ಬೆಂಗಳೂರು,ಜ.29- ನಗರದಲ್ಲಿ ಇಂದು ಬೆಳಗ್ಗೆ ಬೆಂಕಿ ಅವಘಡ ಸಂಭವಿಸಿದ್ದು, ಪೊಲೀಸರು ವಶಪಡಿಸಿಕೊಂಡು ನಿಲ್ಲಿಸಿದ್ದ 150 ವಾಹನಗಳು ಬೆಂಕಿಗೆ ಆಹುತಿಯಾಗಿರುವ ಘಟನೆ ಶ್ರೀರಾಮಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ ನಡೆದಿದೆ.
ವಿವಿಧ ಪ್ರಕರಣಗಳಲ್ಲಿ ಪೊಲೀಸರು ವಶಪಡಿಸಿಕೊಂಡಿದ್ದ ಕೆಲವು ದ್ವಿಚಕ್ರ, ತ್ರಿಚಕ್ರ, ಹಾಗೂ ನಾಲ್ಕು ಚಕ್ರ ವಾಹನಗಳನ್ನು ಜಕ್ಕರಾಯನಕೆರೆ ಮೈದಾನದ ಖಾಲಿ ಜಾಗದಲ್ಲಿ ನಿಲ್ಲಿಸಲಾಗಿತ್ತು. ಇಂದು ಬೆಳಗ್ಗೆ 11 ಗಂಟೆ ಸುಮಾರಿನಲ್ಲಿ ಈ ಪ್ರದೇಶದಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ನಿಲ್ಲಿಸಿದ್ದ 150 ವಾಹನಗಳಿಗೆ ಬೆಂಕಿ ತಗುಲಿ ಸುಟ್ಟು ಕರಕಲಾಗಿವೆ.
ಸುದ್ದಿ ತಿಳಿದು ಅಗ್ನಿಶಾಮಕ ಸಿಬ್ಬಂದಿ 5 ವಾಹನಗಳೊಂದಿಗೆ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿ ಬೆಂಕಿಯನ್ನು ತಹಬದಿಗೆ ತರುವಲ್ಲಿ ಯಶಸ್ವಿಯಾದರು. ಅಷ್ಟರಲ್ಲಾಗಲೇ 150 ವಾಹನಗಳು ಸುಟ್ಟು ಕರಕಲಾಗಿವೆ. ನಗರ ಪೊಲೀಸರು ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಂಡಿರುವ ಸುಮಾರು ಎರಡು ಸಾವಿರಕ್ಕೂ ಹೆಚ್ಚು ವಾಹನಗಳನ್ನು ಈ ಮೈದಾನದಲ್ಲಿ ನಿಲ್ಲಿಸಲ್ಲಾಗಿದೆ.
ಈ ಖಾಲಿ ಜಾಗದಲ್ಲಿ ಗಿಡಗಂಟೆಗಳು ಬೆಳೆದಿದ್ದು, ಯಾರೋ ಸಿಗರೇಟ್ ಅಥವಾ ಬಿಡಿ ಸೇದಿ ಎಸೆದಿರುವುದರಿಂದ ಬೆಂಕಿ ಹೊತ್ತಿಕೊಂಡಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಉತ್ತರ ವಿಭಾಗದ ಡಿಸಿಪಿ, ಎಸಿಪಿ, ಇನ್ಸ್ಪೆಕ್ಟರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಬಗ್ಗೆ ಶ್ರೀರಾಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೊನ್ನೆ ಡಾ.ರಾಜ್ಕುಮಾರ್ ರಸ್ತೆಯಲ್ಲಿನ ದ್ವಿಚಕ್ರ ವಾಹನ ಶೋರೂಂವೊಂದರಲ್ಲಿ ಬೆಂಕಿ ಅವಘಡ ಸಂಭವಿಸಿದ ಘಟನೆ ಮಾಸುವ ಮುನ್ನವೇ ಇಂದು ಮತ್ತೊಂದು ಬೆಂಕಿ ದುರಂತ ನಡೆದಿದೆ.