔಷಧಿ ಇಲ್ಲ. ಮುಂಜಾಗೃತೆ ಉತ್ತಮ ಪರಿಹಾರ. ಈ ಹಿಂದೆ ಪುಣೆಯ ವೈರಲಾಜಿ ಸಂಸ್ಥೆ 1989ರಲ್ಲಿ ಲಸಿಕೆ ಕಂಡು ಹಿಡಿದಿತ್ತು. ಈಗ ಔಷಧಿಯ ಪ್ರಭಾವ ಕಡಿಮೆಯಾಗಿದೆ.
ಹೊಸದಾಗಿ ಲಸಿಕೆ ಕಂಡು ಹಿಡಿಯಲು ಹೈದರಾಬಾದ್‌ನ ಐಸಿಎಂಆರ್‌ಲಸಿಕೆ ಅಭಿವೃದ್ಧಿ ಪಡಿಸುತ್ತಿದೆ ಎಂದು ಹೇಳಿದರು.ಮಂಗನಕಾಯಿಲೆ ರಾಜ್ಯಕ್ಕೆ ಮಾತ್ರ ಸೀಮಿತವಾಗಿದೆ. ಹಾಗಾಗಿ ಲಸಿಕೆ ಅಭಿವೃದ್ಧಿಗೆ ರಾಜ್ಯ ಸರ್ಕಾರ ಹಣಕಾಸಿನ ಸೌಲಭ್ಯ ಒದಗಿಸಲು ವಿಳಂಬವಾಯಿತು ಎಂದು ಹೇಳಿದರು.