Tuesday, September 17, 2024
Homeರಾಜ್ಯಮೇಲ್ಮನೆಯಲ್ಲಿ ಪ್ರತಿಧ್ವನಿಸಿದ ವಾಲ್ಮೀಕಿ ನಿಗಮ ಹಗರಣ, ಕಲಾಪ ಮುಂದೂಡಿಕೆ

ಮೇಲ್ಮನೆಯಲ್ಲಿ ಪ್ರತಿಧ್ವನಿಸಿದ ವಾಲ್ಮೀಕಿ ನಿಗಮ ಹಗರಣ, ಕಲಾಪ ಮುಂದೂಡಿಕೆ

ಬೆಂಗಳೂರು,ಜು.16– ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಭ್ರಷ್ಟಾಚಾರ ಪ್ರಕರಣದ ಕುರಿತು ಚರ್ಚೆಗೆ ಅವಕಾಶ ನೀಡಬೇಕೆಂದು ಪ್ರತಿಪಕ್ಷ ಬಿಜೆಪಿ-ಜೆಡಿಎಸ್‌‍ ಸದಸ್ಯರು ಸದನದ ಬಾವಿಗಿಳಿದು ಧರಣಿ ನಡೆಸಿದ ಹಿನ್ನೆಲೆಯಲ್ಲಿ ಪರಿಷತ್‌ ಕಲಾಪವನ್ನು ಕೆಲಕಾಲ ಮುಂದೂಡಲಾಯಿತು.

ಶೂನ್ಯ ಅವಧಿ ಮುಗಿದ ನಂತರ ಸಭಾಪತಿ ಬಸವರಾಜ ಹೊರಟ್ಟಿ ಅವರು, ಬೇರೊಂದು ಕಾರ್ಯಕಲಾಪವನ್ನು ತೆಗೆದುಕೊಳ್ಳಲು ಮುಂದಾದರು. ಇದಕ್ಕೆ ತೀರಾ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿಯ ಸದಸ್ಯರಾದ ಸಿ.ಟಿ.ರವಿ, ಎನ್‌.ರವಿಕುಮಾರ್‌ ಸೇರಿದಂತೆ ಮತ್ತಿತರರು ಪ್ರಶ್ನೋತ್ತರ ಮುಗಿದ ಮೇಲೆ ಚರ್ಚೆಗೆ ಅವಕಾಶ ಕೊಡುತ್ತೇನೆ ಎಂದು ಹೇಳಿದ್ದೀರಿ. ಈಗ ಏಕೆ ನಿಲುವು ಬದಲಾಯಿಸಿದ್ದೀರಿ ಎಂದು ಸಭಾಪತಿ ಬಸವರಾಜ ಹೊರಟ್ಟಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈಗಾಗಲೇ ಇದರ ಬಗ್ಗೆ ಚರ್ಚೆಯಾಗಿದೆ. ಪ್ರಕರಣದ ಕುರಿತು ತನಿಖೆಯೂ ಆಗುತ್ತಿದೆ. ಪುನಃ ಅದೇ ವಿಷಯವನ್ನು ಚರ್ಚೆ ಮಾಡುವುದರಲ್ಲಿ ಅರ್ಥವಿಲ್ಲ. ನಾನು ಕಾರ್ಯ ಕಲಾಪದ ಪ್ರಕಾರ ಸದನವನ್ನು ನಡೆಸಬೇಕೆಂದು ಹೊರಟ್ಟಿ ಅವರು ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡರು.

ಪ್ರಶ್ನೋತ್ತರ ಅವಧಿ ಮುಗಿದ ಬಳಿಕ ಚರ್ಚೆಗೆ ಅವಕಾಶ ಕೊಡುತ್ತೇನೆ ಎಂದ ಮೇಲೆ ಏಕಾಏಕಿ ನೀವು ನಿಲುವು ಬದಲಾಯಿಸಿದ್ದು ಸರಿಯಲ್ಲ. ಇದರಲ್ಲಿ ಬ್ರಹಾಂಡ ಭ್ರಷ್ಟಾಚಾರ ನಡೆದಿದೆ. ನೂರಾರು ಕೋಟಿ ಹಣವನ್ನು ಲಪಾಟಯಿಸಿ ಕೆಲವರು ಜೈಲು ಪಾಲಾಗಿದ್ದಾರೆ. ಚರ್ಚೆಗೆ ಅವಕಾಶ ಕೊಡುವುದಿಲ್ಲ ಎಂದರೆ ಹೇಗೆ ಎಂದು ಸ್ಪೀಕರ್‌ ವಿರುದ್ಧ ಅಸಮಾಧಾನ ಹೊರಹಾಕಿದರು.

ಈ ವೇಳೆ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಭಾರೀ ಮಾತಿನ ಚಕಮಕಿ, ಗದ್ದಲ, ಕೋಲಾಹಲ ಉಂಟಾಯಿತು. ಸಭಾಪತಿಗಳು ಒಂದು ಬಾರಿ ರೂಲಿಂಗ್‌ ನೀಡಿದ ಮೇಲೆ ಅದನ್ನು ಪ್ರಶ್ನಿಸುವ ಅಧಿಕಾರ ಯಾರಿಗೂ ಇಲ್ಲ. ನಿಮ ಮೇಲೆ ಅಧಿಕಾರ ಚಲಾಯಿಸಲು ಅವಕಾಶ ಕೊಡಬೇಡಿ ಎಂದು ಬಿಜೆಪಿ ಸದಸ್ಯರ ವಿರುದ್ಧ ಕಾಂಗ್ರೆಸ್‌‍ ಸದಸ್ಯರು ಆಕ್ರೋಶ ಹೊರಹಾಕಿದರು.

ಸದಸ್ಯರು ಸದನ ನಡೆಯಲು ಅವಕಾಶ ಮಾಡಿಕೊಡಬೇಕೆಂದು ಹೊರಟ್ಟಿಯವರು ಮಾಡಿಕೊಂಡ ಮನವಿಗೆ ಯಾರೂ ಕೂಡ ಜಗ್ಗಲಿಲ್ಲ. ಬಿಜೆಪಿ ಸದಸ್ಯರು ಚರ್ಚೆಗೆ ಒತ್ತಾಯಿಸಿದರೆ ಕಾಂಗ್ರೆಸ್‌‍ ಸದಸ್ಯರು ಅವಕಾಶ ನೀಡಬೇಡಿ ಎಂದು ತಿರುಗೇಟು ನೀಡಿದರು.
ಸದನ ಸಹಜ ಸ್ಥಿತಿಗೆ ಬರದ ಕಾರಣ ಸಭಾಪತಿಯವರು ಕೆಲ ಕಾಲ ಸದನವನ್ನು ಮುಂದೂಡಿದರು.

RELATED ARTICLES

Latest News