Thursday, September 19, 2024
Homeರಾಜ್ಯವಿವಿಧ ಸಮುದಾಯಗಳ ನಿಗಮ-ಮಂಡಳಿಗಳಿಗೂ ತಟ್ಟಿದ ವಾಲ್ಮೀಕಿ ನಿಗಮದ ಅಕ್ರಮ ಎಫೆಕ್ಟ್

ವಿವಿಧ ಸಮುದಾಯಗಳ ನಿಗಮ-ಮಂಡಳಿಗಳಿಗೂ ತಟ್ಟಿದ ವಾಲ್ಮೀಕಿ ನಿಗಮದ ಅಕ್ರಮ ಎಫೆಕ್ಟ್

ಬೆಂಗಳೂರು,ಜು.14- ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿನ ಹಣ ಅಕ್ರಮ ವರ್ಗಾವಣೆ ಪ್ರಕರಣದ ಪರಿಣಾಮವಾಗಿ ಸರ್ಕಾರದ ವಿವಿಧ ಸಮುದಾಯಗಳ ನಿಗಮ ಮಂಡಳಿಗಳಿಗೂ ಭಾರೀ ಬಿಸಿ ತಗಲುವಂತಾಗಿದೆ.

ಎತ್ತಿಗೆ ಜ್ವರ ಬಂದರೆ ಎಮೆಗೆ ಬರೆ ಎಳೆದಂತೆ ವಾಲೀಕಿ ನಿಗಮದಲ್ಲಾಗಿರುವ ಅವ್ಯವಹಾರದಿಂದಾಗಿ ಬಹುತೇಕ ಎಲ್ಲಾ ನಿಗಮಗಳಲ್ಲೂ ಸೌಲಭ್ಯಗಳ ಹಂಚಿಕೆ, ಫಲಾನುಭವಿಗಳ ಆಯ್ಕೆ, ಹಣ ಬಿಡುಗಡೆಗೆ ತಡೆ ನೀಡಲಾಗಿದೆ.

ರಾಜಕೀಯ ಕಾರಣಗಳಿಗಾಗಿ ಬಿಜೆಪಿ, ಕಾಂಗ್ರೆಸ್‌‍ ಪಕ್ಷಗಳು ಅವಕಾಶ ಸಿಕ್ಕಾಗಲೆಲ್ಲ ಜಾತಿಗೊಂದು ನಿಗಮಗಳನ್ನು ರಚನೆ ಮಾಡಿದ್ದಾರೆ. ಹೀಗಾಗಿ ಬಹುತೇಕ ಜಾತಿ ಆಧಾರಿತ ನಿಗಮಗಳಲ್ಲಿ ಸ್ವಾವಲಂಬನೆ, ಸ್ವಯಂ ಉದ್ಯೋಗ, ಶೈಕ್ಷಣಿಕ ಚಟುವಟಿಕೆಯ ಬೆಂಬಲ ಸೇರಿದಂತೆ ಹಲವಾರು ಸೌಲಭ್ಯಗಳಿವೆ.

ಆದರೆ ಅವುಗಳನ್ನು ತಲುಪಿಸಲು ಸಾಧ್ಯವಾಗದೆ ನಿಗಮಗಳು ನಿಷ್ಕ್ರಿಯಗೊಂಡಿವೆ. ವಿಧಾನಸಭಾ ಚುನಾವಣೆ ಕಾರಣಕ್ಕಾಗಿ ಕಳೆದ ವರ್ಷ ನಿಗಮಗಳ ಚಟುವಟಿಕೆಗಳಿಗೆ ಗ್ರಹಣ ಬಡಿದಿತ್ತು. ಹೊಸ ಸರ್ಕಾರ ಬಂದು ಸುಧಾರಿಸಿಕೊಳ್ಳುವಷ್ಟರಲ್ಲಿ ಮತ್ತೆ ಲೋಕಸಭೆ ಚುನಾವಣೆ ಎದುರಾಗಿತ್ತು.

