ಬೆಂಗಳೂರು,ಅ.29- ಮೆಡಿಕಲ್ ವೀಸಾದಡಿ ಭಾರತಕ್ಕೆ ಬಂದು ವೀಸಾ ಅವಧಿ ಮುಗಿದರೂ ಅಕ್ರಮವಾಗಿ ನೆಲೆಸಿ ಮಾದಕವಸ್ತು ಮಾರಾಟದಲ್ಲಿ ತೊಡಗಿದ್ದ ವಿದೇಶಿ ಡ್ರಗ್ ಪೆಡ್ಲರ್‌ನನ್ನು ಸಿಸಿಬಿ ಪೊಲೀಸರು ಬಂಧಿಸಿ 2.36 ಕೋಟಿ ರೂ. ಮೌಲ್ಯದ 1 ಕೆಜಿ 577 ಗ್ರಾಂ ಎಂಡಿಎಂಎ ಕ್ರಿಸ್ಟಲ್ ವಶಪಡಿಸಿಕೊಂಡಿದ್ದಾರೆ.
ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ ವ್ಯಾಪ್ತಿಯ ಶ್ರೀನಿಧಿ ಲೇಔಟ್, ದೊಡ್ಡನಾಗಮಂಗಲದ ಮನೆಯೊಂದರಲ್ಲಿ ಈ ಡ್ರಗ್ಸ್ ಪೆಡ್ಲರ್ ವಾಸವಾಗಿದ್ದು, ಮಾದಕವಸ್ತು ಸಂಗ್ರಹಿಸಿಟ್ಟುಕೊಂಡು ಗಿರಾಕಿಗಳಿಗೆ ಮಾರಾಟ ಮಾಡುತ್ತಾ ಅಕ್ರಮ ಹಣ ಸಂಪಾದನೆಯಲ್ಲಿ ತೊಡಗಿದ್ದನು.
ಈ ಬಗ್ಗೆ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಕಾರ್ಯಾಚರಣೆ ಕೈಗೊಂಡು ಮನೆ ಮೇಲೆ ದಾಳಿ ಮಾಡಿ ವಿದೇಶಿ ಡ್ರಗ್ ಪೆಡ್ಲರ್‌ನನ್ನು ಬಂಧಿಸಿ ಮಾದಕವಸ್ತು, ಮೊಬೈಲ್, ಎಲೆಕ್ಟ್ರಾನಿಕ್ ತೂಕದ ಯಂತ್ರವನ್ನು ವಶಕ್ಕೆ ಪಡೆದಿದ್ದಾರೆ.
ವಿದೇಶಿ ಡ್ರಗ್ ಪೆಡ್ಲರ್‌ನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ, ಈತ 2020ರಲ್ಲಿ ಮೆಡಿಕಲ್ ವೀಸಾದಡಿ ಭಾರತಕ್ಕೆ ಬಂದು ದೆಹಲಿಯ ಗ್ರೇಟರ್ ನೋಯ್ಡಾದಲ್ಲಿ ವಾಸವಾಗಿದ್ದುಕೊಂಡು ವೀಸಾ ಅವಧಿ ಮುಗಿದ ಬಳಿಕವೂ ಅಕ್ರಮವಾಗಿ ನೆಲೆಸಿ ಕ್ಷೌರಿಕ ಕೆಲಸ ಮಾಡಿಕೊಂಡಿದ್ದ.
ನಗರದಲ್ಲಿ ವಾಸವಿರುವ ವಿದೇಶಿ ಮೂಲದ ಮಹಿಳಾ ಡ್ರಗ್ ಪೆಡ್ಲರ್ ಜೊತೆ ಸಂಪರ್ಕವಿದ್ದು, ಆಕೆಯಿಂದ ಮಾದಕವಸ್ತು ಎಂಡಿಎಂಎ ಕ್ರಿಸ್ಟಲ್ ಪಡೆದು ಆಕೆ ತಿಳಿಸುವ ಗಿರಾಕಿಗಳಿಗೆ ಹಾಗೂ ಪರಿಚಯಸ್ಥ ಗಿರಾಕಿಗಳಿಗೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಹೆಚ್ಚಿನ ಹಣ ಗಳಿಸುತ್ತಿರುವುದು ಗೊತ್ತಾಗಿದೆ.
ಮಹಿಳಾ ಡ್ರಗ್ ಪೆಡ್ಲರ್ ತಲೆಮರೆಸಿಕೊಂಡಿದ್ದು, ಆಕೆಯ ಪತ್ತೆ ಕಾರ್ಯ ಮುಂದುವರೆದಿದೆ. ಸಿಸಿಬಿ ಮಾದಕದ್ರವ್ಯ ನಿಗ್ರಹ ದಳದ ಅಧಿಕಾರಿ ಮತ್ತು ಸಿಬ್ಬಂದಿ ತಂಡವು ಈ ಕಾರ್ಯಾಚರಣೆ ಕೈಗೊಂಡಿತ್ತು.