ಬೆಂಗಳೂರು,ಅ.16- ಕರ್ನಾಟಕ ಮಹರ್ಷಿ ವಾಲೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಭ್ರಷ್ಟಾಚಾರ ಸಂಬಂಧಿಸಿದಂತೆ ಮಾಜಿ ಸಚಿವ ಬಿ.ನಾಗೇಂದ್ರ ಆಪ್ತ ನೆಕ್ಕುಂಟಿ ನಾಗರಾಜ್ ಮನೆ ಮೇಲೆ ಜಾರಿನಿರ್ದೇಶನಾಲಯ(ಇ.ಡಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಬಳ್ಳಾರಿಯಲ್ಲಿರುವ ಅವರ ನಿವಾಸ ಹಾಗೂ ಕಚೇರಿಗಳ ಮೇಲೆ ಏಕಾಏಕಿ ದಿಢೀರನೆ 10ಕ್ಕೂ ಹೆಚ್ಚು ಇ.ಡಿ ಅಧಿಕಾರಿಗಳು ದಾಳಿ ನಡೆಸಿ ಕೆಲವು ಮಹತ್ವದ ದಾಖಲೆಗಳು, ಬ್ಯಾಂಕ್ ಖಾತೆಗಳು, ಚರಸ್ಥಿರ ಆಸ್ತಿ ಸೇರಿದಂತೆ ಮತ್ತಿತರ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.
ಮಾಜಿ ಸಚಿವ ಹಾಗೂ ಹಾಲಿ ಬಳ್ಳಾರಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕನಾಗಿರುವ ಬಿ.ನಾಗೇಂದ್ರ ಅವರ ಬಲಗೈ ಭಂಟನೆಂದೇ ಗುರುತಿಸಿಕೊಂಡಿದ್ದ ನೆಕ್ಕುಂಟಿ ನಾಗರಾಜ ಈ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಲ್ಲಿ ಒಬ್ಬರಾಗಿದ್ದಾರೆ ಎನ್ನಲಾಗಿದೆ.
ಹಣದ ವಹಿವಾಟು, ಬಳ್ಳಾರಿ ಲೋಕಸಭೆ ಚುನಾವಣಾ ವೇಳೆ ಮತದಾರರಿಗೆ ಅಕ್ರಮವಾಗಿ ಹಣ ಹಂಚಿಕೆ ಸೇರಿದಂತೆ ನಾಗೇಂದ್ರ ಅವರ ನಿರ್ದೇಶನದಂತೆ ಇವರು ಕೆಲಸ ಮಾಡಿದ್ದರು ಎಂದು ತಿಳಿದುಬಂದಿದೆ. ಕಳೆದ ಸೆ.16ರಂದು ಇ.ಡಿ ಅಧಿಕಾರಿಗಳು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು, ಬಳ್ಳಾರಿ ಸೇರಿದಂತೆ ಒಟ್ಟು 16 ಕಡೆ ದಾಳಿ ನಡೆಸಿದ್ದರು.
ಕರ್ನಾಟಕದ 12 ಮತ್ತು ಆಂಧ್ರಪ್ರದೇಶದ 4 ಸ್ಥಳಗಳು ಸೇರಿದಂತೆ ಒಟ್ಟು 16 ಕಡೆ ದಾಳಿಯಾಗಿತ್ತು. ತನಿಖೆಯ ಸಂದರ್ಭದಲ್ಲಿ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಮತ್ತು ಕೆಜಿಟಿಟಿಐಗೆ ಸೇರಿದ ಹಣವನ್ನು ಅಕ್ರಮವಾಗಿ ಬೇರೆಡೆಗೆ ವರ್ಗ ಮಾಡಿರುವುದು ಪತ್ತೆಯಾಗಿತ್ತು. ಆ ವೇಳೆ ಬಿ.ನಾಗೇಂದ್ರ ಅವರು ಪರಿಶಿಷ್ಟ ಪಂಗಡ ಕಲ್ಯಾಣ ಖಾತೆಯ ಸಚಿವರಾಗಿದ್ದರು.
ಬ್ಯಾಂಕ್ ಆಫ್ ಬರೋಡಾದ ಸಿದ್ದಯ್ಯ ರಸ್ತೆ ಶಾಖೆಯಲ್ಲಿನ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಖಾತೆಯಿಂದ ಎಸ್‌ಕೆಆರ್ ಇನ್‌ಫ್ರಾಸ್ಟ್ರಕ್ಚರ್ ಮತ್ತು ಗೋಲ್ಡನ್ ಎಸ್ಟಾಬ್ಲಿಷ್‌ಮೆಂಟ್ ಸಂಸ್ಥೆಗಳಿಗೆ 2.17 ಕೋಟಿ ಹಣ ವರ್ಗಾವಣೆಯಾಗಿತ್ತು. ಈ ಸಂಸ್ಥೆಗಳು ಬಿ.ನಾಗೇಂದ್ರ ಅವರ ಆಪ್ತರಾದ ನೆಕ್ಕುಂಟಿ ನಾಗರಾಜ್ ಅವರಿಗೆ ಸೇರಿದ್ದಾಗಿವೆ. ಈ ಮೊತ್ತದಲ್ಲಿ ಸುಮಾರು 1.20 ಕೋಟಿಯಷ್ಟು ನಾಗೇಂದ್ರ ಅವರ ಸಹೋದರಿ, ಸೋದರ ಮಾವ ಮತ್ತು ಆಪ್ತ ಸಹಾಯಕ ಸೇರಿದಂತೆ ಅವರ ಸಹಚರರು ಹಾಗೂ ಸಂಬಂಧಿಕರ ಖಾತೆಗಳಿಗೆ ವರ್ಗವಾಗಿದೆ.
