ಬೆಂಗಳೂರು,ಜು.13- ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ ಅವ್ಯವಹಾರ ಪ್ರಕರಣದಲ್ಲಿ ಈಗಾಗಲೇ ಇಡಿ ಅಧಿಕಾರಿಗಳ ಖೆಡ್ಡಾಕ್ಕೆ ಮಾಜಿ ಸಚಿವ ಬಿ.ನಾಗೇಂದ್ರ ಬಿದ್ದಿರುವ ಬೆನ್ನಲ್ಲೇ ಇದೀಗ ಶಾಸಕ ಬಸನಗೌಡ ದದ್ದಲ್ ಮತ್ತು ಪುತ್ರನಿಗೂ ಸಂಕಷ್ಟ ಎದುರಾಗಿದೆ.
ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮಹರ್ಷಿ ವಾಲೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿರುವ ಬಸನಗೌಡ ದದ್ದಲ್ ಅವರನ್ನು ವಶಕ್ಕೆ ಪಡೆಯಲು ಬಲೆ ಬೀಸಿದೆ.ಈ ಬೆನ್ನಲ್ಲೇ ದದ್ದಲ್ ಅವರ ಪುತ್ರತ್ರಿಶೂಲ್‌ಗೂ ಕಾನೂನಿನ ಕುಣಿಕೆ ಬಿಗಿಯಾಗುತ್ತಿದ್ದು, ಎಸ್‌ಐಟಿ ಹಾಗೂ ಇಡಿ ಜೊತೆ ಜೊತೆಯಾಗಿ ವಶಕ್ಕೆ ಪಡೆಯಲು ಮುಂದಾಗಿದೆ.
ಶುಕ್ರವಾರ ಸಂಜೆ ಬೆಂಗಳೂರಿನಲ್ಲಿ ಸುಮಾರು 6 ಗಂಟೆಗೂ ಹೆಚ್ಚು ಕಾಲ ಎಸ್‌ಐಟಿ ವಿಚಾರಣೆ ಎದುರಿಸಿದ್ದ ಬಸನಗೌಡ ದದ್ದಲ್ ನಂತರ ಎಲ್ಲಿಗೆ ಹೋಗಿದ್ದಾರೆ ಎಂಬುದು ಯಾರಿಗೂ ಗೊತ್ತಿಲ್ಲ.ಈವರೆಗೂ ಅವರು ಎಲ್ಲಿದ್ದಾರೆ ಎಂಬುದು ಕುಟುಂಬದ ಸದಸ್ಯರಿಗೂ ಕೂಡ ಮಾಹಿತಿ ಇಲ್ಲ ಎಂದು ತಿಳಿದುಬಂದಿದೆ. ಸದ್ಯ ಅವರ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಇಡಿ ಯಾವುದೇ ಕ್ಷಣದಲ್ಲಿ ಬಂಧಿಸಬಹುದೆಂಬ ಭಯದಿಂದ ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ.
ಈ ಹಗರಣದಲ್ಲಿ ಬಸನಗೌಡ ದದ್ದಲ್ ಕೂಡ ಶಾಮೀಲಾಗಿರುವುದು ಕೆಲವು ದಾಖಲಾತಿಗಳಿಂದ ಬಹಿರಂಗಗೊಂಡಿದೆ. ಹೀಗಾಗಿಯೇ ಇಡಿ ಅವರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಲು ಮುಂದಾಗಿದೆ. ಬುಧವಾರ ಮುಂಜಾನೆಯೇ ಬೆಂಗಳೂರಿನ ಯಲಹಂಕ, ರಾಯಚೂರು ಸೇರಿದಂತೆ ಸಂಬಂಧಿಕರ ಮನೆ, ಕಚೇರಿ, ಮತ್ತಿತರ ಕಡೆ ಇಡಿ ಅಧಿಕಾರಿಗಳು ದಾಳಿ ನಡೆಸಿ ಕೆಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು.
