ಬೆಂಗಳೂರು,ಜೂ.12– ವಾಲಿಕಿ ನಿಗಮದಲ್ಲಿನ ಅವ್ಯವಹಾರಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿರುವ ಎಸ್‌ಐಟಿ ನಕಲಿ ಖಾತೆ ತೆರೆದಿದ್ದ ಆರೋಪಿಯನ್ನು ಬಂಧಿಸಿ 8 ಕೋಟಿಗೂ ಹೆಚ್ಚು ನಗದನ್ನು ವಶಪಡಿಸಿಕೊಂಡಿದ್ದಾರೆ.
ಹೈದರಾಬಾದ್‌ನಲ್ಲಿ ಆರೋಪಿ ಸತ್ಯನಾರಾಯಣ ವರ್ಮ ಎಂಬಾತನನ್ನು ಎಸ್‌ಐಟಿ ಬಂಧಿಸಿ ವಿಚಾರಣೆಗೊಳಪಡಿಸಿ ಅಕೌಂಟ್ ನಂಬರ್‌ಗಳ ಪರಿಶೀಲನೆ ವೇಳೆ ನಕಲಿ ಖಾತೆ ತೆರೆದಿರುವುದು ಖಚಿತವಾಗಿದೆ.
ವಾಲೀಕಿ ನಿಗಮದಲ್ಲಿನ ಹಣವನ್ನು ವರ್ಗಾವಣೆ ಮಾಡಲು ಆರೋಪಿಯು 18 ನಕಲಿ ಬ್ಯಾಂಕ್ ಖಾತೆಗಳನ್ನು ತೆರೆದಿದ್ದಾನೆ. ಈ ಖಾತೆಗಳಿಗೆ ಅಕ್ರಮವಾಗಿ ಹಣ ವರ್ಗಾವಣೆಯಾಗಿರುವ ಬಗ್ಗೆ ಎಸ್‌ಐಟಿ ತನಿಖಾಧಿಕಾರಿಗಳು ಪತ್ತೆಹಚ್ಚಿ ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿ ಸತ್ಯನಾರಾಯಣ ವಿವಿಧ ಕಂಪನಿಗಳ ಹೆಸರಿನಲ್ಲಿ 18 ಬ್ಯಾಂಕ್ ಖಾತೆಗಳನ್ನು ತೆರೆದಿದ್ದನು. ಆ ಖಾತೆಗಳಿಗೆ ವಾಲೀಕಿ ನಿಗಮದಿಂದ ಹಣ ವರ್ಗಾವಣೆಯಾಗಿತ್ತು. ಅಕೌಂಟ್ ನಂಬರ್‌ಗಳನ್ನು ಪರಿಶೀಲಿಸಿದಾಗ ಅವು ನಕಲಿ ಖಾತೆ ಎಂಬುದು ಖಚಿತವಾದ ಬೆನ್ನಲ್ಲೇ ಆರೋಪಿಯ ಬಗ್ಗೆ ಹಲವು ಮಾಹಿತಿಗಳನ್ನು ಸಂಗ್ರಹಿಸಿ ಆತನನ್ನು ಬಲೆಗೆ ಬೀಳಿಸಿಕೊಂಡಿದೆ.
ಆರೋಪಿ ಸತ್ಯನಾರಾಯಣ ವರ್ಮನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿ 8 ಕೋಟಿಗೂ ಹೆಚ್ಚು ಹಣ ವಶಪಡಿಸಿಕೊಳ್ಳಲಾಗಿದೆ. ವಾಲೀಕಿ ಅಭಿವೃದ್ದಿ ನಿಗಮದ ಬ್ಯಾಂಕ್ ಖಾತೆಯಿಂದ 18 ಖಾತೆಗಳಿಗೆ ಎಂಜಿರಸ್ತೆಯಲ್ಲಿರುವ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಿಂದ 94.73 ಕೋಟಿ ಹಣ ವರ್ಗಾವಣೆಯಾಗಿತ್ತು.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ ಸೂಕ್ತ ತನಿಖೆಗಾಗಿ ಎಸ್‌ಐಟಿ ರಚಿಸಿತ್ತು. ತನಿಖೆ ಕೈಗೊಂಡ ಎಸ್‌ಐಟಿ ಹಗರಣ ಸಂಬಂಧ ನಿಗಮದ ಮಾಜಿ ವ್ಯವಸ್ಥಾಪಕ ನಿರ್ದೇಶಕ ಪದನಾಭ, ಲೆಕ್ಕಾಧಿಕಾರಿ ಪರಶುರಾಮ್, ಮಾಜಿ ಸಚಿವ ನಾಗೇಂದ್ರ ಅವರ ಆಪ್ತ ಎನ್ನಲಾದ ನಾಗರಾಜ್ ನೆಕ್ಕುಂಟಿ, ನಾಗೇಶ್ವರ್ ರಾವ್ ಎಂಬುವರನ್ನು ಈಗಾಗಲೇ ಎಸ್‌ಐಟಿ ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಿ ಹಲವು ಮಾಹಿತಿಗಳನ್ನು ಕಲೆ ಹಾಕಿ ತನಿಖೆ ಮುಂದುವರೆಸಿದೆ. ಒಟ್ಟಾರೆ ಈ ಪ್ರಕರಣದಲ್ಲಿ ಈವರೆಗೂ ಏಳು ಮಂದಿಯನ್ನು ಬಂಧಿಸಲಾಗಿದೆ.