Tuesday, September 17, 2024
Homeರಾಜ್ಯವಾಲ್ಮೀಕಿ, ಮುಡಾ ಹಗರಣ : ವಿಧಾನಸಭೆಯಲ್ಲಿ ವಾಕ್ಸಮರ, ಕೋಲಾಹಲ

ವಾಲ್ಮೀಕಿ, ಮುಡಾ ಹಗರಣ : ವಿಧಾನಸಭೆಯಲ್ಲಿ ವಾಕ್ಸಮರ, ಕೋಲಾಹಲ

ಬೆಂಗಳೂರು,ಜು.16- ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಹಣ ಅಕ್ರಮ ವರ್ಗಾವಣೆ ಪ್ರಕರಣದ ಚರ್ಚೆಗೂ ಮುನ್ನ ಭ್ರಷ್ಟಾಚಾರದ ಕುರಿತಂತೆ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಕಾವೇರಿದ ವಾಗ್ವಾದ ನಡೆದು ಗದ್ದಲ ತೀವ್ರಗೊಂಡು ಕಲಾಪವನ್ನು ಕೆಲಕಾಲ ಮುಂದೂಡಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು.

ವಿಧಾನಸಭೆಯ ಕಲಾಪದಲ್ಲಿ ಪ್ರಶ್ನೋತ್ತರ ಮತ್ತು ಶೂನ್ಯ ವೇಳೆಯ ಬಳಿಕ ಸಭಾಧ್ಯಕ್ಷರು ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಣ ವರ್ಗಾವಣೆ ಕುರಿತಂತೆ ನಿನ್ನೆಯಿಂದ ನಡೆಯುತ್ತಿರುವ ಚರ್ಚೆಯನ್ನು ಮುಂದುವರೆಸಲು ವಿರೋಧಪಕ್ಷದ ನಾಯಕ ಆರ್.ಅಶೋಕ್ ಅವರಿಗೆ ಸೂಚನೆ ನೀಡಿದರು.

ಆರ್.ಅಶೋಕ್ರವರು ಮಾತನಾಡಲು ಎದ್ದು ನಿಂತಾಗ ಟ್ರಜರಿ ಬೆಂಚ್ನಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಗೃಹಸಚಿವ ಡಾ.ಜಿ.ಪರಮೇಶ್ವರ್ ಅವರು ಮಾತ್ರ ಇದ್ದರು. ಆರ್ಥಿಕ ಇಲಾಖೆಯ ಅಧಿಕಾರಿಗಳು ಸದನದಲ್ಲಿಲ್ಲ. ನಾವು ಹೇಳುವುದನ್ನು
ದಾಖಲಿಸಿಕೊಳ್ಳುವವರು ಯಾರು? ಎಂದು ಆರ್.ಅಶೋಕ್ ಆಕ್ಷೇಪ ವ್ಯಕ್ತಪಡಿಸಿದರು.

ಇದಕ್ಕೆ ಬಿಜೆಪಿಯ ಅಶ್ವತ್ಥನಾರಾಯಣ, ಸುರೇಶ್ಕುಮಾರ್ ಬೆಂಬಲ ವ್ಯಕ್ತಪಡಿಸಿದರು. ಈ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ಸಿಐಡಿಯ ಹಿರಿಯ ಅಧಿಕಾರಿಗಳು ಸದನದ ಒಳಗೆ ಬಂದರು.ಆದರೆ ಆರ್ಥಿಕ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿಲ್ಲದೇ ಇರುವುದನ್ನು ವಿಪಕ್ಷಗಳ ನಾಯಕರು ಪ್ರಧಾನವಾಗಿ ಪ್ರಸ್ತಾಪಿಸಿ ವಿರೋಧ ಪಕ್ಷದ ನಾಯಕರು ಮಾತನಾಡುವಾಗ ಖುದ್ದು ಮುಖ್ಯಮಂತ್ರಿಯವರೇ ಇರಬೇಕು. ಕನಿಷ್ಠ ಪಕ್ಷ ಆರ್ಥಿಕ ಇಲಾಖೆಯ ಅಧಿಕಾರಿಗಳಾದರೂ ಹಾಜರಿರಬೇಕು ಎಂದು ಪಟ್ಟು ಹಿಡಿದರು.

ಸಭಾಧ್ಯಕ್ಷರ ಪೀಠದಲ್ಲಿದ್ದ ಉಪಾಧ್ಯಕ್ಷ ರುದ್ರಪ್ಪ ಲಮಾಣಿಯವರು ಸಮಯ ವ್ಯರ್ಥ ಮಾಡಬೇಡಿ, ಚರ್ಚೆ ಮುಂದುವರೆಸಿ, ಸಂಬಂಧಪಟ್ಟ ಅಧಿಕಾರಿಗಳು ಬರುತ್ತಾರೆ ಎಂದು ಸಲಹೆ ನೀಡಿದರು.ಈ ಸಂದರ್ಭದಲ್ಲಿ ಅಶ್ವತ್ಥನಾರಾಯಣ ಹಠಕ್ಕೆ ಬಿದ್ದು ಮುಖ್ಯಮಂತ್ರಿಗಳು ಹಾಗೂ ಅಧಿಕಾರಿಗಳು ಕಲಾಪದಲ್ಲಿ ಹಾಜರಿರಬೇಕು. ಅವರನ್ನು ಕರೆಸಿ ಎಂದು ಒತ್ತಾಯಿಸಿದರು. ಇದರಿಂದ ಉಪಸಭಾಧ್ಯಕ್ಷರೊಂದಿಗೆ ಕೆಲಕಾಲ ಮಾತುಕತೆಗಳು ನಡೆದವು.

ಅಶ್ವತ್ಥನಾರಾಯಣರವರು ವಾಲ್ಮೀಕಿ ನಿಗಮದ ಹಣ ವರ್ಗಾವಣೆ ಆರ್ಥಿಕ ಇಲಾಖೆಯ ಬಾಧ್ಯತೆಯನ್ನು ಹೊಂದಿದೆ. ಮುಖ್ಯಮಂತ್ರಿಯವರೂ ಇದರಲ್ಲಿ ಭಾಗಿಯಾಗಿದ್ದಾರೆ ಎಂದರು.ಇದರಿಂದ ಸಿಟ್ಟಾದ ಡಿ.ಕೆ.ಶಿವಕುಮಾರ್ರವರು ಏಕವಚನದಲ್ಲಿ ನೀನು ಭ್ರಷ್ಟಾಚಾರದ ಪಿತಾಮಹ ಎಂದು ವಾಗ್ದಾಳಿ ನಡೆಸಿದರು.

ಇದು ಬಿಜೆಪಿ ಶಾಸಕರನ್ನು ಕೆರಳಿ ಕೆಂಡವಾಗಿಸಿತು. ಎಲ್ಲರೂ ಎದ್ದುನಿಂತು ಗದ್ದಲ ಮಾಡಲಾರಂಭಿಸಿದರು. ಅಶ್ವತ್ಥನಾರಾಯಣ ಅವರು ಉಪಮುಖ್ಯಮಂತ್ರಿಯವರು ನನ್ನ ಹೆಸರನ್ನು ಪ್ರಸ್ತಾಪಿಸಿ ಆರೋಪ ಮಾಡಿದ್ದಾರೆ. ಅದಕ್ಕೆ ಸೂಕ್ತ ಮಾಹಿತಿ ಕೊಡಬೇಕು. ಇಲ್ಲವಾದರೆ, ಕ್ಷಮೆ ಕೇಳಬೇಕು. ಆರೋಪ ಮಾಡಲಾದ ಪದಗಳನ್ನು ಕಡತದಿಂದ ತೆಗೆಯಬೇಕು ಎಂದು ಪಟ್ಟು ಹಿಡಿದರು.

ಆದರೆ ಇದಕ್ಕೆ ಒಪ್ಪದ ಡಿ.ಕೆ.ಶಿವಕುಮಾರ್ ನೇರವಾಗಿ ಮುಖ್ಯಮಂತ್ರಿಯವರ ಪಾತ್ರ ಇದೆ ಎಂದು ಮಾತನಾಡುವುದು ಸರಿಯೇ? ಎಂದು ತಿರುಗೇಟು ನೀಡಿದ್ದಲ್ಲದೆ, ಮತ್ತೊಮೆ ತಮ್ಮ ಆರೋಪವನ್ನು ಪುನರುಚ್ಚರಿಸಿದರು.ಉಪಮುಖ್ಯಮಂತ್ರಿಗಳು ಹಿಟ್ ಅಂಡ್ ರನ್ ಪ್ರವೃತ್ತಿ ಅನುಸರಿಸುತ್ತಿದ್ದಾರೆ ಎಂದು ಅಶ್ವತ್ಥನಾರಾಯಣ ಕಿಡಿಕಾರಿದರು.

ಸಚಿವ ಕೆ.ಜೆ.ಜಾರ್ಜ್ ಎಲೆಕ್ಟೊರ ಬಾಂಡ್ನಲ್ಲಿ ಸಾವಿರಾರು ಕೋಟಿ ರೂ. ಭ್ರಷ್ಟಾಚಾರವಾಗಿದೆ ಎಂದು ಪ್ರಸ್ತಾಪಿಸಿದರು.ಬಿಜೆಪಿಯ ಸುನೀಲ್ಕುಮಾರ್ರವರು ಉಪಮುಖ್ಯಮಂತ್ರಿಯವರು ಯಾವುದೇ ನೋಟೀಸ್ ನೀಡದೆ ನಮ್ಮ ಪಕ್ಷದ ಶಾಸಕರ ಹೆಸರನ್ನು ಪ್ರಸ್ತಾಪಿಸಿದ್ದಾರೆ. ನಿಯಮಾವಳಿಗಳನ್ನು ಮೀರಿ ಯಾರು, ಯಾರ ಹೆಸರನ್ನಾದರೂ ಹೇಳಬಹುದೇ?, ನಾವೂ ನಿಮ ಹೆಸರನ್ನು ಹೇಳಬಹುದೇ? ಎಂದು ತಿರುಗೇಟು ನೀಡಿದರು.

ಈ ಸಂದರ್ಭದಲ್ಲಿ ಗೃಹಸಚಿವ ಪರಮೇಶ್ವರ್ ಹಾಗೂ ಬಿಜೆಪಿಯ ಸುರೇಶ್ಕುಮಾರ್ ನಡುವೆ ಮಾತಿನ ಚಕಮಕಿ ನಡೆದವು.ವಾದ-ವಿವಾದ ಕಾವೇರಿ ಪರಿಸ್ಥಿತಿ ಗದ್ದಲಮಯವಾಯಿತು.ಉಪಸಭಾಧ್ಯಕ್ಷರು ಸಮಯ ವ್ಯರ್ಥ ಮಾಡಬೇಡಿ, ಚರ್ಚೆ ಮುಂದುವರೆಸಿ ಎಂದು ಹಲವು ಬಾರಿ ಸಲಹೆ ನೀಡಿದರೂ ಪ್ರಯೋಜನವಾಗಲಿಲ್ಲ.

ಬಿಜೆಪಿಯ ಶಾಸಕರು ಕಾಂಗ್ರೆಸಿಗರು ದಲಿತರ ಹಣವನ್ನು ಲೂಟಿ ಮಾಡಿ ಇಲ್ಲಿ ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರೆ ಕಾಂಗ್ರೆಸ್ ಸದಸ್ಯರು ಆಪರೇಷನ್ ಕಮಲದ ಮೂಲಕ ಭ್ರಷ್ಟಾಚಾರದ ಪಿತಾಮಹ ಆಗಿದ್ದು ಯಾರು? ಎಂದು ಪ್ರತಿದಾಳಿ ನಡೆಸಿದರು.
ಈ ಹಂತದಲ್ಲಿ ಪೀಠಕ್ಕೆ ಆಗಮಿಸಿದ ಸಭಾಧ್ಯಕ್ಷ ಯು.ಟಿ.ಖಾದರ್ ಪರಿಸ್ಥಿತಿ ತಿಳಿಗೊಳಿಸಲು ಪ್ರಯತ್ನಿಸಿದರು. ಆದರೆ ಎರಡೂ ಕಡೆಯಿಂದಲೂ ವಾಗ್ದಾಳಿಗಳು ಜೋರಾದ ಹಿನ್ನೆಲೆಯಲ್ಲಿ ಕಲಾಪವನ್ನು 10 ನಿಮಿಷಗಳ ಕಾಲ ಮುಂದೂಡಲಾಯಿತು.

ನಂತರ ಸದನ ಸಮಾವೇಶಗೊಂಡಾಗ ಸಭಾಧ್ಯಕ್ಷ ಯು.ಟಿ.ಖಾದರ್ ಅವರು ಆಕ್ಷೇಪಾರ್ಹ ಹೇಳಿಕೆಗಳನ್ನು ಕಡತದಿಂದ ತೆಗೆದುಹಾಕುವುದಾಗಿ ಹೇಳಿ ಚರ್ಚೆಗೆ ಅವಕಾಶ ನೀಡಿದರು.ಹಿರಿಯ ಸದಸ್ಯ ಸುರೇಶ್ಕುಮಾರ್ರವರು, ಈಗಾಗಲೇ ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ನೇರಪ್ರಸಾರದಲ್ಲಿ ಎಲ್ಲವೂ ಜನರಿಗೆ ತಲುಪಿ ಆಗಿದೆ. ಈಗ ಕಡತದಿಂದ ತೆಗೆದರೆ ಅದರಿಂದ ಏನೂ ಪ್ರಯೋಜನವಾಗುವುದಿಲ್ಲ.

ಕಡತದಿಂದ ತೆಗೆಯುವಂತಹ ಸಂಪ್ರದಾಯ ಹಳೆಯದು. ಬದಲಾದ ಕಾಲಮಾನದಲ್ಲಿ ಹೇಳಿಕೆಗಳು ನೇರವಾಗಿ ಪ್ರಸಾರವಾಗುತ್ತಿವೆ ಎಂದು ಹೇಳಿದರು.ಈ ವಿಚಾರದಲ್ಲಿ ತಾವು ಬೇರೇನು ಮಾಡಲು ಸಾಧ್ಯ? ಎಂದು ಸಭಾಧ್ಯಕ್ಷರು ಅಸಹಾಯಕತೆ ವ್ಯಕ್ತಪಡಿಸಿದರು. ನಂತರ ಚರ್ಚೆಯನ್ನು ಮುಂದುವರೆಸಲು ವಿಪಕ್ಷ ನಾಯಕರಿಗೆ ಸೂಚನೆ ನೀಡಿದರು.ಕಾವೇರಿದ ವಾತಾವರಣ ತಿಳಿಯಾಗಿ ಚರ್ಚೆ ಮುಂದುವರೆಯಿತು.

RELATED ARTICLES

Latest News