ಬೆಂಗಳೂರು,ಸೆ.29- ರಾಜ್ಯ ಸರ್ಕಾರ ಜನರನ್ನು ಕತ್ತಲಿಟ್ಟು ಕದ್ದು ಮುಚ್ಚಿ ತಮಿಳುನಾಡಿಗೆ ಕಾವೇರಿ ನೀರು ಬಿಡುತ್ತಿದೆ ಎಂದು ಕನ್ನಡ ಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಆರೋಪಿಸಿದ್ದಾರೆ.ಕರ್ನಾಟಕ ಬಂದ್ ಬಂದ್ ಸಂದರ್ಭದಲ್ಲಿ ಬುರ್ಕಾ ಧರಿಸಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಅವರು, ರಾಜ್ಯ ಸರ್ಕಾರದ ಅಸಹಕಾರ, ಪೊಲೀಸರ ವಿರೋಧದ ನಡುವೆಯೂ ಕನ್ನಡಪರ ಸಂಘಟನೆಗಳ ಒಕ್ಕೂಟ ಕರೆ ನೀಡಿದ್ದ ಕರ್ನಾಟಕ ಬಂದ್ ಯಶಸ್ವಿಯಾಗಿದೆ. ದೇಶಕ್ಕೆ ನಮ್ಮ ಶಕ್ತಿ ಪ್ರದರ್ಶನವಾಗಿದೆ ಎಂದು ಹೇಳಿದರು.
ಬೆಂಗಳೂರಿನಲ್ಲಿ 50 ಸಾವಿರ, ರಾಜ್ಯಾದ್ಯಂತ ಲಕ್ಷಾಂತರ ಪೊಲೀಸರನ್ನು ನಿಯೋಜಿಸಿ ರಾಜ್ಯ ಸರ್ಕಾರ ಹೋರಾಟಗಾರರನ್ನು ಬಂದ್ ಮಾಡಿದೆ. ನಾವು ಕಾವೇರಿಗಾಗಿ ಕರ್ನಾಟಕ ಬಂದ್ ಮಾಡಿದ್ದೇವೆ. ಸರ್ಕಾರ ನಮ್ಮನ್ನೆ ಬಂದ್ ಮಾಡಿದೆ. ತಮಿಳುನಾಡಿನಲ್ಲಿ ಪೊಲೀಸರು ರಸ್ತೆ ತಡೆ ಅವರ ರಾಜ್ಯ ಪರವಾಗಿ ನಿಂತಿದ್ದಾರೆ. ಕರ್ನಾಟಕದಲ್ಲಿ ಪೊಲೀಸರು ಹೋರಾಟಗಾರರನ್ನೇ ಬಂಸುತ್ತಿದ್ದಾರೆ. ಇದು ನೋವಿನ ಸಂಗತಿ. ಹೋರಾಟದ ಹಿನ್ನೆಲೆಯಲ್ಲಿ ಇರುವ ಶಿವರಾಮೇಗೌಡ, ಪ್ರವೀಣ್ ಶೆಟ್ಟಿ ಸೇರಿದಂತೆ ಅನೇಕರನ್ನು ಕಾರಣ ಇಲ್ಲದೆ ಬಂಸಲಾಗಿದೆ ಎಂದು ವಾಗ್ದಾಳಿ ನಡೆಸಿದರು.
ಕೆಂಪೇಗೌಡ ವಿಮಾನ ನಿಲ್ದಾಣಕ್ಕೂ ತಟ್ಟಿದ ಕರ್ನಾಟಕ ಬಂದ್ ಬಿಸಿ
ಕನ್ನಡ ಪರ ಸಂಘಟನೆಗಳು ಟೌನ್ ಹಾಲ್‍ನಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ್ದರೆ ರಾಜ್ಯ ಸರ್ಕಾರಕ್ಕೆ ಏನು ತೊಂದರೆಯಾಗುತ್ತಿತ್ತು. ಆದರೆ ನಿಷೇಧಾಜ್ಞೆ ಜಾರಿಗೆ ತಂದು ಅಡ್ಡಿ ಪಡಿಸಲಾಗಿದೆ. ಟೌನ್‍ಹಾಲ್‍ನಿಂದ ಶಾಂತಿಯುತವಾಗಿ ಮೆರವಣಿಗೆ ನಡೆಸಿದ್ದರೆ ಸರ್ಕಾರದ ಮಡಿ ಹಾಳಾಗುತ್ತಿತ್ತೆ. ಫ್ರೀಡಂ ಪಾರ್ಕ್‍ನಲ್ಲಿ ಪ್ರತಿಭಟನೆ ಮಾಡಿದರೆ ಮೈಲಿಗೆಯಾಗುವುದಿಲ್ಲವೇ. ಈ ದ್ವಿಮುಖ ನೀತಿ ಏಕೆ ಎಂದು ಪ್ರಶ್ನಿಸಿದರು. ರಾಜ್ಯದಲ್ಲಿ ಏನು ಬೇಕಾದರೂ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಿಶ್ವಸಂಸ್ಥೆ ಪರವಾನಗಿ ನೀಡಿದೆಯೇ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.
