ಬೆಂಗಳೂರು,ಜೂ.9- ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅವ್ಯವಹಾರ ಕುರಿತು ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳು ರಾಜ್ಯಸರ್ಕಾರಕ್ಕೆ ಅಧಿಕೃತವಾಗಿ ಇನ್ನೂ ಪತ್ರ ಬರೆದಿಲ್ಲ. ಆದರೆ ಸಹಪಾಠಿ ಅಧಿಕಾರಿಗಳ ಬಳಿ ಮಾಹಿತಿ ನೀಡುವಂತೆ ಕೇಳಿದ್ದಾರೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಹೇಳಿದಾಕ್ಷಣ ಸಚಿವರು, ಮುಖ್ಯಮಂತ್ರಿ ರಾಜೀನಾಮೆ ನೀಡಲು ಸಾಧ್ಯವಿಲ್ಲ. ಈಗಾಗಲೇ ತನಿಖೆ ನಡೆಯುತ್ತಿದೆ. ಎಸ್‍ಐಟಿಗಾಗಲೀ, ಸಿಬಿಐಗಾಗಲೀ ಸಮಯಾವಕಾಶ ನೀಡಬೇಕಾಗುತ್ತದೆ. ಕಾಲಮಿತಿ ನಿಗದಿ ಮಾಡುವುದು ಸೂಕ್ತ ಅಲ್ಲ ಎಂದರು. ಸಚಿವ ಶರಣಪ್ರಕಾಶ್ ಪಾಟೀಲರ ಕಚೇರಿಯಲ್ಲಿ ಸಭೆ ನಡೆದಿದೆ ಎನ್ನುವ ಬಗ್ಗೆ ಎಸ್‍ಐಟಿ ಅಧಿಕಾರಿಗಳು ಸಿಸಿ ಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಿದ್ದಾರೆ ಎಂದು ಹೇಳಿದರು.
ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಬಿಐ ಅ„ಕಾರಿಗಳು ಈಗಾಗಲೇ ತನಿಖೆ ಆರಂಭಿಸಿದ್ದಾರೆ. ಸರ್ಕಾರದ ಇಲಾಖೆಗಳ ತನಿಖೆಗೆ ಇನ್ನೂ ಅ„ಕೃತವಾಗಿ ಪತ್ರ ಬರೆದಿಲ್ಲ. ಬ್ಯಾಚ್‍ಮೇಟ್ ಅ„ಕಾರಿಗಳ ಜೊತೆ ಚರ್ಚೆ ಮಾಡಿದ್ದಾರೆ ಎಂಬ ಮಾಹಿತಿ ಇದೆ. ಒಂದು ವೇಳೆ ಸಿಬಿಐ ಅ„ಕೃತವಾಗಿ ಪತ್ರ ಬರೆದರೆ ಸರ್ಕಾರ ಪರಿಶೀಲನೆ ಮಾಡಲಿದೆ ಎಂದರು. ಲೋಕಸಭಾ ಚುನಾವಣೆಯಲ್ಲಿ ನನ್ನನ್ನೂ ಸೇರಿದಂತೆ 17 ಸಚಿವರ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತಗಳಿಕೆಯಲ್ಲಿ ಹಿನ್ನಡೆಯಾಗಿದೆ. ಈ ನಿಟ್ಟಿನಲ್ಲಿ ಪರಿಶೀಲನೆ ಮತ್ತು ಆತ್ಮಾವಲೋಕನ ನಡೆಯಲಿದೆ. ಹೈಕಮಾಂಡ್ ನೀಡುವ ಯಾವುದೇ ಸಲಹೆಗಳನ್ನು ಒಪ್ಪಲು ನಾವು ತಯಾರಿದ್ದೇವೆ. ಎಐಸಿಸಿ ನಿರ್ದೇಶನವನ್ನು ಪಾಲಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್‍ನಲ್ಲಿ ಯಾವುದೇ ಒಳಜಗಳು ಇಲ್ಲ. ಅಭಿಪ್ರಾಯ ಬೇಧಗಳು ಸಹಜ. ಸಂದರ್ಭಾನುಸಾರ ನಾವು ನಮ್ಮ ಅಭಿಪ್ರಾಯಗಳನ್ನು ಹೇಳುತ್ತೇವೆ. ಬೇರೆಯವರು ಹೇಳಿದ್ದನ್ನು ಒಪ್ಪಲೇಬೇಕು ಎಂದೇನಿಲ್ಲ. ಅಂದ ಮಾತ್ರಕ್ಕೆ ಅದು ಒಳಜಗಳ ಅಲ್ಲ ಎಂದು ಹೇಳಿದರು. ಸಚಿವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ಸಚಿವ ಸಂಪುಟ ಸಭೆ ಇದೆ. ಅಲ್ಲಿ ನಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತೇವೆ. ಪಕ್ಷದಲ್ಲಿ ಚರ್ಚೆ ನಡೆಸಲು ಉನ್ನತಾಧಿಕಾರ ಸಮಿತಿ, ಸಮನ್ವಯ ಸಮಿತಿ ಅಥವಾ ಪದಾಧಿಕಾರಿಗಳ ನಿಯೋಗ ಸೇರಿ ಯಾವುದಾದರೂ ಒಂದರ ಅಗತ್ಯವಿದೆ. ಈ ನಿಟ್ಟಿನಲ್ಲಿ ಪಕ್ಷದ ಅಧ್ಯಕ್ಷರು ಕ್ರಮ ಕೈಗೊಳ್ಳುತ್ತಾರೆ ಎಂಬ ವಿಶ್ವಾಸವಿದೆ ಎಂದರು.
ಮೂರನೇ ಬಾರಿಗೆ ದೇಶದ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಅಭಿನಂದನೆ ತಿಳಿಸಲು ಬಯಸುತ್ತೇನೆ. ಜನರ ದೃಷ್ಟಿಯಿಂದ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಮುಂದಿನ ದಿನಗಳಲ್ಲಿ ಅವರು ಗಂಭೀರ ಚಿಂತನೆ ನಡೆಸಬೇಕಿದೆ. ಕಳೆದ ಹತ್ತು ವರ್ಷಗಳಲ್ಲಿ ಜನಪರವಾಗಿ ಯಾವುದೇ ಕಾನೂನು ಕಾಯ್ದೆಗಳು ರೂಪುಗೊಂಡಿಲ್ಲ. ಇನ್ನು ಮುಂದಾದರೂ ಈ ನಿಟ್ಟಿನಲ್ಲಿ ಆಲೋಚನೆಗಳನ್ನು ಮಾಡಲಿ ಎಂದು ಕರೆ ನೀಡಿದರು.
ರಾಜ್ಯಕ್ಕೆ ಹೆಚ್ಚಿನ ಸಚಿವ ಸ್ಥಾನ ಸಿಗಲಿ. ಈ ಹಿಂದಿನ ಸಚಿವರಿಂದ ರಾಜ್ಯಕ್ಕೆ ಯಾವುದೇ ಉಪಯೋಗವಾಗಿಲ್ಲ. ಮುಂದೆ ಅವಕಾಶ ಪಡೆಯುವವರಾದರೂ ರಾಜ್ಯದ ಪರವಾಗಿ ಕೇಂದ್ರದಲ್ಲಿ ಧ್ವನಿ ಎತ್ತಲಿ ಎಂದು ಪರಮೇಶ್ವರ್ ಆಶಿಸಿದರು.