Monday, September 15, 2025
Homeರಾಜ್ಯಪಟ್ಟಭದ್ರ ಹಿತಾಸಕ್ತಿಗಳು ಸಂವಿಧಾನ ಹಾಗೂ ಪ್ರಜಾಪ್ರಭುತ್ವ ದುರ್ಬಲಗೊಳಿಸುವ ಪ್ರಯತ್ನ ಮಾಡುತ್ತಿವೆ : ಸಿಎಂ

ಪಟ್ಟಭದ್ರ ಹಿತಾಸಕ್ತಿಗಳು ಸಂವಿಧಾನ ಹಾಗೂ ಪ್ರಜಾಪ್ರಭುತ್ವ ದುರ್ಬಲಗೊಳಿಸುವ ಪ್ರಯತ್ನ ಮಾಡುತ್ತಿವೆ : ಸಿಎಂ

Vested interests are trying to weaken the Constitution and democracy: CM

ಬೆಂಗಳೂರು, ಸೆ.15- ಪಟ್ಟಭದ್ರ ಹಿತಾಸಕ್ತಿಗಳು ಸಂವಿಧಾನ ಹಾಗೂ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವ ಪ್ರಯತ್ನ ಮಾಡುತ್ತಿದ್ದು, ಎಷ್ಟೇ ಕಷ್ಟಗಳು ಎದುರಾಗುತ್ತಿದ್ದರೂ ಇದಕ್ಕೆ ಅವಕಾಶ ನೀಡಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದ್ದಾರೆ.

ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ಅಂಗವಾಗಿ ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಆಯೋಜಿಸಲಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮದು ಬಹು ಸಂಸ್ಕೃತಿಯಲ್ಲಿ ಏಕತೆಯ ರಾಷ್ಟ್ರ. ಬಸವಣ್ಣ ಅವರ ಅನುಭವ ಮಂಟಪದಲ್ಲೂ ಪ್ರಜಾಪ್ರಭುತ್ವಕ್ಕೆ ಒತ್ತು ನೀಡಲಾಗಿತ್ತು ಎಂದರು.

ಇತ್ತೀಚೆಗೆ ಮತಗಳ್ಳತನ ನಡೆಯುತ್ತಿದೆ. ನನ್ನ ಮತ ನನ್ನ ಹಕ್ಕಿಗಾಗಿ ಹೋರಾಟ ಮಾಡಬೇಕು ಎಂಬ ಪರಿಸ್ಥಿತಿ ಎದುರಾಗಿದೆ. ಸಂವಿಧಾನ, ಪ್ರಜಾಪ್ರಭುತ್ವ ಉಳಿಸುವುದು ಪ್ರತಿಯೊಬ್ಬರ ಕರ್ತವ್ಯ ಮತ್ತು ಅನಿವಾರ್ಯವಾಗಿದೆ ಎಂದರು.

ಸಂವಿಧಾನದಲ್ಲಿ ಯಾವ ಜಾತಿ ಧರ್ಮಕ್ಕೂ ಮೇಲು-ಕೀಳು ಎಂಬ ತಾರತಮ್ಯ ಇಲ್ಲ. ಜಾತಿ, ಧರ್ಮ ಹಾಗೂ ಲಿಂಗ ಬೇಧವಿಲ್ಲದೇ ಎಲ್ಲರಿಗೂ ಪ್ರಜಾಪ್ರಭುತ್ವದಲ್ಲಿ ಸಮಾನ ಅವಕಾಶಗಳಿವೆ. ಸಾಮಾಜಿಕ ಅಸಮಾನತೆ ನಿವಾರಣೆಯಾಗಬೇಕು. ಪ್ರತಿಯೊಬ್ಬರಿಗೂ ಆರ್ಥಿಕ ಹಾಗೂ ಸಾಮಾಜಿಕ ಸಮಾನತೆ ದೊರೆಯಬೇಕು. ಜಾತಿಬೇಧ ಮಾಡಬಾರದು. ಧರ್ಮ ಸಹಿಷ್ಣುತೆ ಇರಬೇಕೆಂದು ಹೇಳಿದರು.

ವಿರೋಧ ಪಕ್ಷಗಳಿಗೆ ರಾಜಕೀಯ ಮಾಡಲು ಬೇರೆ ವಿಷಯಗಳೇ ಇಲ್ಲ. ಧರ್ಮದ ಹೆಸರಿನಲ್ಲೇ ರಾಜಕೀಯ ಮಾಡುತ್ತಿದ್ದಾರೆ. ಬಾನು ಮುಷ್ತಾಕ್‌ ದಸರಾ ಉದ್ಘಾಟಿಸಬಾರದೆಂದು ವಿರೋಧ ವ್ಯಕ್ತಪಡಿಸಲಾಗಿದೆ. ನಾವು ಯಾವ ವ್ಯವಸ್ಥೆಯಲ್ಲಿದ್ದೇವೆ ಎಂದೇ ಅರ್ಥವಾಗುತ್ತಿಲ್ಲ. ಸಂವಿಧಾನ ಧರ್ಮ ತಾರತಮ್ಯಕ್ಕೆ ಅವಕಾಶ ನೀಡುವುದಿಲ್ಲ. ಸ್ವಾತಂತ್ರ್ಯ ಬಂದು ಇಷ್ಟೂ ವರ್ಷಗಳಾದರೂ ಪಟ್ಟಭದ್ರ ಹಿತಾಸಕ್ತಿಗಳು ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿವೆ. ಮಾಜಿ ಸಂಸದನೊಬ್ಬ ಸಂವಿಧಾನ ಓದದೆ ಮೂರ್ಖನಂತೆ ನಡೆದುಕೊಳ್ಳುತ್ತಾನೆ ಎಂದು ಏಕ ವಚನದಲ್ಲಿ ವಾಗ್ದಾಳಿ ನಡೆಸಿದರು.

