ಬೆಂಗಳೂರು, ಜೂ.2- ರಾಜ್ಯದ ವಿವಿಧೆಡೆ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ತರಕಾರಿಗಳ ಬೆಲೆ ತುಸು ಏರಿಕೆಯಾಗಿದ್ದು, ಗ್ರಾಹಕರಿಗೆ ಬಿಸಿ ತಟ್ಟಿದೆ. ಕಳೆದ ಒಂದು ತಿಂಗಳಿನಿಂದ ಸ್ಥಿರತೆ ಕಾಯ್ದುಕೊಂಡಿದ್ದ ತರಕಾರಿಗಳ ಬೆಲೆ ಕಳೆದ 15 ದಿನಗಳಿಂದ ಏರುತ್ತಿದೆ. ಟೊಮ್ಯಾಟೊ ಹೊರತುಪಡಿಸಿದರೆ ಎಲ್ಲಾ ತರಕಾರಿಗಳ ಬೆಲೆ ಏರುತ್ತಲೇ ಇವೆ.
ಹೆಚ್ಚಾಗಿ ತರಕಾರಿ ಬೆಳೆಯುವ ಪ್ರದೇಶಗಳಾದ ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ತುಮಕೂರು, ಮಾಗಡಿ, ಬೆಂಗಳೂರು ಗ್ರಾಮಾಂತರ, ಮಂಡ್ಯ, ಮೈಸೂರು, ಚಿತ್ರದುರ್ಗ, ದಾವಣಗೆರೆ ಸೇರಿದಂತೆ ಮತ್ತಿತರೆಡೆ ಕಳೆದ ಹದಿನೈದು ದಿನಗಳಿಂದ ಭಾರೀ ಮಳೆಯಾಗಿದ್ದು, ಬೆಳೆಯೆಲ್ಲಾ ನಾಶವಾಗಿ ಉತ್ಪಾದನೆ ಕುಂಠಿತವಾಗಿ ಬೇಡಿಕೆ ಹೆಚ್ಚಾದ ಕಾರಣ ಬೆಲೆ ಹೆಚ್ಚಾಗಿದೆ. ಹುರಳಿಕಾಯಿ ಮಾರುಕಟ್ಟೆಯಲ್ಲಿ ಶತಕ ಬಾರಿಸಿದ್ದು, ಉಳಿದ ತರಕಾರಿಗಳು ಅರ್ಧಶತಕದ ಆಜುಬಾಜುನಲ್ಲಿದೆ.
ಸೌತೆಕಾಯಿಗೆ ಬೇಸಿಗೆಯಲ್ಲಿ ಇಲ್ಲದ ಬೆಲೆ ಈಗ ಬಂದಿದ್ದು, ಬೆಳೆಗಾರರಲ್ಲಿ ಸಂತಸ ತಂದಿದೆ. ಸಾಮಾನ್ಯವಾಗಿ ಈ ಸಮಯದಲ್ಲಿ ಸೌತೆಕಾಯಿ 30 ರೂ. ದಾಟುವುದು ಹೆಚ್ಚು. ಆದರೆ ಈಗ ಕೆಜಿಗೆ 50 ರೂ. ವರೆಗೂ ಚಿಲ್ಲರೆಯಾಗಿ ಮಾರಾಟವಾಗುತ್ತಿದೆ. ಹುರುಳಿಕಾಯಿಯಂತೂ ದಿನದಿಂದ ದಿನಕ್ಕೆ ಬೆಲೆ ಏರುತ್ತಲೇ ಇದ್ದು, ಗುಣಮಟ್ಟದ ನಾಟಿ ಬೀನ್ಸ್ ಚಿಲ್ಲರೆಯಾಗಿ 120 ರೂ.ಗೆ ಮಾರಾಟವಾಗುತ್ತಿದ್ದರೆ, ರಿಂಗ್ ಬೀನ್ಸ್ 110 ರೂ.ಗೆ ಮಾರಾಟವಾಗುತ್ತಿದೆ.
ಊಟಿ ಕ್ಯಾರೆಟ್ ಕೆಜಿಗೆ 60 ರೂ., ಬೀಟರೂಟ್ 50 ರೂ., ಬೆಂಡೇಕಾಯಿ 50 ರೂ., ಮೂಲಂಗಿ 40 ರೂ., ತೊಂಡೇಕಾಯಿ 50, ಆಲೂಗಡ್ಡೆ 40 ರೂ., ಹೀರೇಕಾಯಿ 50 ರೂ., ನವಿಲುಕೋಸು 60 ರೂ., ನುಗ್ಗೇಕಾಯಿ 120 ರೂ., ಗಳಿಗೆ ಮಾರಾಟವಾಗುತ್ತಿದೆ.
ಇನ್ನು ಲಾಟರಿ ಬೆಲೆಯಾದ ಟೊಮ್ಯಾಟೊ ಬೆಲೆ ಮಾತ್ರ ಕಳೆದ ಎರಡು ತಿಂಗಳಿನಿಂದ ಚೇತರಿಸಿಕೊಂಡಿಲ್ಲ, 10 ರಿಂದ 15 ರೂ. ಆಜುಬಾಜಿನಲ್ಲೇ ಮಾರಾಟವಾಗುತ್ತಿದೆ. ಮಳೆ ಹೆಚ್ಚಾದರೆ ಟೊಮ್ಯಾಟೊ ಬೆಳೆ ಬೇಗ ನಾಶವಾಗುತ್ತದೆ. ಈ ಹಿನ್ನೆಲೆಯಲ್ಲಿ ಬೆಲೆಯೂ ಸಹ ಹೆಚ್ಚಳವಾಗುತ್ತದೆ. ಆದರೆ ಕಳೆದ 15 ದಿನಗಳಿಂದ ಮಳೆ ಬೀಳುತ್ತಿದ್ದರೂ ಸಹ ಬೆಲೆ ಮಾತ್ರ ಏರಿಕೆಯಾಗಿಲ್ಲ. ಹೆಚ್ಚಿನ ಪ್ರಮಾಣದಲ್ಲಿ ಟೊಮ್ಯಾಟೊ ಬೆಳೆದಿರುವುದರಿಂದ ಉತ್ಪಾದನೆ ಹೆಚ್ಚಾಗಿದೆ ಎಂದು ಕೋಲಾರ ಯುಪಿಎಂಸಿ ಮಾರುಕಟ್ಟೆ ವರ್ತಕರೊಬ್ಬರು ತಿಳಿಸಿದ್ದಾರೆ.