ಬಸನಗೌಡ ದದ್ದಲ್ ಅವರ ಆಪ್ತ ಕಾರ್ಯದರ್ಶಿ ಪಂಪಣ್ಣ ಸೇರಿದಂತೆ ಕೆಲವು ಆಪ್ತರನ್ನು ವಿಚಾರಣೆಗೊಳಪಡಿಸಿ ಮಾಹಿತಿ ಕಲೆ ಹಾಕಿದ್ದರು. ಪ್ರಕರಣದಲ್ಲಿ ದದ್ದಲ್ ಹೆಸರು ಕೂಡ ಕೇಳಿಬಂದಿದ್ದು, ಇಡಿ ಅಧಿಕಾರಿಗಳು ಕೆಲವು ಡಿಜಿಟಲ್ ಸಾಕ್ಷ್ಯಾಧಾರಗಳನ್ನು ಕಲೆ ಹಾಕಿ ವಶಕ್ಕೆ ಪಡೆಯಲು ಮುಂದಾಗಿದ್ದಾರೆ. ಯಾವುದೇ ಕ್ಷಣದಲ್ಲೂ ಅವರು ಇಡಿ ಗಾಳಕ್ಕೆ ಬೀಳಬಹುದೆಂದು ತಿಳಿದುಬಂದಿದೆ.
ಪುತ್ರನಿಗೂ ಸಂಕಷ್ಟ:
ಇಷ್ಟೆಲ್ಲ ಬೆಳವಣಿಗೆಗಳ ನಡುವೆಯೇ ಬಸನಗೌಡ ದದ್ದಲ್ ಪುತ್ರ ತ್ರಿಶೂಲ್ ನಾಯಕ್ ಖರೀದಿಸಿರುವ ಜಮೀನು ವಿವಾದದ ಕೇಂದ್ರಬಿಂದುವಾಗಿದೆ. ಸಿರವಾರ ಹೋಬಳಿ ಗಣದಿನ್ನಿ ಗ್ರಾಮದಲ್ಲಿ ಸರ್ವೆ ನಂ.33/1 ನಂಬರಿನ ಬಸನ ಗೌಡ ಸಿದ್ದನಗೌಡ ಎಂಬುವರಿಂದ ಜಮೀನು ಖರೀದಿಸಿರುವುದು ವಿವಾದಕ್ಕೆ ಕಾರಣವಾಗಿದೆ.
ಕಳೆದ ಮೇ 25ರಂದು ತ್ರಿಶೂಲ್ ನಾಯಕ್ ಹೆಸರಿನಲ್ಲಿ ಜಮೀನನ್ನು ನೋಂದಣಿ ಮಾಡಿಸಲಾಗಿದೆ. 4 ಎಕರೆ 30 ಗುಂಟೆ ಜಮೀನನ್ನು ದದ್ದಲ್ ಖರೀದಿಸಿದ್ದಾರೆ.ಗಮನಾರ್ಹ ವಿಷಯವೆಂದರೆ ಮಹರ್ಷಿ ವಾಲೀಕಿ ಹಗರಣ ಹೊರಬರಲು ಕಾರಣರಾಗಿದ್ದ ಶಿವಮೊಗ್ಗದ ಚಂದ್ರಶೇಖರನ್ ಆತಹತ್ಯೆಗೂ ಮುನ್ನವೇ ಈ ಜಮೀನನ್ನು ಖರೀದಿಸಲಾಗಿತ್ತು.
ಒಂದು ಎಕರೆಗೆ 36 ಲಕ್ಷ ರೂ.ನಂತೆ ಒಟ್ಟು 4 ಎಕರೆ 30 ಗುಂಟೆ ಜಮೀನನ್ನು ಖರೀದಿ ಮಾಡಲಾಗಿದೆ. ನಿಗಮದಲ್ಲಿ ನಡೆದಿರುವ ಭ್ರಷ್ಟಾಚಾರದ ಹಣದಿಂದಲೇ ಈ ಜಮೀನನ್ನು ಖರೀದಿಸಲಾಗಿದೆಯೇ ಎಂಬ ಅನುಮಾನ ಎಸ್‌ಐಟಿ ಮತ್ತು ಇಡಿಗೆ ಮೂಡಿದೆ.
ಹೀಗಾಗಿ ವಿಚಾರಣೆಗೆ ಹಾಜರಾಗುವಂತೆ ಎಸ್‌ಐಟಿ ನೋಟಿಸ್ ನೀಡಲು ಮುಂದಾಗಿದ್ದರೆ, ಇಡಿ ಕೂಡ ತ್ರಿಶೂಲ್ ನಾಯಕ್ ಅವರನ್ನು ವಿಚಾರಣೆಗೊಳಪಡಿಸಲು ಸಜ್ಜಾಗುತ್ತಿದೆ. ಸದ್ಯ ತ್ರಿಶೂಲ್ ನಾಯಕ್ ದೆಹಲಿಯಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದಾರೆ.