Sunday, September 8, 2024
Homeರಾಜ್ಯವಾಲ್ಮೀಕಿ ನಿಗಮ ಹಗರಣ : ಬಿ.ನಾಗೇಂದ್ರ ಪತ್ನಿಯನ್ನು ವಶಕ್ಕೆ ಪಡೆದ ಇಡಿ

ವಾಲ್ಮೀಕಿ ನಿಗಮ ಹಗರಣ : ಬಿ.ನಾಗೇಂದ್ರ ಪತ್ನಿಯನ್ನು ವಶಕ್ಕೆ ಪಡೆದ ಇಡಿ

ಬೆಂಗಳೂರು,ಜು.17-ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಮಾಜಿ ಸಚಿವ ಬಿ.ನಾಗೇಂದ್ರ ಪತ್ನಿಯನ್ನು ಜಾರಿನಿರ್ದೇಶನಾಲಯ(ಇ.ಡಿ)ದ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಬಿಇಎಲ್‌ ರಸ್ತೆಯಲ್ಲಿರುವ ರಾಮ್ಕೆ ಅಪಾರ್ಟ್‌ಮೆಂಟ್‌ನಲ್ಲಿದ್ದ ಬಿ.ನಾಗೇಂದ್ರ ಪತ್ನಿ ಮಂಜುಳಾ ಅವರನ್ನು ಇ.ಡಿ ಅಧಿಕಾರಿಗಳ ಒಂದು ತಂಡ ವಶಕ್ಕೆ ಪಡೆದಿದೆ. ಶಾಂತಿನಗರದಲ್ಲಿರುವ ಇ.ಡಿ ಕಚೇರಿಯಲ್ಲಿ ಅವರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ. ಮೂಲಗಳ ಪ್ರಕಾರ ಮಂಜುಳಾ ಅವರ ಖಾತೆಯೂ ನಾಗೇಂದ್ರ ಕೋಟ್ಯಂತರ ಹಣವನ್ನು ವರ್ಗಾವಣೆ ಮಾಡಿದ್ದರ ಆರೋಪದ ಹಿನ್ನಲೆಯಲ್ಲಿ ವಿಚಾರಣೆಗೆ ಒಳಪಡಿಸಲಾಗಿದೆ.

ಇ.ಡಿ ಅಧಿಕಾರಿಗಳು ನಾಗೇಂದ್ರ ಅವರ ಬ್ಯಾಂಕ್‌ ವಹಿವಾಟನ್ನು ತನಿಖೆಗೊಳಪಡಿಸಿದಾಗ ಪತ್ನಿ ಖಾತೆಗೆ ಕೋಟ್ಯಂತರ ಹಣವನ್ನು ವರ್ಗಾವಣೆ ಮಾಡಿರುವುದು ಬೆಳಕಿಗೆ ಬಂದಿತ್ತು ಎನ್ನಲಾಗಿದೆ. ಮಂಜುಳ ಹೆಸರಿನಲ್ಲಿ ಬೇನಾಮಿ ಖಾತೆಗಳನ್ನು ತೆರೆದಿದ್ದ ನಾಗೇಂದ್ರ ಹಂತ ಹಂತವಾಗಿ ಸುಮಾರು 20 ಕೋಟಿಗೂ ಹೆಚ್ಚು ಹಣವನ್ನು ವರ್ಗಾವಣೆ ಮಾಡಿದ್ದರೆಂಬ ಶಂಕೆ ಹಿನ್ನಲೆಯಲ್ಲಿ ವಶಕ್ಕೆ ಪಡೆಯಲಾಗಿದೆ.

ಹೈದರಾಬಾದ್‌ನ ಬಂಜಾರ ಹಿಲ್ಸ್ ನಲ್ಲಿರುವ ಆರ್‌ಎಲ್‌ವಿ ಬ್ಯಾಂಕ್‌ನಲ್ಲಿ ಬೇನಾಮಿ ಖಾತೆ ತೆರೆದು ಬೆಂಗಳೂರಿನ ಎಂ.ಜಿ.ರಸ್ತೆಯಲ್ಲಿರುವ ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿ ಉಪಖಾತೆ ತೆರೆದು ಅಲ್ಲಿಂದ ಹಣವನ್ನು ವರ್ಗಾವಣೆ ಮಾಡಲಾಗಿತ್ತು. ಇದೀಗ ಇ.ಡಿ ತನಿಖಾ ತಂಡ ಹಣದ ಮೂಲಕ್ಕೆ ಕೈ ಹಾಕಿದ್ದು, ಮಂಜುಳಾ ಅವರಿಂದ ಮಾಹಿತಿ ಪಡೆಯುತ್ತಿದೆ.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗೇಂದ್ರ ಅವರ ನಿವಾಸ, ಕಚೇರಿ ಸೇರಿದಂತೆ ಮತ್ತಿತರ ಕಡೆ ಇ.ಡಿ ಅಧಿಕಾರಿಗಳು ದಾಳಿ ನಡೆಸಿದ್ದರು. ಬೆಂಗಳೂರು, ಬಳ್ಳಾರಿ ಸೇರಿದಂತೆ ನಾಗೇಂದ್ರ ಒಡೆತನಕ್ಕೆ ಸೇರಿದ ಮನೆಗಳ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದರು. ಸುಮಾರು ಎರಡು ದಿನಗಳ ನಂತರ ಸುದೀರ್ಘ ವಿಚಾರಣೆ ಬಳಿಕ ನಾಗೇಂದ್ರ ಅವರನ್ನು ಇಡಿ ಬಂಧಿಸಿತ್ತು.

ಹೆಚ್ಚಿನ ವಿಚಾರಣೆಗಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಇ.ಡಿ ತನ್ನ ವಶಕ್ಕೆ ಪಡೆದುಕೊಂಡಿದೆ. ಮಹರ್ಷಿ ವಾಲೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಬಸನಗೌಡ ದದ್ದಲ್‌ ಮೇಲೂ ದಾಳಿ ನಡೆಸಲಾಗಿತ್ತು. ಇದೀಗ ಇ.ಡಿ ವಿಚಾರಣೆಗೆ ಹಾಜರಾಗುವಂತೆ ಅವರಿಗೆ ನೋಟಿಸ್‌‍ ಜಾರಿ ಮಾಡಿದೆ.

RELATED ARTICLES

Latest News