ಚರ್ಚೆಯೇ ಪ್ರಜಾಪ್ರಭುತ್ವದ ಜೀವಾಳ. ಆದರೆ ಜನರನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನ ಖಂಡನೀಯವಾಗಿದೆ. ಇತ್ತೀಚಿನ ದಿನಗಳಲ್ಲಿ ವಿರೋಧ ಪಕ್ಷಗಳು ಈ ಪ್ರಯತ್ನವನ್ನು ಹೆಚ್ಚು ಮಾಡುತ್ತಿವೆ. ಜನ ಜಾಗೃತರಾಗಬೇಕು ಎಂದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮಾತನಾಡಿ, ಸರ್ವರಿಗೂ ಸಮಾಬಾಳು, ಸಮಪಾಲು ಎಂಬ ಆಶ್ರಯ ನಾಡಿನ ಅನುಭವ ಮಂಟಪದಿಂದ ಕೇಳಿ ಬಂತು. ಇದು ವಿಶ್ವಕ್ಕೆ ಮಾದರಿಯಾಗಿದೆ ಎಂದರು.

ಮತದಾನ ಸಾಮಾನ್ಯರನ್ನು ಆಡಳಿತ ವ್ಯವಸ್ಥೆಯಲ್ಲಿ ಕೂರಿಸಿದೆ. ಮಹಾರಾಜರು ಮನೆಯಲ್ಲಿದ್ದಾರೆ. ತಮ ಕಾಲದಲ್ಲಿ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿ ಸಂಘಗಳಿಗೆ ಚುನಾವಣಾ ವ್ಯವಸ್ಥೆ ಇತ್ತು. ಆನಂತರ ಸರ್ಕಾರ ಅದನ್ನು ರದ್ದು ಮಾಡಿದೆ. ಪಂಚಾಯಿತಿಯಿಂದ ಪಾರ್ಲಿಮೆಂಟ್‌ವರೆಗೂ ನಾಯಕತ್ವವನ್ನು ಬೆಳೆಸಬೇಕೆಂದರು.

ತಾವು 7ನೇ ತರಗತಿಯಲ್ಲಿರ ಬೇಕಾದರೆ, ವಿದ್ಯಾರ್ಥಿ ಸಂಘದ ಚುನಾವಣೆಗೆ ಸ್ಪರ್ಧಿಸಿದೆ. ಆಗ ನನ್ನ ಚಿಹ್ನೆ ಸ್ಟಾರ್‌ ಆಗಿತ್ತು. ನಾನು ಸಿದ್ದರಾಮಯ್ಯ ಸೇರಿದಂತೆ ಎಲ್ಲರೂ ಪ್ರಜಾಪ್ರಭುತ್ವ ಮತದಾನದಿಂದಾಗಿಯೇ ಇಲ್ಲಿ ಇದ್ದೇವೆ. ಪ್ರತಿಯೊಂದು ಮತಕ್ಕೂ ಅಮೂಲ್ಯವಾದ ಸ್ಥಾನಮಾನವಿದೆ. ಕಾಂಗ್ರೆಸ್‌‍ನ ಧೃವನಾರಾಯಣ್‌ ಒಂದು ಮತ ಅಂತರದಲ್ಲಿ ಗೆಲುವು ಸಾಧಿಸಿ ಶಾಸಕರಾದರು. ಅವರ ಎದುರು ಸ್ಪರ್ಧಿಸಿದ್ದ ಎ.ಆರ್‌.ಕೃಷ್ಣಾಮೂರ್ತಿಯವರ ಚಾಲಕ ತಡವಾಯಿತು ಎಂದು ಮತ ಹಾಕಲಿಲ್ಲ, ಅಂದು ಅವರ ಕುಟುಂಬದ ಮೂವರು ಸದಸ್ಯರು ಬಂದು ಮತ ಹಾಕಿದರೆ, ಫಲಿತಾಂಶ ಬೇರೆಯಾಗುತ್ತಿತ್ತು ಎಂದರು.

ರಾಜಸ್ಥಾನದಲ್ಲಿ ಸಿ.ಪಿ. ಜೋಶಿ ಎರಡು ಮತಗಳ ಅಂತರದಲ್ಲಿ ಸೋಲು ಕಂಡು ಮುಖ್ಯಮಂತ್ರಿಯಾಗುವ ಅವಕಾಶ ತಪ್ಪಿಸಿಕೊಂಡರು. ಹೀಗಾಗಿ ಪ್ರತಿಯೊಬ್ಬರೂ ತಪ್ಪದೇ ಮತದಾನ ಮಾಡಬೇಕು ಎಂದು ಮನವಿ ಮಾಡಿದರು.

RELATED ARTICLES

Latest News