Monday, September 15, 2025
Homeರಾಜ್ಯವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ : ಬಳ್ಳಾರಿ ಕಾರ್ಪೋರೇಟರ್‌ ಮನೆ ಮೇಲೆ ಸಿಬಿಐ ದಾಳಿ

ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ : ಬಳ್ಳಾರಿ ಕಾರ್ಪೋರೇಟರ್‌ ಮನೆ ಮೇಲೆ ಸಿಬಿಐ ದಾಳಿ

Valmiki Development Corporation scam: CBI raids Bellary corporator's house

ಬೆಂಗಳೂರು,ಸೆ.15– ಮಾಜಿ ಸಚಿವ ಬಿ.ನಾಗೇಂದ್ರ ತಲೆದಂಡಕ್ಕೆ ಕಾರಣೀಭೂತವಾಗಿದ್ದ ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಬಳ್ಳಾರಿಯ ಮಹಾನಗರ ಪಾಲಿಕೆ ಸದಸ್ಯನ ನಿವಾಸದ ಮೇಲೆ ಸಿಬಿಐ ದಾಳಿ ನಡೆಸಿದೆ.

ಬಳ್ಳಾರಿಯ ಗಾಂಧಿನಗರದಲ್ಲಿರುವ ಮಹಾನಗರ ಪಾಲಿಕೆಯ ಬಿಜೆಪಿ ಸದಸ್ಯ ಗೋವಿಂದ್‌ ಅವರ ಮನೆ ಹಾಗೂ ಕಚೇರಿಗಳ ಮೇಲೆ ಸಿಬಿಐ ಏಕಾಏಕಿ ದಾಳಿ ನಡೆಸಿ ಖಾತೆಗಳು, ಬ್ಯಾಂಕ್‌ ದಾಖಲೆಗಳು ಸೇರಿದಂತೆ ಕೆಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಮೂಲತಃ ಮೊಟ್ಟೆ ವ್ಯಾಪಾರಿಯಾಗಿದ್ದ ಗೋವಿಂದ್‌ ಹಗರಣದ ಮತ್ತೋರ್ವ ಆರೋಪಿ ನೆಕ್ಕುಂಟೆ ನಾಗರಾಜ್‌ ಖಾತೆಯಿಂದ ಹಣ ವರ್ಗಾವಣೆ ಮಾಡಿಕೊಂಡಿದ್ದಾರೆಂಬ ಆರೋಪವಿದೆ. ಈ ಹಣವನ್ನು ವ್ಯಾಪಾರ ಸೇರಿದಂತೆ ಬೇರೆ ಬೇರೆ ಕಡೆ ಹೂಡಿಕೆ ಮಾಡಿರುವುದನ್ನು ಸಿಬಿಐ ಪತ್ತೆಹಚ್ಚಿದೆ.

ಹಗರಣದಲ್ಲಿ ಹೆಸರು ಕೇಳಿಬಂದಿರುವ ಕುಮಾರಸ್ವಾಮಿ ಜೊತೆ ಗೋವಿಂದ್‌ ಆತ್ಮೀಯತೆ ಇಟ್ಟುಕೊಂಡಿದ್ದರು. ನಿಗಮದಿಂದ ತಮ್ಮ ಖಾತೆಗೆ ಹಣ ವರ್ಗಾವಣೆ ಮಾಡಿಕೊಂಡು ಚುನಾವಣೆಯಲ್ಲಿ ಬಳಕೆ ಮಾಡಿದ್ದರ ಆರೋಪವಿದೆ.

ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ನೆಕ್ಕುಂಟೆ ನಾಗರಾಜ್‌ ಮತ್ತು ಗೋವಿಂದ್‌ ಅವರ ಖಾತೆಗಳನ್ನು ಪರಿಶೀಲಿಸಿದಾಗ ಹಣ ವರ್ಗಾವಣೆಯಾಗಿರುವುದು ದೃಢಪಟ್ಟಿತ್ತು. ಮೂಲಗಳ ಪ್ರಕಾರ ಇದೇ ಹಣವನ್ನು ನಾಗೇಂದ್ರ ತೆಲಂಗಾಣ ವಿಧಾನಸಭೆ ಮತ್ತು ಬಳ್ಳಾರಿ ಲೋಕಸಭಾ ಕ್ಷೇತ್ರದ ಚುನಾವಣೆಗೆ ದುರುಪಯೋಗಪಡಿಸಿಕೊಂಡಿದ್ದಾರೆಂಬ ಆರೋಪವಿದೆ. ಈಗಾಗಲೇ ಪ್ರಕರಣದ ಪ್ರಮುಖ ಆರೋಪಿ ಬಿ.ನಾಗೇಂದ್ರ ಅಧಿಕಾರ ದುರುಪಯೋಗಪಡಿಸಿಕೊಂಡು 88 ಕೋಟಿ ಹಣವನ್ನು ಕಾನೂನು ಬಾಹಿರವಾಗಿ ಉಲ್ಲಂಘನೆ ಮಾಡಿದ್ದಾರೆಂದು ಜಾರಿನಿರ್ದೇಶನಾಲಯ(ಇಡಿ) ನ್ಯಾಯಾಲಯಕ್ಕೆ ಸಲ್ಲಿಸಿದ್ದ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿತ್ತು.

ಹೀಗಾಗಿ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಪರಿಸ್ಥಿತಿ ಉದ್ಭವವಾಗಿತ್ತು. ಇನ್ನೂ ಈ ಹಗರಣದಲ್ಲಿ ಮಾಜಿ ಸಚಿವೆ ಬಿ. ನಾಗೇಂದ್ರ ಅವರು ಮಾಸ್ಟರ್‌ ಮೈಂಡ್‌ ಎಂದು ಇಡಿ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿದೆ.

ಹೈಕೋರ್ಟ್‌ 2025ರ ಜುಲೈನಲ್ಲಿ ಸಿಬಿಐ ತನಿಖೆಗೆ ಆದೇಶ ನೀಡಿದೆ. ಇ.ಡಿಯು 2024ರ ಜುಲೈನಲ್ಲಿ ನಾಗೇಂದ್ರ ಅವರ ಮನೆಯ ಮೇಲೆ ದಾಳಿ ನಡೆಸಿ, 2025ರ ಜೂನ್ನಲ್ಲಿ ಬಳ್ಳಾರಿ ಸಂಸದ ಇ. ತುಕಾರಾಂ ಹಾಗೂ ಶಾಸಕರ ಮನೆಗಳ ಮೇಲೆ ದಾಳಿ ನಡೆಸಿತ್ತು. ಬಿಜೆಪಿ ನಾಯಕರು ಈ ದಾಳಿಯನ್ನು ರಾಜಕೀಯ ಪ್ರತೀಕಾರ ಎಂದು ಕರೆದು, ಸರ್ಕಾರದ ವಿರುದ್ಧ ಟೀಕಿಸಿದ್ದು, ಕಾಂಗ್ರೆಸ್‌ ನಾಯಕರು ತನಿಖೆಯಲ್ಲಿ ಸಹಾಯ ಮಾಡಿ ಎಂದು ಹೇಳಿದ್ದಾರೆ.

ಹಗರಣದ ಹಿನ್ನೆಲೆಯಲ್ಲಿ, 2024ರ ಲೋಕಸಭಾ ಚುನಾವಣೆಯಲ್ಲಿ ಬಳ್ಳಾರಿ ಕ್ಷೇತ್ರದಲ್ಲಿ 20.19 ಕೋಟಿ ರೂ.ಗಳನ್ನು ಹಣವಾಗಿ ವಿತರಿಸಲಾಗಿದೆ ಎಂದು ಇಡಿ ಆರೋಪಿಸಿದೆ.ನಾಗೇಂದ್ರ ಅವರ ಸಹಾಯಕ ವಿಜಯ್‌ಕುಮಾರ್‌ ಗೌಡಾ ಅವರ ಮೊಬೈಲ್‌ನಲ್ಲಿ ಚುನಾವಣೆ ವೆಚ್ಚದ ನೋಟ್‌ ಸಿಕ್ಕಿದ್ದು, ಇದು ಹಗರಣದೊಂದಿಗೆ ಸಂಬಂಧ ಹೊಂದಿದೆ. ಯೂನಿಯನ್‌ ಬ್ಯಾಂಕ್‌ ಇಂಡಿಯಾ ಆಧಾರದಲ್ಲಿ ತನಿಖೆ ನಡೆಸುತ್ತಿದ್ದು, ಹೈಕೋರ್ಟ್‌ ಸಿಬಿಐ ತನಿಖೆಗೆ ಆದೇಶನೀಡಿದೆ.

RELATED ARTICLES

Latest News