ವೈಕುಂಠ ಏಕಾದಶಿ ಪ್ರಯುಕ್ತ ದೇಗುಲಗಳಲ್ಲಿ ವಿಶೇಷ ಪೂಜೆ

Spread the love

ಬೆಂಗಳೂರು, ಜ.6-ವೈಕುಂಠ ಏಕಾದಶಿ ಪ್ರಯುಕ್ತ ಇಂದು ನಗರ ಸೇರಿದಂತೆ ರಾಜ್ಯದೆಲ್ಲೆಡೆ ವೆಂಕಟೇಶ್ವರ ಹಾಗೂ ಮತ್ತಿತರ ದೇಗುಲಗಳಲ್ಲಿ ವಿಶೇಷ ದ್ವಾರದ ಮೂಲಕ ಸ್ವಾಮಿಯ ದರ್ಶನಕ್ಕೆ ವ್ಯವಸ್ಥೆ ಮಾಡಿದ್ದು, ಭಕ್ತರ ದಂಡೇ ದೇವಾಲಯಗಳ ಬಳಿ ನೆರೆದು ದರ್ಶನ ಭಾಗ್ಯ ಪಡೆಯಿತು. ಬೆಂಗಳೂರಿನ ಪ್ರಸಿದ್ಧ ತಿರುಮಲ ತಿರುಪತಿ ದೇವಾಲಯ, ಇಸ್ಕಾನ್, ಬನಶಂಕರಿಯ ದೇವಗಿರಿ, ಕೆ.ಆರ್.ಮಾರುಕಟ್ಟೆಯ ಕೋಟೆ ವೆಂಕಟರಮಣಸ್ವಾಮಿ ದೇವಾಲಯ, ಜೆ.ಪಿ.ನಗರದ ತಿರುಮಲಗಿರಿ, ನಾಗರಬಾವಿ ಹಾಗೂ ಕೆ.ಆರ್.ಪುರದ ವೆಂಕಟೇಶ್ವರ ದೇಗುಲ ಸೇರಿದಂತೆ ಬಹುತೇಕ ದೇಗುಲಗಳಲ್ಲಿ ವೈಕುಂಠ ದ್ವಾರ ದರ್ಶನ ವ್ಯವಸ್ಥೆ ಮಾಡಿ ದೇವರಿಗೆ ವಿಶೇಷ ಪೂಜೆ ನೆರವೇರಿಸಲಾಯಿತು.

ಅದೇ ರೀತಿ ರಾಜ್ಯಾದ್ಯಂತ ಮೈಸೂರು, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ವಿಜಯಪುರ, ರಾಮನಗರ, ಚನ್ನಪಟ್ಟಣ, ಎಲ್ಲೆಡೆ ಶ್ರೀನಿವಾಸ ಸ್ವಾಮಿ ದೇವಾಲಯಗಳಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ನೆರವೇರಿದವು. ಭಕ್ತರು ದೇವರ ದರ್ಶನಕ್ಕಾಗಿ ಬೆಳಗಿನ ಜಾವದಿಂದಲೇ ಸಾಲುಗಟ್ಟಿ ನಿಂತು ದರ್ಶನ ಪಡೆದರು.

ಇಸ್ಕಾನ್‍ನಲ್ಲಿ ಬೆಳಿಗ್ಗೆ 3 ಗಂಟೆಗೆ ಸುಪ್ರಭಾತ ಸೇವೆ, ಮಹಾಮಂಗಳಾರತಿಯೊಂದಿಗೆ ಪೂಜಾ ಕೈಂಕರ್ಯ ನಡೆದು 5 ಗಂಟೆಗೆ ದೇವರ ದರ್ಶನಕ್ಕೆ ಅನುವು ಮಾಡಿಕೊಡಲಾಯಿತು. ಎಲ್ಲಾ ದೇವಾಲಯಗಳಲ್ಲೂ ಇಂದು ದಿನಪೂರ್ತಿ ದೇವರ ದರ್ಶನಕ್ಕೆ ಈ ದೇಗುಲಗಳಲ್ಲಿ ಅವಕಾಶ ಮಾಡಿಕೊಡಲಾಗಿತ್ತು. ವೈಕುಂಠ ಎಂದರೆ ವಿಷ್ಣು ಲೋಕ ಒಂದು ಮನ್ವಂತರದಲ್ಲಿ ವಿಷ್ಣು ವೈಕುಂಠೆಯೆಂಬ ಸ್ತ್ರೀಯಲ್ಲಿ ಅವತರಿಸಿದ್ದರು. ಇದರಿಂದ ನಾರಾಯಣನಿಗೆ ವೈಕುಂಠನೆಂಬ ಹೆಸರು ಬಂದಿತೆಂದು ತಿಳಿದುಬರುತ್ತದೆ.

ವೈಕುಂಠ ಏಕಾದಶಿಯ ದಿನ ಉಪವಾಸವಿದ್ದು, ಭಗವಂತನ ನಾಮಸ್ಮರಣೆಯಲ್ಲಿ ಕಳೆಯುವುದು ಈ ದಿನ ವಿಶೇಷ. ಹೀಗೆ ಮಾಡುವ ವ್ರತದಿಂದ ದೇಹ ಮತ್ತು ಮನಸ್ಸಿನ ಸ್ವಾಸ್ಥ್ಯ ಕಾಪಾಡಿಕೊಳ್ಳಬಹುದು. ಪರಮೇಶ್ವರನೇ ಆದ ಶ್ರೀಕೃಷ್ಣನ ನಿಜರೂಪ ಅರಿಯಲಾರದೆ ಗೋಪಿಕೆಯರೆಲ್ಲ ಪರಿತಪಿಸುತ್ತಿದ್ದಾಗ ಕೃಷ್ಣ ಎಲ್ಲರಿಗೂ ಯಮುನಾ ನದಿಯಲ್ಲಿದ್ದ ಬ್ರಹ್ಮಕುಂಡವೆಂಬ ಮಡುವಿನಲ್ಲಿ ಮುಳುಗಿ ಬರುವಂತೆ ತಿಳಿಸಿದಾಗ ಅವರೆಲ್ಲ ಬ್ರಹ್ಮಕುಂಡದಲ್ಲಿ ಮುಳುಗಿ ಬರುವಾಗ ಅವರಿಗೆ ವೈಕುಂಠ ದರ್ಶನವಾಯಿತು.

ಆ ಕಾರಣಕ್ಕೆ ವೈಕುಂಠ ಏಕಾದಶಿ ಎಂದು ಕರದಿರಬಹುದು ಎಂದು ಹೇಳಲಾಗುತ್ತದೆ. ನಮ್ಮಲ್ಲಿ ಪುರಾಣಗಳಿಗೆ ಮಹತ್ವದ ಸ್ಥಾನವಿದೆ. ಅವು ಜನಜೀವನಕ್ಕೆ ಹೊಂದಿಕೊಂಡು ಹೋಗುವ ವಿಷಯಗಳನ್ನು ಪ್ರತಿಪಾದಿಸುತ್ತವೆ ಎಂಬ ನಂಬಿಕೆ ಬೇರೂರಿದೆ. ಸೂರ್ಯನು ಉತ್ತರಾಯಣಕ್ಕೆ ಬದಲಾಗುವ ಮೊದಲು ಬರುವ ಧನುರ್ಮಾಸದ ಶುದ್ಧ ಏಕಾದಶಿಯನ್ನೇ ವೈಕುಂಠ ಅಥವಾ ಮುಕ್ಕೋಟಿ ಏಕಾದಶಿ ಎನ್ನಲಾಗುತ್ತದೆ.

 

Facebook Comments