ಬೆಂಗಳೂರು,ಜ.10- ತೊಂದರೆ ಕೊಡುವವರಿಂದ ನನಗೆ ರಕ್ಷಣೆ ಸಿಗಲಿ ಎಂದು ಪ್ರತಿದಿನವೂ ಪೂಜೆ, ಹೋಮ ಮಾಡಿಸುತ್ತಲೇ ಇರುತ್ತೇನೆ. ಇದರಲ್ಲಿ ವಿಶೇಷ ಏನೂ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ವೈಕುಂಠ ಏಕಾದಶಿ ಪ್ರಯುಕ್ತ ಮಲ್ಲೇಶ್ವರಂನ ವೆಂಕಟೇಶ್ವರನ ದೇವಸ್ಥಾನದಲ್ಲಿ ದೇವರ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ನಿನ್ನೆ ತಮಿಳುನಾಡಿನ ವಿವಿಧ ದೇವಸ್ಥಾನಗಳಿಗೆ ಪೂಜೆ ಸಲ್ಲಿಸಿದ ಕುರಿತು ಎದುರಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾನು ಪ್ರತಿದಿನ ಪೂಜೆ ಮಾಡುತ್ತಿರುತ್ತೇನೆ, ಪ್ರತಿದಿನವೂ ದೇವರನ್ನು ನೋಡುತ್ತಿರುತ್ತೇನೆ, ಹೋಮಗಳನ್ನು ಮಾಡಿಸುತ್ತೇನೆ, ನನ್ನ ಮನಸ್ಸಿಗೆ ನೆಮದಿ-ಸಮಾಧಾನಕ್ಕಾಗಿ ಪೂಜೆ ಮಾಡಿಸುತ್ತೇನೆ ಎಂದರು.
ದೇವರ ಮೇಲೆ, ಆಚರಣೆಗಳ ಮೇಲೆ, ಧರ್ಮದ ಮೇಲೆ ನಂಬಿಕೆ ಇದೆ. ದೇವರಿಗೆ ನಮಸ್ಕರಿಸದೆ ನಾನು ನೊಂದಿರುವ ಶಕ್ತಿಗೆ ನಮಿಸದೆ ಮನೆಯಿಂದ ಹೊರಬರುವುದಿಲ್ಲ ಎಂದು ಹೇಳಿದರು. ಡಿ.ಕೆ.ಶಿವಕುಮಾರ್ ಅವರು ಶತ್ರುಗಳ ನಾಶಕ್ಕಾಗಿ ವಿಶೇಷ ಪೂಜೆ ಮಾಡಿಸಿದ್ದಾರೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ಪ್ರತಿದಿನ ಪೂಜೆ ಮಾಡುತ್ತೇನೆ. ನನಗೆ ಒಳ್ಳೆಯದಾಗಲಿ, ನನಗೆ ಯಾರ್ಯಾರು ತೊಂದರೆ ಕೊಡುತ್ತಾರೋ ಅವರಿಂದ ರಕ್ಷಣೆ ಸಿಗಲಿ ಎಂದು ಪೂಜೆ ಮಾಡಿಸುತ್ತೇನೆ. ಇದರಲ್ಲಿ ಯಾವುದೇ ಮುಚ್ಚುಮರೆಯಿಲ್ಲ ಎಂದರು.
ಮಾಧ್ಯಮದವರು ಪ್ರತಿದಿನ ಇಲ್ಲದೇ ಇರುವ ಹೊಸ ಸುದ್ದಿಗಳನ್ನು ಸೃಷ್ಟಿಸಿ ನನಗೆ ತೊಂದರೆ ಕೊಡುತ್ತಾರೆ. ಅವರಿಂದಲೂ ನನಗೆ ರಕ್ಷಣೆ ಕೊಡುವಂತೆ ಪ್ರಾರ್ಥಿಸುತ್ತೇನೆ ಎಂದು ಹೇಳಿದರು.
ವೈಕುಂಠ ಏಕಾದಶಿ ಪ್ರಯುಕ್ತ ಲಕ್ಷಾಂತರ ಜನ ಇಂದು ದೇವರ ದರ್ಶನ ಪಡೆದಿದ್ದಾರೆ. ವೈಕುಂಠ ಏಕಾದಶಿ ಪ್ರಯುಕ್ತ ಲಕ್ಷಾಂತರ ಜನ ಇಂದು ದೇವರ ದರ್ಶನ ಪಡೆದಿದ್ದಾರೆ. ರಾಜ್ಯದ ಎಲ್ಲಾ ಜನರಿಗೂ ಭಗವಂತ ಒಳ್ಳೆಯದನ್ನು ಮಾಡಲಿ, ಎಲ್ಲರಿಗೂ ಆರ್ಥಿಕ ಸಮೃದ್ಧಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದೇನೆ ಎಂದರು.