ಕೆನರಾ ಬ್ಯಾಂಕ್‌ನ ವಿಲ್ಸನ್‌ಗಾರ್ಡನ್ ಶಾಖೆಯ ಕೆಜಿಟಿಟಿಐಯ ಖಾತೆಯಿಂದ 64 ಲಕ್ಷವನ್ನು ಸದ್ಗುರು ಶಿಕ್ಷಣ ಟ್ರಸ್ಟ್ ಮತ್ತು ಸದ್ಗುರು ಸೊಲ್ಯೂಷನ್‌್ಸಗೆ, ನಂತರ ಸ್ಕಿಲ್ ಪಾಯಿಂಟ್ ತರಬೇತಿ ಮತ್ತು ಸ್ಟೈಲ್ ಮಷೀನ್ ಸಂಸ್ಥೆ, ಮೆಸರ್ಸ್ ಧನಲಕ್ಷಿ ಎಂಟರ್‌ಪ್ರೈಸಸ್ ಖಾತೆಗೆ ವರ್ಗಾಯಿಸಿರುವುದು ತನಿಖೆ ವೇಳೆ ಗೊತ್ತಾಗಿದೆ.
ಬಳಿಕ ಈ ಮೊತ್ತವು ಎನ್.ರವಿಕುಮಾರ್ (ನೆಕ್ಕುಂಟಿ ನಾಗರಾಜ್ ಅವರ ಸಹೋದರ) ಮತ್ತು ಎನ್.ಯಶವಂತ್ ಚೌಧರಿ (ನೆಕ್ಕುಂಟಿ ನಾಗರಾಜ್ ಅವರ ಸೋದರಳಿಯ) ಅವರಿಗೆ ತಲುಪಿರುವುದು ಪತ್ತೆಯಾಗಿತ್ತು.
2024ರ ಫೆಬ್ರವರಿ 21ರಿಂದ ಮೇ6ರ ನಡುವೆ ನಿಗಮದ ಖಾತೆಯಿಂದ ಅಕ್ರಮವಾಗಿ ಹಣ ವರ್ಗಾವಣೆ ಮೂಲಕ 84.63 ರೂ. ಕೋಟಿ ವಂಚನೆ ಮತ್ತು ದುರುಪಯೋಗದ ಬಗ್ಗೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಡಿಜಿಎಂ ದೂರು ನೀಡಿದ್ದರು. ಅದರ ಆಧಾರದ ಮೇಲೆ ಅದೇ ವರ್ಷ ಜೂನ್ 3ರಂದು ಸಿಬಿಐ ಪ್ರಕರಣ ದಾಖಲಿಸಿತ್ತು. ಈ ಪ್ರಕರಣದ ತನಿಖೆಯ ವೇಳೆ, ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಹಾಗೂ ಕೆಜಿಟಿಟಿಐನ ಖಾತೆಗಳಿಂದಲೂ ನಾಗೇಂದ್ರ ಆಪ್ತರಿಗೆ ಹಣ ವರ್ಗಾವಣೆಯಾಗಿರುವುದು ಪತ್ತೆಯಾಗಿತ್ತು.
ಸಿಬಿಐ ಸಲ್ಲಿಸಿದ ವಸ್ತುಸ್ಥಿತಿ ವರದಿಯ ಆಧಾರದ ಮೇಲೆ, ರಾಜ್ಯದ ಹೈಕೋರ್ಟ್, ವಾಲೀಕಿ ಅಭಿವೃದ್ಧಿ ನಿಗಮದ ಮೇಲಿನ ಆರೋಪಗಳ ತನಿಖೆ ನಡೆಸಲು ಸಿಬಿಐಗೆ ಅನುಮತಿ ನೀಡಿತ್ತು.
ಬಳ್ಳಾರಿ ಮಹಾನಗರಪಾಲಿಕೆಯ 11ನೇ ವಾರ್ಡ್‌ನ ಬಿಜೆಪಿ ಸದಸ್ಯ ಗೋವಿಂದರಾಜು ಹಾಗೂ ಅವರ ತಂದೆ, ಮೊಟ್ಟೆ ವ್ಯಾಪಾರಿ ಕುಮಾರಸ್ವಾಮಿ ನಿವಾಸದಲ್ಲಿ ಕೇಂದ್ರ ತನಿಖಾ ದಳ (ಸಿಬಿಐ)ದ ಅಧಿಕಾರಿಗಳು ಶೋಧ ನಡೆಸಿದ್ದರು.
ಗಾಂಧಿನಗರದ 2ನೇ ತಿರುವಿನಲ್ಲಿರುವ ಗೋವಿಂದರಾಜು ನಿವಾಸದಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸಿ, ದಾಖಲೆ ಪತ್ರಗಳನ್ನು ಸಂಗ್ರಹಿಸಿದ್ದರು. ಗೋವಿಂದ ರಾಜು ಅವರು ಮನೆ ಖರೀದಿಗಾಗಿ ಹಗರಣದ ಆರೋಪಿ ಶಾಸಕ ಬಿ.ನಾಗೇಂದ್ರ, ನೆಕ್ಕುಂಟಿ ನಾಗರಾಜ್ ಮೂಲಕ ವ್ಯವಹಾರ ನಡೆಸಿದ್ದರು. ಅದಕ್ಕೆ ವಾಲೀಕಿ ನಿಗಮದ ಹಣ ಬಳಕೆಯಾಗಿರುವ ಆರೋಪ ಇದೆ.