ಬೆಂಗಳೂರು, ಮಾ.11– ನೀರಿನ ಅಭಾವ, ವಿದ್ಯುತ್ ಸಮಸ್ಯೆಯಿಂದ ಸಾಮಾನ್ಯವಾಗಿ ಬೇಸಿಗೆಯಲ್ಲಿ ತರಕಾರಿಗಳ ಬೆಲೆ ಗಗನಕ್ಕೇರುವುದು ಸಾಮಾನ್ಯ. ಸೊಪ್ಪು ಹಾಗೂ ತರಕಾರಿ ಬೆಲೆಯಲ್ಲಿ ಗಣನೀಯವಾಗಿ ಇಳಿಕೆಯಾಗಿದೆ. ಸಗಟು ದರದಲ್ಲಿ ಹುರುಳಿಕಾಯಿ ಹೊರತುಪಡಿಸಿದರೆ ಎಲ್ಲಾ ತರಕಾರಿ ಬೆಲೆ 40 ರೂ. ಆಸುಪಾಸಿನಲ್ಲಿದೆ ಚಿಲ್ಲರೆ ದರದಲ್ಲಿ 50 ರೂ.ಗೆ ಮಾರಾಟವಾಗುತ್ತಿದೆ.
ತರಕಾರಿ ಬೆಳೆಯಲು ಹೆಚ್ಚಾಗಿ ನೀರಿನ ಅವಶ್ಯಕತೆ ಇದ್ದು ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ಬೆಳೆಗಳಿಗೆ ಹೊಡೆತ ಬೀಳುತ್ತಿತ್ತು. ಆದರೆ ಈ ಬಾರಿ ಅಂತಹ ಸಮಸ್ಯೆ ಎದುರಾಗಿಲ್ಲ.
ಬೇಸಿಗೆಯಲ್ಲಿ ತರಕಾರಿಗೆ ಹೆಚ್ಚಿನ ಬೆಲೆ ಸಿಗಲಿದೆ ಎಂದು ಬಹುತೇಕ ರೈತರು ಹೆಚ್ಚಿನ ಪ್ರಮಾಣದಲ್ಲಿ ಬೆಳೆ ಬೆಳೆದಿದ್ದು ಜೊತೆಗೆ ಬಿಸಿಲಿಗೆ ಅಷ್ಟೇನೂ ರೋಗಬಾಧೆ ಕಾಡದ ಹಿನ್ನಲೆಯಲ್ಲಿ ಇಳುವರಿ ಹೆಚ್ಚಾಗಿ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಮಾಲು ಬರುತ್ತಿದ್ದು, ಬೇಡಿಕೆ ಇಳಿಮುಖವಾಗಿರುವುದರಿಂದ ಬೆಲೆ ಇಳಿಕೆ ಕಂಡಿದೆ.
ನಾಟಿ ಹುರುಳಿಕಾಯಿ ಹೊರತುಪಡಿಸಿದರೆ ಉಳಿದ ತರಕಾರಿಗಳ ಬೆಲೆ ಏನೂ ಹೆಚ್ಚಾಗಿಲ್ಲ. ಮಾರುಕಟ್ಟೆಯಲ್ಲಿ ಕಳೆದ ವಾರ ಕೆಜಿಗೆ 50 ರೂ.ಗೆ ಮಾರಾಟವಾಗುತ್ತಿದ್ದ ಬೀನ್ಸ್ ಇಂದು 65 ರೂ. ತಲುಪಿದೆ.
ಉಳಿದಂತೆ ಬದನೆ ಕಾಯಿ ಕೆಜಿಗೆ 30, ಕ್ಯಾಪ್ತಿಕಂ 40, ಮೂಲಂಗಿ 30 ಟಮೋಟೋ 20, ಬೀಟ್ ರೊಟ್ 30, ನವಿಲ್‌ಸ್ 30. ಸೌತೆಕಾಯಿ 30, ಡೆಲ್ಲಿ ಕ್ಯಾರೆಟ್ 70, ನಾಟಿ ಕ್ಯಾರೆಟ್ 30, ಎಲೆಕೊಸು 30. ನುಗ್ಗೆಕಾಯಿ 80 ಈರುಳ್ಳಿ 40, ರೂ.ಗೆ ಮಾರಾಟವಾಗುತ್ತಿದೆ.
ಕಳೆದ ಎರಡು ಮೂರು ದಿನಗಳ ಹಿಂದೆ 40 ರೂಗೆ ಮಾರಾಟ ವಾಗುತ್ತಿದ್ದ ಹಸಿರು ಬಟಾಣಿ ಇಂದು ದಿಢೀರನೆ 70 ರೂ ತಲುಪಿದೆ. ನೆರೆಯ ತಮಿಳುನಾಡು, ಆಂಧ್ರಪ್ರದೇಶಕ್ಕೆ ಬೆಂಗಳೂರಿನಿಂದ ತರಕಾರಿ ಹೋಗುತ್ತಿತ್ತು. ಆದರೆ ಆ ಭಾಗದಲ್ಲಿ ಹೆಚ್ಚಾಗಿ ಇಳುವರಿ ಬಂದಿದ್ದು ವ್ಯಾಪಾರಿಗಳು ಬೆಂಗಳೂರಿನತ್ತ ಬಾರದಕಾರಣ ಬೇಡಿಕೆ ಕಡಿಮೆಯಾಗಿದೆ. ಕ್ಯಾರೆಟ್ ಮಾತ್ರ ಹೊರಗಿನಿಂದ ಬರುತ್ತಿದ್ದು ಕೆಜಿಗೆ 60 ರೂ.ನಿಂದ 70 ರೂ.ಗೆ ಮಾರಾಟವಾಗುತ್ತಿದೆ.
ಇನ್ನೂ ಲಾಟಿರಿ ಬೆಳೆ ಎಂದು ಕರೆಯಲಾಗುವ ಕೆಂಪು ಸುಂದರಿ ಟೊಮೋಟೊ ಬೆಲೆ ಬಾರೀ ಇಳಿಕೆಯಾಗಿದ್ದು, ಕೆಜಿಗೆ 10 ರೂ. 15 ರೂ.ಗೆ ಮಾರಾಟವಾಗುತ್ತಿದೆ. ಇನ್ನೂ ನೆತ್ತಿ ಸುಡುವ ಬಿಸಿಲಿಗೆ ಸೊಪ್ಪು ಬಹಳ ಬೇಗ ಬಾಡಿ ಹೋಗುತ್ತಿದ್ದು ಬೆಲೆ ಹೆಚ್ಚಾಗಬೇಕಾಗಿತ್ತು ಆದರೆ ಎಲ್ಲಾ ಸೊಪ್ಪಿನ ಬೆಲೆ ಕಟ್ಟಿಗೆ 10 ಹಾಗೂ 20 ರೂಗಳಿದೆ. ಯುಗಾದಿ ಹಬ್ಬದ ನಂತರ ಬೆಲೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಕೆಆರ್ ಮಾರುಕಟ್ಟೆಯ ವ್ಯಾಪಾರಿಯೊಬ್ಬರು ತಿಳಿಸಿದ್ದಾರೆ.