ನೀತಿಸಂಹಿತೆಯಿಂದಾಗಿ ಜೂನ್‌ವರೆಗೂ ಸರಿಸುಮಾರು ನಾಲ್ಕು ತಿಂಗಳು ಆಡಳಿತ ಯಂತ್ರ ಕೋಮಾ ಸ್ಥಿತಿಯಲ್ಲಿತ್ತು. ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯೂ ನಡೆಯಲಿಲ್ಲ. ಕಳೆದ ಮೂರು ವರ್ಷಗಳಿಂದಲೂ ಫಲಾನುಭವಿಗಳ ಪಟ್ಟಿ ಇಲ್ಲದೆ, ಹಣ ಬಿಡುಗಡೆಯಾಗದೆ ಯೋಜನೆಗಳು ನೆನೆಗುದಿಗೆ ಬಿದ್ದಿವೆ.

ಹೆಸರಿಗೆ ಮಾತ್ರ ಸರ್ಕಾರದ ಸೌಲಭ್ಯಗಳ ಪ್ರಗತಿ ಕಾಗದ ಪತ್ರದಲ್ಲಿದೆ. ಪ್ರತಿಯೊಂದು ಇಲಾಖೆಯಲ್ಲೂ ಆಯಾ ಸಚಿವರು ತಮ ಸಾಧನೆಗಳ ಬಗ್ಗೆ ಹೇಳಿಕೊಳ್ಳುತ್ತಿದ್ದಾರೆ. ಆದರೆ ಅವೆಲ್ಲವೂ ಕೇವಲ ಲೆಕ್ಕಪತ್ರಗಳಿಗೆ ಮಾತ್ರ ಸೀಮಿತವಾಗಿವೆ. ಭೌತಿಕವಾಗಿ ನಿಗಮಗಳಲ್ಲಿ ಫಲಾನುಭವಿಗಳ ಪಟ್ಟಿಯೇ ಇಲ್ಲ ಎಂಬ ಅಂಶ ಚರ್ಚೆಗೆ ಗ್ರಾಸವಾಗಿದೆ.

ವಾಲೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ಇದೇ ರೀತಿ ಬಳಕೆಯಾಗದೆ ಉಳಿದ 187 ಕೋಟಿ ರೂ.ಗಳನ್ನು ದುಷ್ಟ ಜಾಲ ದುರ್ಬಳಕೆ ಮಾಡಿಕೊಂಡು ನುಂಗಿ ನೀರು ಕುಡಿಯುವ ಹುನ್ನಾರ ನಡೆಸಿತ್ತು. ಬಹುತೇಕ ಅಷ್ಟೂ ಹಣಕ್ಕೂ ನಕಲಿ ಫಲಾನುಭವಿಗಳ ಪಟ್ಟಿಯನ್ನು ಲಗತ್ತಿಸಿ ಹಣ ಲಪಟಾಯಿಸುವ ಸಾಧ್ಯತೆಗಳಿದ್ದವು.

ನಿಗಮದ ಅಧೀಕ್ಷಕ ಚಂದ್ರಶೇಖರನ್‌ ಆತಹತ್ಯೆಯಿಂದಾಗಿ ಹಗರಣ ಬಯಲಿಗೆ ಬಂದಿದೆ. ನಿಗಮದ ವ್ಯವಸ್ಥಾಪಕ ನಿರ್ದೇಶಕರು, ಇಲಾಖೆಯ ಸಚಿವರಾಗಿದ್ದವರೂ ಸೇರಿದಂತೆ ಎಲ್ಲರೂ ವಿಚಾರಣೆಗೊಳಗಾಗಿ ಜೈಲಿನ ಕಂಬಿ ಎಣಿಸುವಂತಾಗಿದೆ.