ರಾಜ್ಯ ಸರ್ಕಾರದ ಸಚಿವರು ಪಾಳೇಗಾರರಂತೆ ವರ್ತಿಸುತ್ತಿದ್ದಾರೆ. ಗೃಹ ಸಚಿವ ಪರಮೇಶ್ವರ್ ಯಾವತ್ತೂ ಹೋರಾಟ ಮಾಡಿಲ್ಲ. ಅವರಿಗೆ ಪ್ರತಿಭಟನೆಗಳ ಹಿನ್ನೆಲೆ ಗೋತ್ತಿಲ್ಲ. ಅದಕ್ಕಾಗಿ ಬಂದ್‍ಗೆ ಅವಕಾಶ ಇಲ್ಲ ಎಂದು ಹೇಳಿದ್ದಾರೆ. ಮತ್ತೊಂದೆಡೆ ಶಿವನ ಪುತ್ರ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೂಡ ಕರುಣೆ ತೋರಿಸಲಿಲ್ಲ. ಕನಿಷ್ಠ ಸಿದ್ದರಾಮೇಶ್ವರನೂ ದಾರಿ ತೋರಿಸಲಿಲ್ಲ. ಸಿದ್ಧರಾಮೇಶ್ವರ ನಿಮ್ಮನ್ನು ನಾವು ಎಷ್ಟು ನೆನಪಿಸಿಕೊಳ್ಳುತ್ತೇವೆ. ನಿಮ್ಮ ಕಣ್ಣಿಗೆ ನಾವು ಬೀಳಲೇ ಇಲ್ಲವೇ ಎಂದು ನಾಟಕೀಯವಾಗಿ ಆಕ್ಷೇಪ ವ್ಯಕ್ತಪಡಿಸಿದರು.
ಮುಸ್ಲಿಂ ಮಹಿಳೆಯರು ಧರಿಸುವ ಬುರ್ಕಾ ಧರಿಸಿ ಇಂದು ತಾವು ಪ್ರತಿಭಟನೆಯಲ್ಲಿ ಭಾಗವಹಿಸಿದ್ದು, ಇದು ಮಹಿಳೆಯರ ಪಾಲ್ಗೋಳ್ಳುವಿಕೆ ಮತ್ತು ನ್ಯಾಯದ ಸಂದೇಶ ಸಂದೇಶವಾಗಿದೆ. ಮಹಿಳೆಯರಿಗೆ ಶಾಸನ ಸಭೆಯಲ್ಲಿ ಶೇ.33ರಷ್ಟು ಮೀಸಲಾತಿ ನೀಡುವ ಕಾಯ್ದೆ ಸಂಸತ್‍ನಲ್ಲಿ ಅಂಗೀಕಾರಗೊಂಡಿದೆ. ಅದಕ್ಕಾಗಿ ಮಹಿಳೆಯರಿಗೆ ಆದ್ಯತೆ ನೀಡುವ ಅಗತ್ಯವಿದೆ. ರಾಜ್ಯ ಸರ್ಕಾರ ಕನ್ನಡಿಗರನ್ನು ಕತ್ತಲಿನಲ್ಲಿಟ್ಟು ತಮಿಳುನಾಡಿಗೆ ನೀರು ಬೀಡುತ್ತಿದೆ ಎಂಬುದರ ಆಕ್ರೋಶವೂ ಇದರಲ್ಲಿ ಅಡಗಿದೆ ಎಂದರು.