ಬೆಂಗಳೂರು,ಫೆ.25- ದ್ವಿಚಕ್ರ ವಾಹನಗಳನ್ನು ಕಳವು ಮಾಡಿ ಆರೋಪಿಗಳು ಅಪರಾಧ ಕೃತ್ಯಗಳಿಗೆ ಉಪಯೋಗಿಸುತ್ತಿದ್ದು, ಈ ಬಗ್ಗೆ ಮಾಲೀಕರು ಎಚ್ಚರಿಕೆ ವಹಿಸಬೇಕು ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರು ಸಲಹೆ ಮಾಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ವಾಹನ ಕಳುವಿನ ಬಗ್ಗೆ ಹೆಚ್ಚು ನಿಗಾ ವಹಿಸಿದ್ದು, ವಾಹನ ಚೋರರನ್ನು ಬಂಧಿಸಿ ವಾಹನಗಳನ್ನು ವಶಪಡಿಸಿಕೊಳ್ಳುತ್ತಿದ್ದೇವೆ. ದ್ವಿಚಕ್ರ ವಾಹನ ಮಾಲಿಕರು ತಮ್ಮ ವಾಹನಗಳನ್ನು ಜೋಪಾನವಾಗಿ ಇಟ್ಟುಕೊಳ್ಳಬೇಕು.
ಈಗಾಗಲೇ ಈ ಬಗ್ಗೆ ಹಲವು ಬಾರಿ ಸಲಹೆ, ಸೂಚನೆಗಳನ್ನು ನೀಡಿದ್ದರೂ ಸಹ ಮಾಲಿಕರು ತಮ್ಮ ವಾಹನಗಳ ಬಗ್ಗೆ ಹೆಚ್ಚು ಜವಾಬ್ದಾರಿ ವಹಿಸುತ್ತಿಲ್ಲ. ಹಾಗಾಗಿ ವಾಹನಗಳ್ಳತನ ಆಗುತ್ತಿವೆ ಎಂದರು. ಮಾಲೀಕರು ತಮ್ಮ ದ್ವಿಚಕ್ರ ವಾಹನಗಳನ್ನು ಸೂಕ್ತ ಸ್ಥಳಗಳಲ್ಲಿ ನಿಲ್ಲಿಸಬೇಕು, ಅದಕ್ಕೆ ಲಾಕಿಂಗ್ ವ್ಯವಸ್ಥೆ ಸರಿಯಾಗಿರುವಂತೆ ನೋಡಿಕೊಳ್ಳಬೇಕು, ಜಿಪಿಎಸ್ ಅಳವಡಿಸಿಕೊಳ್ಳಬೇಕು, ಪ್ರಮುಖವಾಗಿ ಮನೆಯ ಕಾಂಪೌಂಡ್ ಒಳಗೆ ನಿಲ್ಲಿಸುವಂತೆ ಆಯುಕ್ತರು ಸಲಹೆ ಮಾಡಿದರು.
ಅಂಗಡಿ ಹಾಗೂ ಖಾಸಗಿ ಸಂಸ್ಥೆಗಳ ಮಾಲೀಕರು ಕೆಲಸಗಾರರನ್ನು ನೇಮಿಸಿಕೊಳ್ಳುವಾಗ ಅವರ ಪೂರ್ವಾಪರ ವಿಚಾರಿಸಬೇಕು. ಅವರ ದಾಖಲಾತಿಗಳನ್ನು ಪಡೆಯಬೇಕು ಎಂದು ಮಾಲೀಕರಿಗೆ ಸೂಚನೆ ನೀಡಿದರು.