ಹಗರಣ ಬೆಳಕಿಗೆ ಬರುತ್ತಿದ್ದಂತೆ ಸರ್ಕಾರದ ಪ್ರಮುಖರು ಎಲ್ಲಾ ನಿಗಮಗಳ ಅಧ್ಯಕ್ಷರಿಗೆ ಸ್ಪಷ್ಟ ಸೂಚನೆ ನೀಡಿದ್ದು, ಯಾವುದೇ ಕಡತಗಳನ್ನು ವಿಲೇವಾರಿ ಮಾಡಬಾರದು, ಫಲಾನುಭವಿಗಳ ಆಯ್ಕೆ ಪಟ್ಟಿ ಸೇರಿದಂತೆ ಬೇರೆಲ್ಲ ಚಟುವಟಿಕೆಗಳು ನಡೆದರೂ ಹಣ ಒಂದೂ ರೂಪಾಯಿಯೂ ಬಿಡುಗಡೆಯಾಗಬಾರದು ಎಂಬ ಸೂಚನೆ ನೀಡಿದ್ದಾರೆ. ಇದರಿಂದಾಗಿ ಹಲವಾರು ನಿಗಮಗಳಲ್ಲಿ ಸಾವಿರಾರು ಕೋಟಿ ರೂ. ಕೊಳೆಯುತ್ತ ಬಿದ್ದಿದೆ.

ಹಿಂದುಳಿದ ವರ್ಗಗಳ ಇಲಾಖೆಗೆ ಸೇರಿದ ಕೆಲವು ನಿಗಮಗಳಲ್ಲಿ ಮೂರು ವರ್ಷಗಳಿಂದಲೂ ಫಲಾನುಭವಿಗಳಿಗೆ ಸೌಲಭ್ಯ ಹಂಚಿಕೆಯಾಗದೆ ಸುಮಾರು 500ರಿಂದ 600 ಕೋಟಿ ರೂ.ಗಳಷ್ಟು ಹಣ ಬಾಕಿ ಇವೆ ಎಂದು ಹೇಳಲಾಗುತ್ತಿದೆ.

ಈ ಹಿಂದಿನ ಸರ್ಕಾರಗಳು ಸೌಲಭ್ಯಗಳನ್ನು ಜನರಿಗೆ ತಲುಪಿಸಲು ಮನಸ್ಸಿಲ್ಲದೆ ಫಲಾನುಭವಿಗಳು ಸಂತ್ರಸ್ತರಾದರೆ , ಪ್ರಸ್ತುತ ಸರ್ಕಾರದಲ್ಲಿ ಹಗರಣದ ಗ್ರಹಣದಿಂದಾಗಿ ಮತ್ತಷ್ಟು ವಿಳಂಬವಾಗಿದೆ.

ಆದರೆ ಪ್ರತಿಯೊಂದು ಇಲಾಖೆಯ ಸಚಿವರು ಮಾತ್ರ ನೂರಾರು ಫಲಾನುಭವಿಗಳ ಪಟ್ಟಿ ನೀಡುತ್ತಾ ಹಣ ಖರ್ಚುವೆಚ್ಚದ ಮಾಹಿತಿ ನೀಡುತ್ತಲೇ ಬಂದಿದ್ದಾರೆ. ವಾಸ್ತವವಾಗಿ ಫಲಾನುಭವಿಗಳು ಇಲ್ಲ, ಸೌಲಭ್ಯಗಳು ಇಲ್ಲ ಎಂಬಂತಾಗಿದೆ. ನಾಳೆಯಿಂದ ನಡೆಯುವ ಅಧಿವೇಶನದಲ್ಲಿ ಈ ಬಗ್ಗೆ ಪ್ರಸ್ತಾಪಿಸಿ ಚರ್ಚಿಸಲು ಕೆಲವು ಶಾಸಕರು ದಾಖಲಾತಿಗಳನ್ನು ಸಜ್ಜುಗೊಳಿಸಿಕೊಂಡಿದ್ದಾರೆ.

RELATED ARTICLES

Latest News